ಮಡಿಕೇರಿ, ನ. 22: ಸಮರ್ಥ ಕನ್ನಡಿಗರು ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಓಂಕಾರ ಸದನದಲ್ಲಿ ಕೊಡಗಿಗಾಗಿ ನಾವು ಸಾಹಿತ್ಯ, ಸಾಂಸ್ಕೃತಿಕ ಜಾಗೃತಿ ಕಾರ್ಯಕ್ರಮ ನಡೆಯಿತು.ಇದರ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಜರುಗಿತು.

ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಅನಾವರಣಗೊಳ್ಳಬೇಕಾದರೆ ಸಂಘ ಸಂಸ್ಥೆಗಳ ಪಾತ್ರ ಬಹುಮುಖ್ಯವಾಗಿದೆ. ಆ ಸಂಸ್ಥೆಗಳನ್ನು ಹುಟ್ಟು ಹಾಕುವದು ಸುಲಭ. ಆದರೆ ನಿರ್ಭೀತಿಯಿಂದ ನಡೆಸಿಕೊಂಡು ಹೋಗುವದು ಕಷ್ಟ ಎಂದು ಹೇಳಿದರು.

ಸಮರ್ಥ ಕನ್ನಡಿಗರ ಸಂಸ್ಥೆಯ ಸಂಸ್ಥಾಪಕ ಲಿಂಗೇಶ್ ಹುಣಸೂರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿ ಪರಿಹಾರ ವಿತರಣೆ ಸಂದರ್ಭ ಸಮರ್ಥ ಕನ್ನಡಿಗರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಕೊಡಗಿನ ನೋವನ್ನು ಮರೆತು ಖುಷಿಯಿಂದ ಇರಬೇಕು. ಈ ಹಿನ್ನೆಲೆಯಲ್ಲಿ ಕೊಡಗಿಗಾಗಿ ನಾವು ಎಂಬ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಪ್ರಥಮವಾಗಿ ಗೃಹಿಣಿಯರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಸಮರ್ಥ ಕನ್ನಡಿಗರಿಂದ ಆಯೋಜಿಸಲಾಗಿದೆ ಎಂದು ಹೇಳಿದರು.

ಸಮರ್ಥ ಕನ್ನಡಿಗರು ಕೊಡಗು ಜಿಲ್ಲಾ ಘಟಕದ ಸಂಚಾಲಕಿ ಜಯಲಕ್ಷಿ ಮಾತನಾಡಿ ಸಂಸ್ಥೆ ಹುಟ್ಟಿ ಮೂರು ವರ್ಷವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಮೂರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ನಡೆಸಿದ ಮಕ್ಕಳ ಕವಿಗೋಷ್ಠಿಯಲ್ಲಿ ಸುಮಾರು 86 ಮಕ್ಕಳು ಪಾಲ್ಗೊಂಡಿದ್ದರು. ಪ್ರಕೃತಿ ವಿಕೋಪವಾದ ಸಂದರ್ಭ ಸಮರ್ಥ ಕನ್ನಡಿಗರ ತಂಡ ಪರಿಹಾರ ಕೇಂದ್ರಗಳಲ್ಲಿ ಸೇವೆ ಮಾಡಿದ್ದೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ದಾಮೋದರ್, ಚುಟುಕು ಸಾಹಿತಿ ಹಾತಿ ಜಯಪ್ರಕಾಶ್ ಮತ್ತಿತರರು ಹಾಜರಿದ್ದರು.

ಪ್ರಶಸ್ತಿ ವಿಜೇತರ ವಿವರ : 1 ರಿಂದ 4 ತರಗತಿ ಮಕ್ಕಳಿಗೆ ನಡೆದ ಸಮೂಹ ಗಾಯನ ಸ್ಪರ್ಧೆಯಲ್ಲಿ ಪಾವನಿ ಮತ್ತು ತಂಡ ಪ್ರಥಮ, ಶಿವಕುಮಾರ್ ಮತ್ತು ತಂಡ ದ್ವಿತೀಯ, ಸುಬ್ಬಯ್ಯ ಮತ್ತು ತಂಡ ತೃತೀಯ, 5ರಿಂದ7ನೇ ತರಗತಿ ಮಕ್ಕಳಿಗೆ ನಡೆದ ಸ್ಪರ್ಧೆಯಲ್ಲಿ ಶ್ರೀದೇವಿ ಮತ್ತು ತಂಡ ಪ್ರಥಮ, ವಿದ್ಯಾ ಮತ್ತು ತಂಡ ದ್ವಿತೀಯ ಹಾಗೂ ವಂಶಿ ಮತ್ತು ತಂಡ ತೃತೀಯ ಬಹುಮಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಸ್ಫೂರ್ತಿ ಮಹಿಳಾ ತಂಡ ಪ್ರಥಮ, ಅರವಿಂದ್ ಅಣ್ಣಪ್ಪ ಮತ್ತು ತಂಡ ದ್ವಿತೀಯ, ಜ್ಞಾನಜ್ಯೋತಿ ವಿದ್ಯಾ ಸಂಸ್ಥೆಯ ಶಿಕ್ಷಕರ ತಂಡ ತೃತೀಯ ಬಹುಮಾನ ಪಡೆದುಕೊಂಡರು. ಶಾಲಾ ವಿದ್ಯಾರ್ಥಿಗಳಿಗೆ ನಡೆದ ಆಶುಭಾಷಣ ಸ್ಪರ್ಧೆಯಲ್ಲಿ ಅಶ್ವಿತೋಶ್ ಪ್ರಥಮ, ಅನಿತಾ ದ್ವಿತೀಯ, ಮಧುರ ತೃತೀಯ ಬಹುಮಾನ ಗಳಿಸಿದರು.

ಪುಸ್ತಕ ಲೋಕಾರ್ಪಣೆ : ಸಂಜೆ ನಡೆದ ಕಾರ್ಯಕ್ರಮದಲ್ಲಿ ಕವಿ ಅಹಿಂದ ಶಿವ ಅವರು ರಚಿಸಿರುವ ಕವನ ಸಂಕಲನವನ್ನು ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ಅವರು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಕವನಗಳು ಬದುಕಿನಲ್ಲಿ ಅವಿಸ್ಮರಣೀಯ ನೆನಪುಗಳಾಗಿ ಬಿಡುತ್ತದೆ ಎಂದು ಹೇಳಿದರು. ಐ ನೀಡ್ ಪ್ಲಸ್ ನ ವೈದ್ಯರಾದ ವಿಜಯಲಕ್ಷ್ಮಿ ಮಾತನಾಡಿ ಭಾಷೆಯನ್ನು ಪ್ರೀತಿಸಬೇಕು. ಭಾಷೆಯನ್ನು ಕಲಿತುಕೊಳ್ಳುವದು ಸುಲಭ, ಆದರೆ ಬರವಣಿಗೆ ಕಷ್ಟದ ಕೆಲಸ. ಕನ್ನಡ ಭಾಷೆ ಬಿಟ್ಟರೆ ಜಗತ್ತಿನಲ್ಲಿ ಯಾವ ಭಾಷೆಯೂ ಶ್ರೀಮಂತವಲ್ಲ. ಆದ್ದರಿಂದ ಭಾಷೆಯನ್ನು ಕೀಳರಿಮೆಯಿಂದ ಕಾಣದಿರುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಯುವ ಕವಿ ದೊರೆಸ್ವಾಮಿ ಸಿದ್ದೇಗೌಡ್ರು, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಅನಂತಶಯನ, ಮಂಗಳೂರು ಸಮರ್ಥ ಕನ್ನಡಿಗರು ಪ್ರಧಾನ ಸಂಚಾಲಕ ಭೀಮರಾವ್, ಹಾಜರಿದ್ದರು.