ಮಡಿಕೇರಿ, ನ. 25: ಮುಂಗಾರಿನ ಮಹಾಮಳೆಯಿಂದ ಆಸ್ತಿಪಾಸ್ತಿಗಳನ್ನು ಕಳೆದುಕೊಂಡ 20 ಸಂತ್ರಸ್ತ ಕುಟುಂಬಗಳಿಗೆ ಬೆಂಗಳೂರು ಗ್ರಾಮೀಣ ಭಾಗದ ಮಾರೇನಹಳ್ಳಿ ಗ್ರಾಮ ಪಂಚಾಯ್ತಿಯಿಂದ ಒಟ್ಟು 2 ಲಕ್ಷ ರೂ.ಗಳ ಪರಿಹಾರ ಧನವನ್ನು ವಿತರಿಸಲಾಯಿತು.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಆಯೋಜಿತ ಸರಳ ಕಾರ್ಯಕ್ರಮದಲ್ಲಿ ಮಾರೇನಹಳ್ಳಿ ಗ್ರಾಪಂ ಅಧ್ಯಕ್ಷ ಪುಟ್ಟು ಆಂಜನಪ್ಪ, ಸದಸ್ಯರು ಮತ್ತು ಪಂಚಾಯ್ತಿ ಕಾರ್ಯದರ್ಶಿ ಪ್ರತಿ ಕುಟುಂಬಕ್ಕೆ ತಲಾ 10 ಸಾವಿರ ರೂ.ಗಳಂತೆ ಪರಿಹಾರ ಧನವನ್ನು ನೀಡಿದರು.
ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಮುಂದಾದ ಮಾರೇನಹಳ್ಳಿ ಗ್ರಾಪಂ ಅಧ್ಯಕ್ಷ ಪುಟ್ಟು ನಂಜಪ್ಪ ಅವರು ಮಡಿಕೆÉೀರಿಯ ಕನ್ನಂಡ ಬೊಳ್ಳಪ್ಪ ಅವರನ್ನು ಸಂಪರ್ಕಿಸಿ, ಪ್ರಾಕೃತಿಕ ವಿಕೋಪದ ಬಗ್ಗೆ ಮಾಹಿತಿ ಪಡೆದರಲ್ಲದೆ, ಮಾರೇನಹಳ್ಳಿ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರಿಂದ ನೆರವಿನ ಹಣವನ್ನು ಸಂಗ್ರಹಿಸಿದ್ದರು.
ದಿನದ ಹಿಂದೆಯಷ್ಟೆ ಜಿಲ್ಲೆಗೆ ಆಗಮಿಸಿದ ಮಾರೇನಹಳ್ಳಿ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಕನ್ನಂಡ ಬೊಳ್ಳಪ್ಪ ಅವರ ಸಹಕಾರದೊಂದಿಗೆ ಮಕ್ಕಂದೂರು, ಉದಯಗಿರಿ, ಕಾಲೂರು, ಹೆಬ್ಬೆಟ್ಟಗೇರಿ, ದೇವಸ್ತೂರು, ಮುಕ್ಕೋಡ್ಲು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಹಾನಿಯ ಬಗ್ಗೆ ಪರಿಶೀಲನೆ ನಡೆಸಿ, ಭಾನುವಾರ ಸಂತ್ರಸ್ತ ಕುಟುಂಬಗಳಿಗೆ ನೆರವಿನ ಮೊತ್ತವನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷರಾದ ಲಕ್ಷ್ಮೀನರಸಮ್ಮ, ಸದಸ್ಯರುಗಳಾದ ಮುನೀರಾಮ್, ಮಂಜುನಾಥ್, ಸೋಮಶೇಖರ್, ಶಿವ ಕುಮಾರ್, ಕೃಷ್ಣಪ್ಪ, ರಮೇಶ್, ರಾಮಲಿಂಗ, ದೊಡ್ಡಪಿಳ್ಳಪ್ಪ, ಕಾರ್ಯದರ್ಶಿ ರಂಗಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು.