ಮಡಿಕೇರಿ, ನ. 20: ಐದು ದಿನಗಳ ಹಿಂದೆಯಷ್ಟೆ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದ ಬೆನ್ನಲ್ಲೇ ಇದೀಗ ವಿದ್ಯುತ್ ಇಲಾಖೆಯ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಸಿಲುಕಿದ್ದಾರೆ.ಚಾಮುಂಡೇಶ್ವರಿ ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯಮಿತದ ಮಡಿಕೇರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಅಜಾದ್ ಅಲಿ ಶೌಕತ್ ಅಲಿ ದೊಡ್ಡಮನಿ ಎಂಬವರೆ ಎಸಿಬಿ ಬಲೆಗೆ ಬಿದ್ದವರಾಗಿದ್ದಾರೆ. ಚೇರಂಬಾಣೆಯ ಬಾಡಗ ರಸ್ತೆ ನಿವಾಸಿ, ಮಂದಪಂಡ ಕಾವೇರಪ್ಪ ಎಂಬವರು ತಮ್ಮ ಕೃಷಿ ಪಂಪ್‍ಸೆಟ್‍ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ದೊಡ್ಡಮನಿ ಅವರಿಗೆ ಅರ್ಜಿ ಸಲ್ಲಿಸಿದ್ದರು. ಪಂಪ್‍ಸೆಟ್‍ಗೆ ವಿದ್ಯುತ್ ಸಂಪರ್ಕ ಒದಗಿಸಲು ಇಂಜಿನಿಯರ್ ದೊಡ್ಡಮನಿ ಕಾವೇರಪ್ಪ ಅವರ ಬಳಿ ಹಣದ ಬೇಡಿಕೆ ಇಟ್ಟಿದ್ದರು. ರೂ. 7500 ಹಣವನ್ನು ನೀಡಿದರೆ ವಿದ್ಯುತ್ ಸಂಪರ್ಕ ಒದಗಿಸುವದಾಗಿ ದೊಡ್ಡಮನಿ ತಿಳಿಸಿದ ಹಿನ್ನೆಲೆಯಲ್ಲಿ ಕಾವೇರಪ್ಪ ಎಸಿಬಿ ಮೊರೆ ಹೋಗಿದ್ದರು.
ದೂರು ದಾಖಲಿಸಿಕೊಂಡ ಎಸಿಬಿ ತಂಡ ಇಂದು ಮಧ್ಯಾಹ್ನ ದೊಡ್ಡಮನಿ ತಮ್ಮ ಕಚೇರಿಯಲ್ಲಿ ಕಾವೇರಪ್ಪ ಅವರಿಂದ ರೂ. 7500 ಲಂಚದ ಹಣವನ್ನು ಪಡೆಯುತ್ತಿದ್ದ ಸಂದರ್ಭ ಧಾಳಿ ನಡೆಸಿ ದೊಡ್ಡಮನಿ ಅವರನ್ನು ಹಣ ಸಹಿತ ವಶಕ್ಕೆ ಪಡೆಯಿತು.
ಎಸಿಬಿ ತಂಡ ಇಂದು ಎರಡನೇ ಧಾಳಿ ನಡೆಸಿ ಅಧಿಕಾರಿಯೊಬ್ಬರನ್ನು ಖೆಡ್ಡಾಕ್ಕೆ ಬೀಳಿಸಿದ ಬೆನ್ನಲ್ಲೇ ಕೆಇಬಿ ಕಚೇರಿ ಬಳಿ ಜನ ಜಂಗುಳಿ ಕಂಡು ಬಂತು. ವಿದ್ಯುತ್ ಇಲಾಖಾ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಕಚೇರಿ ಎದುರು ಜಮಾಯಿಸಿ ಕಾರ್ಯಾಚರಣೆ ಬಗ್ಗೆ ಕುತೂಹಲ ವ್ಯಕ್ತಪಡಿಸುತ್ತಿದ್ದುದು ಗೋಚರಿಸಿತು. ದೊಡ್ಡಮನಿಯವರನ್ನು ಕಚೇರಿಯ ಕೊಠಡಿಯಲ್ಲಿ ಮೂರು ತಾಸಿಗೂ ಅಧಿಕ ಸಮಯ ವಿಚಾರಣೆಗೊಳಪಡಿಸಿದ ಎಸಿಬಿ ಮೈಸೂರು ವಿಭಾಗದ ಡಿವೈಎಸ್‍ಪಿ ಪೂರ್ಣಚಂದ್ರ ತೇಜಸ್ವಿ ನೇತೃತ್ವದ ತಂಡ ವಿಚಾರಣೆ ಬಳಿಕ ದೊಡ್ಡಮನಿಯವರನ್ನು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿತು. ನ್ಯಾಯಾಧೀಶರು ದೊಡ್ಡಮನಿ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.