ಅದು ಎರಡು ದಶಕಗಳ ಹಿಂದಿನ ದಿನಗಳು... ಮರಗೋಡು ಎಂಬ ಗ್ರಾಮದ ಹೆಸರು ಕೇಳಿದರೆ ಸಾಕು ಥಟ್ಟನೆ ನೆನಪಾಗುತ್ತಿದ್ದುದು ಸಂಗಂ ಟ್ರೋಫಿ ಫುಟ್ಬಾಲ್. ಹೌದು ಈ ಗ್ರಾಮದಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಸಂಗಂಟ್ರೋಫಿ ಫುಟ್ಬಾಲ್ ಬರೇ ಕೊಡಗು ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯಮಟ್ಟದಲ್ಲೂ ಪ್ರಸಿದ್ಧಿ ಪಡೆದಿತ್ತು. ರಾಜ್ಯ, ರಾಷ್ಟ್ರೀಯ ಮಟ್ಟದ ಸ್ಟಾರ್ ಆಟಗಾರರು ಇಲ್ಲಿಗೆ ಆಗಮಿಸಿ ಆಟವಾಡಿ ಫುಟ್ಬಾಲ್ ಅಭಿಮಾನಿಗಳಿಗೆ ರಸÀದೌತಣ ಉಣಬಡಿಸುತ್ತಿದ್ದರು.

ಆದರೆ ಬದಲಾದ ಕಾಲಘಟ್ಟದಲ್ಲಿ ಸಂಗಂ ಟ್ರೋಫಿ ಇತಿಹಾಸದ ಪುಟ ಸೇರಿತು. ಮರಗೋಡಿನಲ್ಲಿ ಫುಟ್ಬಾಲ್ ಆಟ ಕ್ಷೀಣಗೊಂಡಿತ್ತು. ಆದರೆ ಇದೀಗ ‘ಹಿಸ್ಟರಿ ರಿಪೀಟ್ಸ್’ ಎಂಬಂತೆ ಈ ಗ್ರಾಮದಲ್ಲಿ ಫುಟ್ಬಾಲ್ ಗತವೈಭವ ಮರುಕಳಿಸಿದೆ. ಕಳೆದ ಎರಡು ಮೂರು ವರ್ಷಗಳಿಂದ ಸ್ಥಳೀಯ ಯುವಕರು ಒಗ್ಗೂಡಿ ಜಿಲ್ಲಾಮಟ್ಟದ ಪಂದ್ಯಾಟಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದಾರೆ. ಇದರಿಂದ ಉತ್ತೇಜಿತರಾಗಿರುವ ಈ ಯುವ ಮನಸ್ಸುಗಳು ಇದೀಗ ಜಿಲ್ಲಾಮಟ್ಟದ ಅದ್ಧೂರಿ ಫುಟ್ಬಾಲ್ ಪಂದ್ಯಾಟ ಆಯೋಜಿಸಿದೆ. ಹುತ್ತರಿ ಕಪ್ ಹೆಸರಿನಲ್ಲಿ ಕೊಡಗಿನ ಸಾಂಪ್ರದಾಯಿಕ ಹುತ್ತರಿ ಹಬ್ಬಕ್ಕೆ ಕ್ರೀಡಾ ಮೆರುಗು ನೀಡುತ್ತಿದ್ದಾರೆ. ತಾ. 23ರಿಂದ (ಇಂದಿನಿಂದ) ತಾ. 25ರ ತನಕ ಪಂದ್ಯಾಟ ನಡೆಯಲಿದೆ.

ಮರಗೋಡು ಯುವಕರ ಕಠಿಣ ಪರಿಶ್ರಮ

ಇಂದು ಮರಗೋಡು ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ಸಂಜೆ ವೇಳೆ ನೋಡಿದರೆ ಕನಿಷ್ಟ 30 ರಿಂದ 40 ಮಂದಿ ಯುವಕರು ಫುಟ್ಬಾಲ್ ಅಭ್ಯಾಸದಲ್ಲಿ ನಿರತರಾಗಿರುತ್ತಾರೆ. ಸಂಜೆ 4.30 ರಿಂದ 6.30ರವರೆಗೆ ಇವರ ಕಠಿಣ ಅಭ್ಯಾಸ ನಡೆಯುತ್ತದೆ. ಒಂದೇ ಗ್ರಾಮದಲ್ಲಿ ಇಷ್ಟೊಂದು ಸಂಖ್ಯೆಯ ಯುವಕರು ಕಾಲ್ಚೆಂಡು ಆಡಲು ಪ್ರತಿನಿತ್ಯ ಬರುವದು ತೀರಾ ಅಪರೂಪ. ಹಾಗೆ ನೋಡಿದರೆ ಕಳೆದ ವರ್ಷದವರೆಗೂ ಈ ಗ್ರಾಮದಲ್ಲಿ ಫುಟ್ಬಾಲ್ ಬೆಳವಣಿಗೆ ಆಶಾದಾಯಕವಾಗಿರಲಿಲ್ಲ. ಮೂರು ವರ್ಷಗಳ ಹಿಂದೆ ಐದಾರು ಫುಟ್ಬಾಲ್ ಆಸಕ್ತ ಯುವಕರು ಮರಗೋಡಿನ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕಾಲ್ಚೆಂಡು ಆಡಲು ಆರಂಭಿಸುತ್ತಾರೆ. ಆದರೆ ಆಟವಾಡಲು ಸಾಕಷ್ಟು ಮಕ್ಕಳಿಲ್ಲದೆ ಪರದಾಡುತ್ತಾರೆ.

ವರ್ಷ ಕಳೆಯುವಷ್ಟರಲ್ಲಿ ಈ ಆಟಗಾರರ ಸಂಖ್ಯೆ 20ಕ್ಕೇರುತ್ತದೆ. ಹಾಗಾಗಿ ವೈಷ್ಣವಿ ಫುಟ್ಬಾಲ್ ಕ್ಲಬ್ (ಕಿಕ್ಕರ್ಸ್ ಫುಟ್ಬಾಲ್ ಕ್ಲಬ್ ಎಂತಲೂ ಹೆಸರಿದೆ) ಹೆಸರಿನಲ್ಲಿ ಸಂಘವೊಂದನ್ನು ಸ್ಥಾಪಿಸಿ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯಡಿ ನೋಂದಾಯಿಸಿಕೊಳ್ಳುತ್ತಾರೆ. ಪ್ರತಿನಿತ್ಯ ಅಭ್ಯಾಸ ನಡೆಸಿ ಜಿಲ್ಲೆಯ ಹಲವೆಡೆ ಪಂದ್ಯಾಟಗಳಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನೂ ಜಯಿಸುತ್ತಾರೆ. ಅದಾದ ಬಳಿಕ ತಾವೂ ಕೂಡ ಇದೇ ಮೈದಾನದಲ್ಲಿ ಹಲವು ಫುಟ್ಬಾಲ್ ಪಂದ್ಯಾಟಗಳನ್ನು ಆಯೋಜಿಸಿ ಯಶಸ್ವಿಯಾಗುತ್ತಾರೆ. ಅಲ್ಲಿಂದ ಆರಂಭವಾದ ಇವರ ಯಶಸ್ಸಿನ ಅಭಿಯಾನ ಇಂದು 32 ತಂಡಗಳ ಅದ್ಧೂರಿ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟ ಆಯೋಜಿಸುವಷ್ಟರ ಮಟ್ಟಿಗೆ ಬಂದು ನಿಂತಿದೆ.

ಈ ಹಿಂದೆ ವಿಶ್ವವಿದ್ಯಾನಿಲಯ ತಂಡವನ್ನು ಪ್ರತಿನಿಧಿಸಿದ್ದ ಪಾಣತ್ತಲೆ ಜಗದೀಶ್ ಮಂದಪ್ಪ, ಬಡುವಂಡ್ರ ಸುಜಯ್, ಜೊತೆಗೆ ಕಟ್ಟೆಮನೆ ರಾಕೇಶ್, ಬಡುವಂಡ್ರ ದುಷ್ಯಂತ್ ಸೇರಿದಂತೆ ಹಲವು ಉತ್ಸಾಹಿ ಯುವಕರು ಈ ತಂಡವನ್ನು ಕಟ್ಟಿ ಬೆಳೆಸುವಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ.

ಆರ್ಥಿಕ ಅಡಚಣೆ ಇದ್ದರೂ ಕುಸಿಯದ ಉತ್ಸಾಹ

30 ಕ್ಕೂ ಅಧಿಕ ಯುವಕರು ಪ್ರತಿನಿತ್ಯ ಫುಟ್ಬಾಲ್ ಆಡಲು ಬೇಕಾದ ಸೌಲಭ್ಯಗಳನ್ನು ತಮಗೆ ತಾವೇ ಕಲ್ಪಿಸಿಕೊಳ್ಳುವದು ಸುಲಭದ ಮಾತಲ್ಲ ಕ್ರೀಡಾಂಗಣದ ನಿರ್ವಹಣೆ, ಮತ್ತು ಪಂದ್ಯಾವಳಿಗೆ ತೆರಳಿದಾಗ ಬೇಕಾಗುವ ಖರ್ಚುವೆಚ್ಚಗಳು ಹೀಗೆ ವರ್ಷಕ್ಕೆ ಇವರ ವೆಚ್ಚ 50 ಸಾವಿರ ದಾಟುತ್ತದೆ. ಬಹಳಷ್ಟು ಬಾರಿ ಸಂಘದ ಹಿರಿಯರು ತಮ್ಮ ಜೇಬಿನಿಂದಲೇ ಈ ಖರ್ಚುವೆಚ್ಚ ಭರಿಸಿದ್ದಾರೆ. ಇದೀಗ ಬಹುತೇಕ ವಿದ್ಯಾರ್ಥಿಗಳೇ ತುಂಬಿರುವ ಈ ತಂಡದ ಪ್ರತಿಯೊಬ್ಬರು ತಿಂಗಳಿಗೆ ತಲಾ 100 ರೂ ಸಂಗ್ರಹ ಮಾಡಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಡುತ್ತಿದ್ದಾರೆ. ಆದರೂ ಆ ಮೊತ್ತ ಯಾವುದಕ್ಕೂ ಸಾಕಾಗುತ್ತಿಲ್ಲ. ಅಷ್ಟು ಮಾತ್ರವಲ್ಲ ತೀವ್ರ ಆರ್ಥಿಕ ಅಡಚಣೆ ಇದ್ದರೂ ತಮ್ಮ ತಂಡದಲ್ಲಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ನೆರವು ನೀಡುತ್ತಿದ್ದಾರೆ. ಹೀಗೆ ಕ್ರೀಡೆಯೊಂದಿಗೆ ಮಾನವೀಯ ಗುಣಗಳನ್ನೂ ಈ ಯುವ ಮನಸ್ಸುಗಳು ಹೊಂದಿವೆ.

ಈ ಬಾರಿ ಹುತ್ತರಿ ಕಪ್ ಸಂಭ್ರಮ

ಎರಡು ವರ್ಷಗಳ ಹಿಂದೆ ಹೊಸ ವರ್ಷಾಚರಣೆ ಸಂದರ್ಭ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿ ಗಮನ ಸೆಳೆದಿದ್ದ ಈ ಯುವಕರು ಈ ಬಾರಿ ಹುತ್ತರಿ ಹಬ್ಬದ ಪ್ರಯುಕ್ತ ಜಿಲ್ಲಾಮಟ್ಟದ ಹುತ್ತರಿ ಕಪ್ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿದೆ. 32 ತಂಡಗಳು ಪ್ರಶಸ್ತಿಗಾಗಿ ಸೆಣಸಾಡುತ್ತಿವೆ. ಸರ್ಕಾರದಿಂದ ಚಿಕ್ಕಾಸು ನೆರವಿಲ್ಲದೆ ಕೇವಲ ಪ್ರಾಯೋಜಕರು, ಊರಿನವರು ಮತ್ತು ತಾವೇ ಹಣ ಸಂಗ್ರಹಿಸಿ ಪಂದ್ಯಾವಳಿ ಆಯೋಜಿಸುತ್ತಿದ್ದಾರೆ. ಮುಂದೊಂದು ದಿನ ನಮ್ಮೂರಿನ ಪ್ರತಿಭಾವಂತ ಆಟಗಾರರು ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸುವಂತಾಗಬೇಕೆಂಬುದು ಇವರ ಒತ್ತಾಸೆ. ಇವರಿಗೆ ಸರ್ಕಾರ, ಸಂಘ ಸಂಸ್ಥೆ ಮತ್ತು ಸಹೃದಯರ ನೆರವಿನ ಅಗತ್ಯವಿದೆ.

-ಐಮಂಡ ಗೋಪಾಲ್ ಸೋಮಯ್ಯ, ಮರಗೋಡು