ವೀರಾಜಪೇಟೆ, ನ. 21: ಕಳೆದ ಏಳು ವರ್ಷಗಳ ಹಿಂದೆ ಇಲ್ಲಿನ ಎಫ್.ಎಂ.ಸಿ ರಸ್ತೆಯ ಸಂಗೀತಾ ಲಾಡ್ಜ್ನಲ್ಲಿ ನಡೆದ ಗೀತಾ (32) ಎಂಬ ಮಹಿಳೆಯ ಕೊಲೆಗೆ ಸಂಬಂಧಿಸಿದಂತೆ ಇಲ್ಲಿನ ಎರಡನೇ ಅಧಿಕ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಬಿ.ಜಿ. ರಮಾ ಅವರು ಆರೋಪಿ ಕುಟ್ಟಯ್ಯ ಅಲಿಯಾಸ್ ಹರೀಶ್ ಅಲಿಯಾಸ್ ರವಿಕುಮಾರ್ (40) ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ ರೂ 50,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ತಾ. 17.6.2012 ರಂದು ಬೆಂಗಳೂರಿನ ಎಂ.ಟಿ.ಆರ್. ಫುಡ್ ಪ್ರಾಡೆಕ್ಟ್ನಲ್ಲಿ ಉದ್ಯೋಗದಲ್ಲಿದ್ದು, ರಜೆ ಮೇಲೆ ಬಂದಿದ್ದ ಆರೋಪಿ ಕುಟ್ಟಯ್ಯ ಕೆದಮುಳ್ಳೂರು ಗ್ರಾಮದ ಕೆ. ಗುರುವ ಎಂಬವರ ಮಗಳು ಗೀತಾಳಿಗೆ ಉದ್ಯೋಗ ಕೊಡಿಸುವ ನೆಪದಲ್ಲಿ ಆಕೆಯನ್ನು ಸಂಗೀತಾ ಲಾಡ್ಜ್ಗೆ ಕರೆದೊಯ್ದು ಒಂದು ದಿನ ಅಲ್ಲಿಯೇ ತಂಗಿದ್ದು, ನಂತರ ಅದೇ ದಿನ ಮಧ್ಯರಾತ್ರಿ ಗೀತಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದನೆನ್ನಲಾಗಿದೆ. ಇದರ ನಂತರ ಆಕೆಯ ಮೈಮೇಲಿದ್ದ ಬಟ್ಟೆಗಳನ್ನು, ಒಡವೆಗಳನ್ನು ಬ್ಯಾಗ್ನಲ್ಲಿ ಹಾಕಿಕೊಂಡು ಆಕೆಯನ್ನು ಮಂಚದ ಮೇಲೆ ನಗ್ನವಾಗಿ ಮಲಗಿಸಿ ಹೊದಿಕೆ ಹೊದಿಸಿ ಯಾರಿಗೂ ಗೊತ್ತಾಗದಂತೆ ಕೃತ್ಯ ನಡೆದ ಕೊಠಡಿ ಸಂಖ್ಯೆ 106 ಕ್ಕೆ ಬೀಗ ಹಾಕಿಕೊಂಡು ತಲೆಮರೆಸಿಕೊಂಡಿದ್ದನು.
ಈ ಕುರಿತು ಸಂಗೀತಾ ಲಾಡ್ಜ್ನ ವ್ಯವಸ್ಥಾಪಕ ಬಿ.ಈ. ಸೂರ್ಯ ನೀಡಿದ ದೂರಿನ ಮೇರೆಗೆ ನಗರ ಪೊಲೀಸರು ಲಾಡ್ಜ್ನ ಸಿ.ಸಿ. ಕ್ಯಾಮೆರಾದ ಫೋಟೋವನ್ನು ಪರೀಕ್ಷಿಸಿ ಏಳು ದಿನಗಳ ಅವಧಿಯೊಳಗೆ ಆರೋಪಿ ಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಂಧನದ ನಂತರ ಕೊಲೆ ಆರೋಪಿ ಕುಟ್ಟಯ್ಯ ನನ್ನು ಪೊಲೀಸರು ವಿಚಾರಣೆ ಗೊಳಪಡಿಸಿದಾಗ ಈತ ಮೂಲತ: ವೀರಾಜಪೇಟೆ
(ಮೊದಲ ಪುಟದಿಂದ) ಬಳಿಯ ಬಿ. ಶೆಟ್ಟಿಗೇರಿ ಗ್ರಾಮದವನಾಗಿದ್ದು, ಈತನು ದಿ. ಸೋಮಯ್ಯ ಅವರ ಮಗನೆಂದು, ಈತನು ಮೂರು ವರ್ಷಗಳಿಂದಲೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಈ ಹಿಂದೆಯೇ ಗೀತಾಳನ್ನು ಪರಿಚಯ ಮಾಡಿಕೊಂಡಿದ್ದನೆಂದು ತನಿಖೆಯಿಂದ ತಿಳಿದು ಬಂದಿತ್ತು.
ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರ ಸ್ವಾಮಿ ಅವರು ಆರೋಪಿ ಹರೀಶ್ ವಿರುದ್ಧ ಐ.ಪಿ.ಸಿ. ಕಲಂ 302 ಹಾಗೂ 201 ರ ಪ್ರಕಾರ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಕೊಲೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ರಮಾ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ರೂ 50,000 ದಂಡ, ಐ.ಪಿ.ಸಿ. 201ರ ಪ್ರಕಾರ ಮೂರು ವರ್ಷಗಳ ಶಿಕ್ಷೆ ರೂ. 5000 ದಂಡ ವಿಧಿಸಿದ್ದಾರೆ. ರೂ. 50,000 ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ 2 ವರ್ಷಗಳ ಸಜೆ ಅನುಭವಿಸುವಂತೆಯೂ ಆದೇಶಿಸಲಾಗಿದೆ. ದಂಡದ ಹಣದಲ್ಲಿ ರೂ. 25,000 ಹಣವನ್ನು ಮೃತಳ ತಂದೆಗೆ ಪರಿಹಾರ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಅಭಿಯೋಜಕರಾದ ಡಿ. ನಾರಾಯಣ್ ವಾದಿಸಿದರು. ಕಳೆದ 2012ರ ಜೂನ್ ತಿಂಗಳಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣ ಜಿಲ್ಲೆಯಲ್ಲಿ ಕುತೂಹಲ ಸೃಷ್ಟಿಸಿತ್ತು.