ಗೋಣಿಕೊಪ್ಪ ವರದಿ, ನ. 25: ವೀರಾಜಪೇಟೆ ತಾಲೂಕಿನಾದ್ಯಂತ ಲೈನ್ ಮನೆಗಳಲ್ಲಿ ವಾಸವಿರುವ ಕಾರ್ಮಿಕರಿಗೆ ಸರಕಾರ ವಶಪಡಿಸಿಕೊಂಡಿರುವ ಭೂಮಿಯನ್ನು ನಿವೇಶನಗಳಾಗಿ ಹಂಚುವಂತೆ ಒತ್ತಾಯಿಸಿ ತಾ. 28 ರಂದು ವೀರಾಜಪೇಟೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವದು ಎಂದು ದಸಂಸ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿಭಟನೆ ಬೆಳಿಗ್ಗೆ 10.30ಕ್ಕೆ ಚೌಕಿಯಿಂದ ಮೆರವಣಿಗೆ ಮೂಲಕ ಆರಂಭಗೊಂಡು ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಲಾಗುವದು. ಮುಖ್ಯಮಂತ್ರಿಗಳು ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸುವ ತನಕ ಧರಣಿ ಹಿಂಪಡೆಯುವದಿಲ್ಲ ಎಂದು ಹೇಳಿದರು.
ವಿಭಾಗೀಯ ಸಂಚಾಲಕ ಹೆಚ್.ಆರ್. ಕೃಷ್ಣಪ್ಪ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಜಿಲ್ಲೆಯಾದ್ಯಂತ ಭೂಮಿಯನ್ನು ಭೋಗ್ಯಕ್ಕೆ ಕೊಡಲಾಗಿತ್ತು. ಕೆಲವು ಪ್ರಕರಣಗಳಲ್ಲಿ ಅವಧಿ ಮುಗಿದ ನಂತರವು ಮಾಲೀಕರು ಭೂಮಿಯನ್ನು ಅನುಭವಿಸುತ್ತಿದ್ದಾರೆ. ಸರ್ಕಾರ ಇಂತಹ ಪ್ರಕರಣಗಳನ್ನು ಗುರುತಿಸಿ ವಸತಿರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದರು.
ಭೂಮಾಲೀಕರು ಕಾರ್ಮಿಕರ ಗುರುತಿನ ಚೀಟಿಗಳನ್ನು ವಶದಲ್ಲಿಟ್ಟುಕೊಂಡು ಬಡಕುಟುಂಬಗಳನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಹಲವೆಡೆ ಮಕ್ಕಳನ್ನು ಶಾಲೆಗಳಿಗೆ ಹೋಗದಂತೆ ಮಾಡಿ ದುಡಿಸಿಕೊಳ್ಳಲಾಗುತ್ತಿದೆ. ಸರ್ಕಾರ ಇಂತಹ ಪ್ರಕರಣಗಳ ಬಗ್ಗೆ ನಿಗಾವಹಿಸಿ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ವ್ಯವಸ್ಥೆ ಮಾಡಬೇಕು. ಕಾರ್ಮಿಕರಾಗಿ ದುಡಿಯುತ್ತಿರುವ ಅಪ್ರಾಪ್ತ ಮಕ್ಕಳ ಸಮೀಕ್ಷೆ ನಡೆಸಿ ಸೂಕ್ತ ಕಾನೂನುಗಳನ್ನು ರೂಪಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಸಂಘಟನಾ ಸಂಚಾಲಕ ಹೆಚ್.ಆರ್ ಮುತ್ತಯ್ಯ ಹಾಗೂ ಸದಸ್ಯ ಪಿ.ಯಂ. ಗಣೇಶ್ ಇದ್ದರು.