ಕುಶಾಲನಗರ, ನ. 22: ಕರ್ನಾಟಕ ಕಾವಲುಪಡೆ ಕೊಡಗು ಜಿಲ್ಲಾ ಘಟಕದ 8ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಸ್ಥಳೀಯ ಕನ್ನಡ ಭಾರತಿ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಕಾವಲುಪಡೆ ರಾಜ್ಯಾಧ್ಯಕ್ಷರಾದ ಎನ್.ಮೋಹನ್‍ಕುಮಾರ್ ಗೌಡ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸಂಘಟನೆಗಳು ಸೇವಾ ಮನೋಭಾವನೆಯೊಂದಿಗೆ ಸಮಾಜದ ಮುಖ್ಯವಾಹಿನಿಯ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು. ತಮ್ಮ ಸಂಘಟನೆ ಕಳೆದ ಹಲವು ವರ್ಷಗಳಿಂದ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದೆ ಎಂದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ.ಎಸ್.ಲೋಕೇಶ್ ಸಾಗರ್, ಪಪಂ ಸದಸ್ಯರಾದ ಜಯವರ್ಧನ, ರೂಪ, ಪ್ರಾಂಶುಪಾಲರಾದ ಪುರುಷೋತ್ತಮ್ ಇದ್ದರು. ಇದೇ ಸಂದರ್ಭ ಕಂದಾಯಾಧಿಕಾರಿ ಮಧುಸೂದನ್, ಕೆ.ಟಿ.ವಾತ್ಸಲ್ಯ, ಶಿಕ್ಷಕಿಯರಾದ ಬಿ.ಉಷಾ, ಹೆಚ್.ಜಿ.ಸುನಂದ, ಉಪನ್ಯಾಸಕ ಎಸ್.ಎಸ್.ಬಸವರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾವಲುಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಎಚ್.ಎಚ್.ಕುಮಾರ್ ವಂದಿಸಿದರು.