ಮಡಿಕೇರಿ, ನ. 21: ನಿವೃತ್ತ ಪೊಲೀಸ್ ನೌಕರರ ಸಂಘದಿಂದ ಇಂದು ನಿವೃತ್ತ ಪೊಲೀಸರಿಗೆ ಆರೋಗ್ಯ ಸಂಬಂಧ ಇರುವ ಸೌಲಭ್ಯಗಳ ಕುರಿತು ತಿಳುವಳಿಕೆ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಪಾಲ್ಗೊಂಡು ಮಾತನಾಡಿ, ನಿವೃತ್ತ ಪೊಲೀಸರು ತಮ್ಮ ಕುಟುಂಬದ ಸುರಕ್ಷತೆಯೊಂದಿಗೆ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಇಲಾಖೆಯೊಂದಿಗೆ ಸಹಕರಿಸುವಂತೆ ಸಲಹೆ ನೀಡಿದರು. ಅಲ್ಲದೆ ಸಮಾಜದಲ್ಲಿ ಮಹಿಳೆಯರ ಶೋಷಣೆ, ಬಾಲ್ಯ ವಿವಾಹ, ಮಾಧಕ ದುಶ್ಚಟಗಳಂತ ಪಿಡುಗುಗಳನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಕೋರಿದರು.
ಜಿಲ್ಲೆಯಲ್ಲಿ ಗಾಂಜಾ ದಂಧೆಯಂತಹ ದುಶ್ಚಟವನ್ನು ಹತ್ತಿಕ್ಕುವಲ್ಲಿ ಗಮನ ಹರಿಸಲಾಗುತ್ತಿದ್ದು, ಇತರೆಡೆಯಂತೆ ಇಲ್ಲಿ ಅಪರಾಧಗಳು ಹೆಚ್ಚಾಗಿ ನಡೆಯುತ್ತಿಲ್ಲವೆಂದು ಆಶಯದ ನುಡಿಯಾಡಿದರು.
ನಿವೃತ್ತ ಸಂಘದ ಅಧ್ಯಕ್ಷ ಎಸ್.ಎ. ಅಪ್ಪಯ್ಯ ಮಾತನಾಡಿ, ಪೊಲೀಸರು ನಿವೃತ್ತ ಜೀವನದಲ್ಲಿ ಸರಕಾರದಿಂದ ಲಭಿಸುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಸಭೆಯಲ್ಲಿ ನಿವೃತ್ತ ಅಧಿಕಾರಿಗಳಾದ ಪೂಣಚ್ಚ, ದೇವಯ್ಯ, ಅಚ್ಚುತ, ಕಾವೇರಪ್ಪ, ಅಪ್ಪಾಜಿ ಮೊದಲಾದವರು ಪಾಲ್ಗೊಂಡಿದ್ದರು.