ಕೂಡಿಗೆ, ನ. 22: ವರ್ಣರಂಜಿತವಾದ, ಏಕತೆಯಲ್ಲಿ ಐಕ್ಯತೆಯನ್ನು ಹೊಂದಿರುವ ಭಾರತದಲ್ಲಿ ಪರಸ್ಪರ ಸಹಬಾಳ್ವೆಯ ಜೀವನ ಸಾಗಿಸಲು, ನೈಜ್ಯವಾದ ಬದುಕಿಗೆ ಧರ್ಮಗಳು ಸಹ ಸಹಕಾರಿಯಾಗುತ್ತವೆ. ಅದರೊಂದಿಗೆ ರಾಷ್ಟ್ರ ಪ್ರೇಮದ ಸೌಹಾರ್ದ ಬದುಕು ಸಾಗಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಬಸವನಹಳ್ಳಿ ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್. ರಾಜಾರಾವ್ ಹೇಳಿದರು.

ಕೂಡಿಗೆಯ ಮೊಯಿದೀನ್ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮೊಯಿದೀನ್ ಜುಮಾ ಮಸೀದಿ ಆವರಣದಲ್ಲಿ ಏರ್ಪಡಿಸಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, ಧರ್ಮದ ನೌಜ್ಯ ಗುಣಗಳನ್ನು ಅರಿತು, ಎಲ್ಲರೂ ಒಂದೇ ಎಂಬಂತೆ ಬಾಳಬೇಕು ಎಂದರು. ಮುಖ್ಯ ಭಾಷಣಕಾರರಾಗಿದ್ದ ಸೋಮವಾರಪೇಟೆ ತಣ್ಣೀರುಹಳ್ಳದ ಶಾಫಿ ಸಅದಿ ಅವರು ಮಾತನಾಡಿ, ಹಿಂದೂ, ಕ್ರಿಶ್ಚಿಯನ್, ಮುಸಲ್ಮಾನ್ ಧರ್ಮಗಳ ಗ್ರಂಥಗಳು ಸಮಾನತೆಯ ಸಂದೇಶಗಳನ್ನು ಸಾರಿವೆ. ಇವುಗಳನ್ನು ಓದುವದರ ಮೂಲಕ ತತ್ವಸಿದ್ಧಾಂತಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ದೇಶ ಪ್ರೇಮಿಗಳಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಪಿ. ಅಮೀರ್ ಆಲಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಇ.ಆರ್. ಅಬ್ದುಲ್‍ಖಾದರ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್‍ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಕೂಡಿಗೆ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್ ಕುಮಾರ್, ಕೂಡಿಗೆ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ. ಡಿ.ಸಿ. ರವಿಚಂದ್ರ, ಗ್ರಾ.ಪಂ. ಸದಸ್ಯ ರಾಮಚಂದ್ರ, ಕುಶಾಲನಗರ ಆರ್.ಎಂ.ಸಿ. ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್, ಐಎನ್‍ಟಿಯೂಸಿ ಜಿಲ್ಲಾಧ್ಯಕ್ಷ ಟಿ.ಪಿ. ಹಮೀದ್, ಕೂಡಿಗೆ ಚರ್ಚ್ ಸಮಿತಿ ಅಧ್ಯಕ್ಷ ಕೆ.ಎ. ಪೀಟರ್, ಗುತ್ತಿಗೆದಾರ ದಿನೇಶ್ ಮತ್ತಿತರರು ಇದ್ದರು.