ಕೂಡಿಗೆ, ನ. 22: ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಬ್ಯಾಡಗೊಡ್ಡ ಗ್ರಾಮದ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈಗಾಗಲೇ ಪುನರ್ವಸತಿ ಕುಟುಂಬಗಳಿಗೆ ಮನೆಗಳ ಕಟ್ಟುವಿಕೆ ಕಾರ್ಯ ಶೇ. 90 ರಷ್ಟು ಮುಗಿದಿದ್ದು, ಇದೀಗ ಒಳಚರಂಡಿ ಹಾಗೂ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಒಳಚರಂಡಿಯ ಸಂಸ್ಕರಣಾ ಘಟಕಕ್ಕೆ ಗುರುತು ಮಾಡಿರುವ ಜಾಗದಲ್ಲಿ ಬೃಹತ್ತಾದ ಮರಗಳಿರುವದರಿಂದ ಕಾಮಗಾರಿ ನಡೆಸಲು ಅಡಚಣೆಯುಂಟಾಗುತ್ತಿದ್ದು, ಇದಕ್ಕೆ ಸಂಬಂಧಪಟ್ಟ ಪತ್ರ ವ್ಯವಹಾರವನ್ನು ಅರಣ್ಯ ಇಲಾಖೆಯವರಿಗೆ ನಡೆಸಲಾಗಿದೆ. ಇದರಿಂದಾಗಿ ಒಳಚರಂಡಿ ಕಾಮಗಾರಿಯನ್ನು ನಡೆಸಲು ಮರ ತೆರವುಗೊಳಿಸಬೇಕಾಗಿದೆ ಎಂದು ದಿಡ್ಡಳ್ಳಿಯ ಪ್ರಮುಖರಾದ ಅಪ್ಪು, ಮಲ್ಲಪ್ಪ, ಗಿರೀಶ್, ಜಯಣ್ಣ ಸೇರಿದಂತೆ ಹಲವರು ಸಂಬಂಧಪಟ್ಟ ಇಲಾಖೆಯವರ ಬಳಿ ಆಗ್ರಹಿಸಿದ್ದಾರೆ.