ಚೆಟ್ಟಳ್ಳಿ, ನ. 22: ಸಮೀಪದ ಕೈ.ವೈ.ಸಿ ಯುವ ಸಂಘ ಹಾಗೂ ಕೊಡಗು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕೊಂಡಂಗೇರಿ ಪ್ರೌಢ ಶಾಲಾ ಮೈದಾನದಲ್ಲಿ ನಡೆದ ಸೂಪರ್ ಫೈವ್ ಕಾಲ್ಚೆಂಡು ಪಂದ್ಯಾಟದಲ್ಲಿ ಪಾಲಿಬೆಟ್ಟದ ಯಂಗ್ ಇಂಡಿಯಾ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನಕ್ಕೆ ಅತಿಥೇಯ ಕೆ.ವೈ.ಸಿ. ಕೊಂಡಂಗೇರಿ ತಂಡವು ತೃಪ್ತಿಪಟ್ಟುಕೊಂಡಿದೆ.
ಪಂದ್ಯಾವಳಿಯ ಪ್ರಥಮ ಸೆಮಿಫೈನಲ್ ಪಂದ್ಯವು ಯಂಗ್ ಇಂಡಿಯಾ ಪಾಲಿಬೆಟ್ಟ ಹಾಗೂ ಸಿ.ಸಿ.ಬಿ. ವೀರಾಜಪೇಟೆ ನಡುವೆ ನಡೆಯಿತು, ಪಾಲಿಬೆಟ್ಟ ತಂಡವು ಟ್ರೇಬೇಕರ್ನಲ್ಲಿ ಗೆಲವು ಸಾಧಿಸಿ ಫೈನಲ್ ಪ್ರವೇಶಿಸಿತು.
ಎರಡನೇ ಸೆಮಿಫೈನಲ್ ಪಂದ್ಯವು ಎರಡು ಬಲಿಷ್ಠ ತಂಡಗಳಾದ ಎಫ್.ಸಿ. ಕಂಡಕರೆ ಹಾಗೂ ಕೆ.ವೈ.ಸಿ ಕೊಂಡಂಗೇರಿ ತಂಡಗಳ ನಡುವೆ ನಡೆಯಿತು.
ಕೊಂಡಂಗೇರಿ ತಂಡವು 2-0 ಗೋಲುಗಳ ಅಂತರದಿಂದ ಗೆಲವು ಸಾಧಿಸಿ ಫೈನಲ್ ಪ್ರವೇಶಿಸಿತು.
ಫೈನಲ್ ಪಂದ್ಯಾಟದಲ್ಲಿ ಯಂಗ್ ಇಂಡಿಯಾ ಪಾಲಿಬೆಟ್ಟ ತಂಡವು ಅತಿಥೇಯ ಕೆ.ವೈ.ಸಿ ಕೊಂಡಂಗೇರಿ ತಂಡವನ್ನು 1-0 ಗೋಲುಗಳಿಂದ ಮಣಿಸಿ, ಕೈ.ವೈ.ಸಿ ಯುವಕ ಸಂಘದ ಪ್ರಥಮ ವರ್ಷದ 5+2 ಕಾಲ್ಚೆಂಡು ಪಂದ್ಯಾಟದ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.
ಪಂದ್ಯಾವಳಿಯ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಎಫ್.ಸಿ ಕಂಡಕರೆ ತಂಡದ ಪಿ.ಎಂ. ಆಲಿ, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಾಲಿಬೆಟ್ಟ ತಂಡದ ಗಣೇಶ್, ಉತ್ತಮ ತಂಡ ಫಿಫಾ ಗದ್ದೆಹಳ್ಳ, ಅತಿ ಹೆಚ್ಚು ಗೋಲು ಬಾರಿಸಿದ ಪ್ರಶಸ್ತಿಯನ್ನು ಕೈ.ವೈ.ಸಿ ತಂಡದ ಪ್ರವೀಣ ಪಡೆದುಕೊಂಡರು.
ಪ್ರಶಸ್ತಿ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟ ಸಂಸ್ಥಾಪಕ ಆಸಿಫ್ ಜಿಲ್ಲೆಯಲ್ಲಿ ಫುಟ್ಬಾಲ್ ಕ್ರೀಡೆಯ ಉತ್ತಮ ರೀತಿಯಲ್ಲಿ ಬೆಳೆದು ಬರುತ್ತಿದೆ.ಜಿಲ್ಲೆಯಲ್ಲಿ ಫುಟ್ಬಾಲ್ ಕ್ರೀಡೆಯನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವ ಆಟಗಾರರಿದ್ದಾರೆ.
ಯುವ ಫುಟ್ಬಾಲ್ ಕ್ರೀಡಾಪಟು ಗಳಿಗೆ ಮುಖ್ಯವಾಗಿ ಬೇಕಾದದ್ದು ಉತ್ತಮ ತರಬೇತಿ ಕೇಂದ್ರ , ಹಾಗೂ ಮೈದಾನ ಕೊರತೆ ನಮಗೆ ಎದ್ದು ಕಾಣುತ್ತಿದೆ, ಇದರ ಬಗ್ಗೆ , ಕೊಡಗಿನ ಎಲ್ಲಾ ರಾಜಕೀಯ ಪಕ್ಷಗಳು ಸರ್ಕಾರದ ಗಮನ ಸೆಳೆಯಬೇಕು ಎಂದರು. ಈ ಸಂದರ್ಭ ಕೆ.ವೈ.ಸಿ. ತಂಡದ ನೂತನ ಜೆರ್ಸಿಯನ್ನು ಕೈ.ವೈ.ಸಿ. ಸಂಘದ ಅಧ್ಯಕ್ಷ ತಯ್ಯೂಬ್ ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಮೂರ್ನಾಡು ಯುವ ಕಾಂಗ್ರೆಸ್ ಅಧ್ಯಕ್ಷ ಸೈಫ್ ಆಲಿ, ವೀರಾಜಪೇಟೆ ಪಟ್ಟಣ ಪಂಚಾಯತಿ ಸದಸ್ಯ ಮೊಹಮ್ಮದ್ ರಾಫಿ, ಹಾಲುಗುಂದ ಗ್ರಾಮ ಪಂಚಾಯತಿ ಅಧ್ಯಕ್ಷ ಸೈದ್ ಆಲಿ ಕೈ.ವೈ.ಸಿ ಯುವ ಸಂಘದ ಅಧ್ಯಕ್ಷರಾದ ತಯ್ಯೂಬ್, ಉನೈಸ್, ಸುಹೈಲ್, ಬಾಸಿತ್, ಜಮಾಲ್ ಮತ್ತಿತ್ತರರು ಇದ್ದರು.