ಸಿದ್ದಾಪುರ, ನ. 25: ಜಿಲ್ಲೆಯಲ್ಲಿ ಅತೀ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿದ್ದಾಪುರ ಗ್ರಾಮ ಪಂಚಾಯಿತಿಯ ಹಲವು ಜಾಗಗಳು ಪಂಚಾಯಿತಿಯ ಹೆಸರಿಗೆ ದಾಖಲೆಗಳಿಲ್ಲದಿರುವದು ಕಂಡು ಬಂದಿದೆ. ಜಿಲ್ಲೆಯಲ್ಲಿ ಅತ್ಯಧಿಕ ಸದಸ್ಯರುಗಳನ್ನು ಹೊಂದಿಕೊಂಡಿರುವ ಹಾಗೂ ಅಧಿಕ ವರಮಾನ ಇರುವ ಸಿದ್ದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ಮಾರುಕಟ್ಟೆ ಸೇರಿದಂತೆ ಹಲವು ಜಾಗಗಳಿಗೆ ಈವರೆಗೂ ದಾಖಲಾಗಿಲ್ಲ. ದಾಖಲೆಗಳನ್ನು ಹೊಂದಿಕೊಳ್ಳದೇ ಪಂಚಾಯತಿಯು ದಿವ್ಯ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಬೆಟ್ಟದಷ್ಟು ಸಮಸ್ಯೆಗಳಿದ್ದರು, ಪಂಚಾಯಿತಿ ಆಡಳಿತ ಮಂಡಳಿ ಸಮಸ್ಯೆಗಳಿಗೆ ಸ್ಪಂದಿಸದೆ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಪಂಚಾಯಿತಿಯ ವ್ಯಾಪ್ತಿಯಲ್ಲಿ ಸಾಕಷ್ಟು ಜಾಗಗಳು ಪಂಚಾಯಿತಿಯ ಸ್ವಾಧೀನದಲ್ಲಿದ್ದರು ಬಹುತೇಕ ಜಾಗಗಳು ಕಂದಾಯ ಇಲಾಖೆಯ ಹೆಸರಿನಲ್ಲಿ ದಾಖಲೆಗಳು ಮುಂದುವರೆಯುತ್ತಿದೆ. ಪಂಚಾಯಿತಿ ಆಡಳಿತ ಮಂಡಳಿ ಪ್ರತಿ ಮಾಸಿಕ ಸಭೆಯಲ್ಲಿ ಅಭಿವೃದ್ಧಿಗಳ ಬಗ್ಗೆ ಚರ್ಚಿಸದೆ ಪರಸ್ಪರ ವಾಗ್ವಾದ ನಡೆಯುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ. ಇದಲ್ಲದೆ ಸಿದ್ದಾಪುರದ ಅವರೆಗುಂದ ಸೇರಿದಂತೆ ಕೆಲವು ಭಾಗಗಳಲ್ಲಿ ಬೇನಾಮಿ ಹೆಸರಿನಲ್ಲಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂಬ ದೂರುಗಳು ಕೂಡ ಕೇಳಿ ಬರುತ್ತಿದೆ.
ಮಾರುಕಟ್ಟೆಯನ್ನು ದುರಸ್ತಿ ಪಡಿಸದ ಗ್ರಾ.ಪಂ.
ಜಿಲ್ಲೆಯಲ್ಲಿ ಅತೀ ಹೆಚ್ಚು ವರಮಾನವಿರುವ ಗ್ರಾಮ ಪಂಚಾಯಿತಿಯಾಗಿರುವ ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಸೇರಿದ ಸಂತೆ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ವಾರ್ಷಿಕ ವರಮಾನ ಬರುತ್ತಿದೆ. ವರ್ಷಕ್ಕೆ ಕನಿಷ್ಟ 6 ಲಕ್ಷದಷ್ಟು ವರಮಾನ ಬರುತ್ತಿರುವ ಸಂತೆ ಮಾರುಕಟ್ಟೆ ಪ್ರಾಚೀನ ಕಾಲದ ಮಾರುಕಟ್ಟೆಯಾಗಿದೆ. ಇದನ್ನು ದುರಸ್ತಿ ಪಡಿಸುವ ಆಸಕ್ತಿಯನ್ನು ಪಂಚಾಯಿತಿ ಆಡಳಿತ ಮಂಡಳಿ ಕೈಗೊಳ್ಳುತ್ತಿಲ್ಲ ಎಂಬ ಆರೋಪವಿದೆ. ಹಳೆ ಮುರುಕಲು ಕಟ್ಟಡವನ್ನು ಹೊಂದಿಕೊಂಡಿರುವ ಸಂತೆ ಮಾರುಕಟ್ಟೆಯ ಮಳಿಗೆಗಳ ಹೆಂಚುಗಳು ಒಡೆದು ಹೋಗಿದ್ದು, ದುಸ್ಥಿತಿಯಿಂದ ಕೂಡಿದೆ. ದೂರದ ಊರಿನಿಂದ ವ್ಯಾಪಾರಕ್ಕೆ ಬರುವ ವ್ಯಾಪಾರಸ್ಥರು ಸುಂಕವನ್ನು ಪಾವತಿಸಿ ಮಳೆಗಾಲದಲ್ಲಿ ಮಳೆಯಲ್ಲಿ ನೆನೆದು ವ್ಯಾಪಾರ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ಷಂಪ್ರತಿ ಲಕ್ಷಗಟ್ಟಲೇ ವರಮಾನ ಬರುತ್ತಿರುವ ಮಾರುಕಟ್ಟೆಯ ಬಗ್ಗೆ ಆಡಳಿತ ಮಂಡಳಿ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಾಳಿ ಮಳೆಗೆ ಹೆಂಚುಗಳು ಹಾಗೂ ಶೀಟುಗಳು ಆಕಸ್ಮಿಕವಾಗಿ ಬಿದ್ದಲ್ಲಿ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಅನಾಹುತವಾಗುವ ಸಾಧ್ಯತೆ ಇದೆ. ಮಾರುಕಟ್ಟೆಯ ಸುತ್ತಲೂ ವ್ಯಾಪಾರಸ್ಥರಿಗೆ ಕೇವಲ ಹಳೆಯ ತಗಡಿನ ಶೀಟುಗಳನ್ನು ಅಳವಡಿಸಿದ್ದು, ಮಳಿಗೆಗಳಲ್ಲಿ ಸೌಲಭ್ಯದ ಕೊರತೆ ಎದ್ದು ಕಾಣುತ್ತಿದೆ. ಮಳೆಗಾಲದಲ್ಲಿ ಕೆಸರಿನಲ್ಲಿಯೇ ವ್ಯಾಪಾರಸ್ಥರು ವ್ಯಾಪಾರ ಮಾಡುವಂತ ಪರಿಸ್ಥಿತಿಯೂ ಕೂಡ ನಿರ್ಮಾಣವಾಗಿದೆ. ಗ್ರಾಹಕರು ಕೂಡ ಕೆಸರಿನಲ್ಲಿ ನಡೆದಾಡಿ ಸಾಮಗ್ರಿಗಳನ್ನು ಖರೀದಿಸುವಂತ ಕಷ್ಟಕರ ಸನ್ನಿವೇಶವಿದೆ.
ನೂತನ ಮಳಿಗೆಗಳು: ಸಿದ್ದಾಪುರದ ಗ್ರಾಮ ಪಂಚಾಯಿತಿಗೆ ಸೇರಿದ ಎಂ.ಜಿ. ರಸ್ತೆಯಲ್ಲಿ ಪಂಚಾಯಿತಿಯ ವತಿಯಿಂದ ಕೋಳಿ ಮಾಂಸ ವ್ಯಾಪಾರಸ್ಥರಿಗೆ ಮಾಂಸ ವ್ಯಾಪಾರ ಮಾಡಲೆಂದು ರೂ. 12 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ ಮಳಿಗೆಗಳು ಯಾವದೇ ವ್ಯಾಪಾರಕ್ಕೆ ಅವಕಾಶವನ್ನು ನೀಡದೇ ಇರುವ ಹಿನ್ನೆಲೆಯಲ್ಲಿ ಹಾಗೂ ಮಾಂಸ ವ್ಯಾಪಾರಿಗಳು ನೂತನ ಮಳಿಗೆಗಳಲ್ಲಿ ಮಾಂಸ ಮಾರಾಟಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಪಂಚಾಯಿತಿಯು ನಿರ್ಮಾಣ ಮಾಡಿದ ಲಕ್ಷಾಂತರ ವೆಚ್ಚದ ಮಳಿಗೆಗಳು ನಿಷ್ಪ್ರಯೋಜಕ ವಾಗಿ ನೆನೆಗುದಿಗೆ ಬಿದ್ದಿವೆ.
ಕಚೇರಿ ಒಳಗೆ ಅಭಿವೃಧ್ಧಿ!: ಸಿದ್ದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬೆಟ್ಟದಷ್ಟು ಸಮಸ್ಯೆಗಳಿವೆ. ಗ್ರಾಮ ಪಂಚಾಯಿತಿಯ ಸಭಾಂಗಣದೊಳಗೆ ಕುಳಿತುಕೊಳ್ಳಲು ಭಯವಾಗುತ್ತಿದ್ದು, ಹಳೆಯ ಹೆಂಚುಗಳು, ಮರಗಳು ಮಣ್ಣು ಹಿಡಿದಿದ್ದು ಪ್ರಾಚೀನ ಕಾಲದ ಕಟ್ಟಡವಾಗಿದ್ದು, ಸಭಾಂಗಣದ ಒಳಭಾಗದಲ್ಲಿ ಹೆಂಚುಗಳು ಕೆಳಗೆ ಬೀಳುವ ಸ್ಥಿತಿಯಲ್ಲಿವೆ. ಅಲ್ಲದೆ, ಅಧಿಕ ವರಮಾನ ಬರುತ್ತಿರುವ ಸಂತೆ ಮಾರುಕಟ್ಟೆ ಅವ್ಯವಸ್ಥೆಯಿಂದ ಕೂಡಿದೆ. ಆದರೆ ಅದರ ಬಗ್ಗೆ ಪಂಚಾಯಿತಿಯ ಆಡಳಿತ ಮಂಡಳಿ ತಲೆಕೆಡಿಸಿಕೊಳ್ಳದೇ, ಕಸವಿಲೇವಾರಿಗೆ ಸೂಕ್ತ ಜಾಗವನ್ನು ಕಂಡು ಹಿಡಿಯದೇ ಇದೀಗ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಪಂಚಾಯಿತಿಯ ಅಧ್ಯಕ್ಷರಿಗೆ ಅಭಿವೃದ್ಧಿ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ನೂತನವಾಗಿ ಪೀಠೋಪಕರಣಗಳನ್ನು ತಯಾರಿಸಿ ಆಸನಗಳನ್ನು ಕಲ್ಪಿಸಲಾಗಿದೆ. ಮೊದಲು ಗ್ರಾಮದ ಸಮಸ್ಯೆಗಳಿಗೆ ಆಸಕ್ತಿ ವಹಿಸಿ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. -ಚಿತ್ರ, ವರದಿ: ವಾಸು ಎ.ಎನ್.