ಕುಶಾಲನಗರ, ನ. 21: ಕುಶಾಲನಗರ ಪಟ್ಟಣ ಪಂಚಾಯಿತಿಯ ಆಡಳಿತ ಚುಕ್ಕಾಣಿಯನ್ನು ಮೈತ್ರಿ ಪಕ್ಷ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಪಕ್ಷದ ಜಿಲ್ಲಾ ವರಿಷ್ಠರುಗಳು ಚರ್ಚೆಯಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಗರಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ಮಾಹಿತಿ ನೀಡಿದ್ದಾರೆ.

‘ಶಕ್ತಿ’ಯೊಂದಿಗೆ ಮಾತನಾಡಿ, ಅತಂತ್ರ ಸ್ಥಿತಿಯಲ್ಲಿ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ತಮ್ಮ ಪಕ್ಷದ 6 ಮಂದಿ ಮತ್ತು ಜೆಡಿಎಸ್‍ನ ನಾಲ್ವರು ಸದಸ್ಯರ ಬಹುಮತದೊಂದಿಗೆ ಕುಶಾಲನಗರ ಪಟ್ಟಣ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಗಾದಿ ಮುಂದಿನ 5 ವರ್ಷಗಳ ಕಾಲ ಅಧಿಕಾರ ನಡೆಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷದ ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಮಾಜಿ ಸಚಿವ ಬಿ.ಎ. ಜೀವಿಜಯ, ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಸೇರಿದಂತೆ ಪ್ರಮುಖರೊಂದಿಗೆ ಚರ್ಚೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.