ಮಡಿಕೇರಿ, ನ. 25: ಇತಿಹಾಸ ಪ್ರಸಿದ್ಧದ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಭಾನುವಾರ ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್'ನಲ್ಲಿ ವಿಜೃಂಭಿಸಿತು.
ಬೆಳಿಗ್ಗೆ 10.30ಗಂಟೆಗೆ ಬೊಟ್ಟಿಯತ್ ನಾಡು, ಬೇರಳಿ ನಾಡು ಹಾಗೂ ಕುತ್ತುನಾಡುವಿನ ತಕ್ಕ ಮುಖ್ಯಸ್ಥರು ಮೂರು ಕಡೆಯಿಂದ ರೇಷ್ಮೆ ವಸ್ತ್ರ ಹಿಡಿದು ಓಡಿ ಬಂದು ಮಂದ್'ನಲ್ಲಿರುವ ಅರಳಿ ಮರಕ್ಕೆ ಕೋಲು ಒಡೆಯುವ ಮೂಲಕ ಚಾಲನೆ ನೀಡಲಾಯಿತು. ಬಳಿಕ ಮೂರು ನಾಡಿನವರು ಒಂದಾಗಿ ಸೇರಿ ಸಾಂಪ್ರದಾಯಿಕ ಪುತ್ತರಿ ಕೋಲ್ ಒಡೆಯುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇದಕ್ಕೂ ಮೊದಲು ಮುಖ್ಯ ಅತಿಥಿ ಅಂತರಾಷ್ಟ್ರೀಯ ಕ್ರೀಡಾಪಟು ತೀತಮಾಡ ಅರ್ಜುನ್ ದೇವಯ್ಯ ಅವರನ್ನು ಕೊಡಗಿನ ಸಾಂಪ್ರದಾಯಿಕ ಒಡ್ಡೋಲಗದೊಂದಿಗೆ ವೇದಿಕೆಗೆ ಕರೆತರಲಾಯಿತು. ಮೂರು ನಾಡಿನವರ ಸಾಮೂಹಿಕ ಹುತ್ತರಿ ಕೋಲಾಟದ ಬಳಿಕ ತಾಲೂಕಿನ ವಿವಿಧ ಕಡೆ ಯಿಂದ ಆಗಮಿಸಿದ್ದ ಸ್ಪರ್ಧಿಗಳಿಂದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು. ಅಪ್ಪಚ್ಚ ಕವಿ ವಿದ್ಯಾಲಯ, ಗೋಣಿಕೊಪ್ಪ ಹಾಗೂ ವೀರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ವೀರಾಜಪೇಟೆ ತಾಲೂಕಿನ ವಿವಿಧ ಮಂದ್'ಗಳ ತಂಡಗಳು ಭಾಗವಹಿಸಿದ್ದವು. ಉಮ್ಮತಾಟ್, ಬೊಳಕಾಟ್, ಪುತ್ತರಿ ಕೋಲಾಟ್, ಪರೆಯಕಳಿ, ಬಾಳೋಪಾಟ್, ಕತ್ತಿಯಾಟ್, ಕಪ್ಪೆಯಾಟ್, ಯರವಾಟ್, ವಾಲಗತಾಟ್ ಸೇರಿದಂತೆ ಕೊಡವ ಪಾಟ್ ಪೈಪೋಟಿ ಕಾರ್ಯಕ್ರಮಗಳು ನಡೆದವು.
ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಬೊಟ್ಟಿಯತ್ ಮೂಂದ್ ನಾಡ್ ಅಧ್ಯಕ್ಷ ಅಡ್ಡಂಡ ಜಾಲಿ ತಿಮ್ಮಯ್ಯ ವಹಿಸಿದ್ದದ್ದರು. ಬೆಂಗಳೂರಿನ ಉದ್ಯಮಿ ಕಡೇಮಾಡ ಕನಸ್ಸು ದೇವಯ್ಯ, ಕೊಡವ ಸಾಹಿತ್ಯ ಆಕಾಡೆಮಿ ಸದಸ್ಯ ಉಮೇಶ್ ಕೇಚಮಯ್ಯ, ಕುತ್ತ್'ನಾಡ್ ತಕ್ಕ ರಮೇಶ್ ಅಚ್ಚಪ್ಪ, ಬೇರಳಿನಾಡ್ ತಕ್ಕ ಮಳವಂಡ ಪ್ರಭು ಪೂಣಚ್ಚ ಕಾರ್ಯದರ್ಶಿ ಮೂಕಚಂಡ ಅರುಣ್ ಅಪ್ಪಣ್ಣ ಸೇರಿದಂತೆ ವಿವಿಧ ಊರು ತಕ್ಕರು ಉಪಸ್ಥಿತರಿದ್ದರು. ಕೊಡಂದೇರ ಬಾಂಡ್ ಗಣಪತಿ ಹಾಗೂ ಅಪ್ಪಡೇಂರಂಡ ಮನು ಮೋಹನ್ ನಿರೂಪಿಸಿದರು.