ಕೂಡಿಗೆ, ನ. 22: ವಿಶ್ವ ಮಕ್ಕಳ ಹಕ್ಕುಗಳ ದಿನಾಚರಣೆಯ ಅಂಗವಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳ್ಳೂರಿನಲ್ಲಿ ಮಕ್ಕಳ ನಾಟಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಧುಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಶಿಕ್ಷಕ ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಆಯೋಜಕ ಶಿಕ್ಷಕ ಸಿ.ಎಸ್. ಸತೀಶ ಮಾತನಾಡಿ, ಸಹಜವಾದ ಬೇಕು ಬೇಡಿಕೆಗಿಂತಲೂ ನಮ್ಮ ಒತ್ತಾಯಪೂರ್ವಕ ಏರಿಕೆಗಳು ಮಕ್ಕಳ ತುಂಟತನದ ಬಾಲ್ಯವನ್ನೇ ಬಲಿ ತೆಗೆದುಕೊಂಡಿದೆ ಮಕ್ಕಳ ಸಹಜ ಕುತೂಹಲವನ್ನು ತಣಿಸುವ ತಾಳ್ಮೆ ಪೋಷಕರಿಗಿಲ್ಲದಂತಾಗಿದೆ. ಇಂದಿನ ಮಕ್ಕಳು ನೋಡುತ್ತಿರುವ ಕಾರ್ಟೂನ್, ಹಾರರ್, ಕಾಮಿಕ್ಸ್ ಮತ್ತು ಸೀರಿಯಲ್‍ಗಳು ಮಕ್ಕಳಲ್ಲಿ ನೈತಿಕತೆಯನ್ನು ಬೆಳೆಸಬಲ್ಲೇದೆ ಎನ್ನುವದು ಬಹುಮುಖ್ಯ ಪ್ರಶ್ನೆಯಾಗಿದೆ ಎಂದರು.
ನಾಟಕೋತ್ಸವದಲ್ಲಿ ಮುಖ್ಯವಾಗಿ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಜೀತಗಾರಿಕೆ, ಮಕ್ಕಳ ಅಪೌಷ್ಟಿಕತೆ ಮತ್ತು ಹಸಿವಿನಿಂದ ಮಕ್ಕಳ ಮರಣವನ್ನು ಬಿಂಬಿಸುವ ನಾಟಕಗಳು ಜಾಗೃತಿ ಮೂಡಿಸಿದವು.