ಮಡಿಕೇರಿ, ನ. 22: ಮರಗೋಡು ಗ್ರಾಮದ ಭಾರತೀ ಹೈಸ್ಕೂಲ್ ಸೊಸೈಟಿ ವಿದ್ಯಾಸಂಸ್ಥೆಯಲ್ಲಿ ಕಲೆಗಳ ಕಲರವ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ್ದ ಯುವ ಸೌರಭ ಕಾರ್ಯಕ್ರಮದಲ್ಲಿ ವಿದ್ವಾನ್ ದಿಲೀಕುಮಾರ್ ಅವರ ಶಾಸ್ತ್ರೀಯ ಗಾಯನ, ಸತೀಶ್ ಅವರ ಶಾಸ್ತ್ರೀಯ ವಾದ್ಯ ಸಂಗೀತ ಕೇಳುಗರನ್ನು ಮುಗ್ದರನ್ನಾಗಿ ಮಾಡಿದರೆ, ಕೊಡವ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಬೊಳಕಾಟ್, ಕತ್ತಿಯಾಟ್ ನೃತ್ಯ ಮನಸ್ಸಿಗೆ ಮುದ ನೀಡಿತು. ಮೈಸೂರು ಜಿಲ್ಲೆ ಸನ್ಯಾಸಪುರ ಯುವಕರಿಂದ ಡೊಳ್ಳುಕುಣಿತ, ನಂಜನಗೂಡಿನ ಕಲಾವಿದರಿಂದ ಕಂಸಾಳೆ, ಶಾಂತಳ್ಳಿ ಗಣೇಶ್ ಅವರ ಗಾಯನ ಷಡಾಕ್ಷರಯ್ಯ ಜಾನಪದ ಗೀತೆ ಎಲ್ಲೊ ಜೋಗಪ್ಪ ನಿನ್ನ ಅರಮನೆ ಮುಂತಾದ ಗೀತೆಗಳ ಗಾಯನ ತಲೆತೂಗುವಂತಿತ್ತು. ಅಳುವಾರದ ಗಣೇಶ್ ಅವರ ರಂಗಗೀತೆ, ಕೋಲಾಟ ಶಿವಮೊಗ್ಗ ಸಾಗರದ ಗುಡ್ಡಪ್ಪ ಸಂಗಡಿಗರ ಜೋಗಿ ಹಾಡುಗಳು, ಗೀಗೀಪದ, ಜಾನಪದ ಹಾಡುಗಳು ಗಮನ ಸೆಳೆದದವು. ಮರಗೋಡಿನ ಕಾಲೇಜು ಆವರಣದಲ್ಲಿ ಸಂಸ್ಕøತಿ ಹಬ್ಬದ ವಾತಾವರಣದಲ್ಲಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ರಪಣೆ ಮೋಹನ್ ಉದ್ಘಾಟಿಸಿದರು.ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ ಪ್ರಾಸ್ತಾವಿಕ ಮಾತನಾಡಿದರು.ಕಾಫಿ ಪ್ಲಾಂಟರ್, ಸಾಂಬಾರ ಮಂಡಳಿ ನಿವೃತ್ತ ಅಧಿಕಾರಿ ಚೆಟ್ಟಳ್ಳಿಯ ಗಿರೀಶ್‍ಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆಂಚಪ್ಪ, ಎ.ಸಿ. ರಾಘವಯ್ಯ ಮಾತನಾಡಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಲಾವಿದರಿಂದ ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಮಣಜೂರು ಮಂಜುನಾಥ್ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ ಸ್ವಾಗತಿಸಿದರು. ಪ್ರಾಂಶುಪಾಲರಾದ ಬೆಳ್ಳಿಯಪ್ಪ ಅವರು ವಂದಿಸಿದರು.