ಕಂಡು ಕೇಳರಿಯದಷ್ಟು ಕಳೆದ ಸಾಲಿನಲ್ಲಿ ಮುಂಗಾರು ಮಳೆ ಸುರಿಯುವದ ರೊಂದಿಗೆ, 18 ಮಂದಿ ಪ್ರಾಣ ಕಳೆದುಕೊಂಡು ಪ್ರಾಣಿ ಸಂಕುಲ ಸಹಿತ ಅಪಾರ ಕಷ್ಟ ಎದುರಿಸಿರುವ ಭಯಾನಕ ದೃಶ್ಯವನ್ನು ಇನ್ನು ಜನತೆ ಮರೆತ್ತಿಲ್ಲ. ಈಗಷ್ಟೇ ಮಳೆಗಾಲ ಮರೆಯಾಗಿ ಚಳಿಗಾಲ ಶುರುವಾಗಿದೆ. ಇನ್ನು ಬೇಸಿಗೆಯ ತಾಪಮಾನ ಗೋಚರಿಸುವ ಮುನ್ನವೇ ಜಿಲ್ಲೆಯ ನದಿಮೂಲಗಳು ಇಳಿಮುಖಗೊಂಡು ಹಾರಂಗಿ ಜಲಾಶಯದ ಒಡಲು ಬರಿದಾಗುವ ದೃಶ್ಯ ಎದುರಾಗ ತೊಡಗಿದೆ.

ಕೊಡಗಿನ ಅನೇಕ ಕಡೆಗಳಲ್ಲಿ ಹೊಳೆ, ಕೆರೆ, ಬಾವಿಗಳ ನೀರಿನ ಮಟ್ಟ ದಿನೇ ದಿನೇ ಇಳಿಮುಖ ಗೊಳ್ಳುತ್ತಿರುವ ಬಗ್ಗೆ ಜನತೆಯಲ್ಲಿ ಆತಂಕದ ಮಾತುಗಳು ಕೇಳಿ ಬರುತ್ತಿವೆ. ಮುಂಗಾರುವಿನಲ್ಲಿ ಅಲ್ಲಲ್ಲಿ ತೀವ್ರ ಸ್ವರೂಪದ ಭೂಕುಸಿತದಿಂದ ಸಾವಿರಾರು ಮನೆಗಳು ಅವಶೇಷಗಳು ಲಭಿಸದ ರೀತಿಯಲ್ಲಿ ನಿರ್ನಾಮ ಗೊಂಡಿರುವ ದೃಶ್ಯ ಹಲವೆಡೆ ಎದುರಾಗಿವೆ.ಅನೇಕ ಕಡೆಗಳಲ್ಲಿ ಪ್ರಕೃತಿಯ ಸಿರಿಯೊಡಲಿನಲ್ಲಿ ದೃಷ್ಟಿ ಹರಿಸಿದರೆ, ಪ್ರಕೃತಿ ಸಿರಿಯ ತಾಣಗಳು ಹಸಿರು ಸೌಂದ ರ್ಯವನ್ನು

(ಮೊದಲ ಪುಟದಿಂದ) ಮರೆಮಾಡಿ ಭೂಕುಸಿತದ ಭಯಾನಕ ದೃಶ್ಯಗಳು ಕಣ್ಣು ಕಟ್ಟುವಂತಾಗಿದೆ. ಇಂತಹ ಪ್ರದೇಶಗಳಲ್ಲಿ ಮುಂಗಾರು ತೀವ್ರಗೊಂಡು ಭುವಿಯೊಡಲಿನಿಂದ ಸ್ಫೋಟಗೊಂಡಿದ್ದ ಜಲರಾಶಿ ಹಲವು ಮೀಟರ್ ಬೆಟ್ಟ ಸಾಲಿನ ವನಸಿರಿ ಗಳನ್ನು ಸರ್ವನಾಶ ಗೊಳಿಸಿರುವದು ಗೋಚರಿಸಲಿವೆ.

ಈ ಜಲಸ್ಫೋಟದ ಪರಿಣಾಮ ದಿಂದಾಗಿ ಮುಂಗಾರು ಮಳೆ ಮರೆಯಾಗುತ್ತಲೇ, ಜಲಮೂಲಗಳನ್ನು ಕಡಲೆಡೆಗೆ ಸೆಳೆದುಕೊಂಡಿರುವ ಶಂಕೆ ಹುಟ್ಟಿಕೊಂಡಿದೆ. ಹೀಗಾಗಿಯೇ ಜಿಲ್ಲೆಯ ಹಲವೆಡೆ ನೀರಿನ ಮಟ್ಟ ಇಳಿಮುಖಗೊಂಡು ಅಂತರ್ಜಲ ಸಹಜವಾಗಿ ಕುಸಿದಿರುವದು ದೃಢಪಟ್ಟಿದೆ.

ಜಲಮಾಲಿನ್ಯ : ಮಳೆಗಾಲದ ಮೇಘಸ್ಫೋಟ, ಜಲಸ್ಫೋಟ ಭೂಕುಸಿತದಿಂದ ಕಾಡು ಮೇಡುಗಳಲ್ಲಿ ಶತಮಾನದ ಮರಗಳು ನಾಶಗೊಂಡು, ಭುವಿಯೊಡಲು ಸೇರಿ, ನದಿತೊರೆಗಳಲ್ಲಿ ಅಪ್ಪಳಿಸಿದ ಪರಿಣಾಮ, ರಾಶಿ ರಾಶಿ ಮಣ್ಣು ಕೂಡ ಕೊಚ್ಚಿಕೊಂಡು ಹೋಗಿ ನದಿಗಳ ಮೂಲಕ ಹಾರಂಗಿ ಜಲಾಶಯದ ಒಡಲು ಸೇರಿರುವದು ದೃಢಪಟ್ಟಿದೆ. ಪರಿಣಾಮ ಬಹುತೇಕ ನದಿ, ಕೆರೆ, ಕೊಳ, ಬಾವಿಗಳಲ್ಲಿ ಇಂದು ಜಲಮಾಲಿನ್ಯ ಗೋಚರಿಸತೊಡಗಿದೆ.

ಕೆಸರು ಮಿಶ್ರಣ: ಹಾರಂಗಿ ಜಲಾಶಯ ಸಹಿತ ಇಂದು ಜಿಲ್ಲೆಯ ಪ್ರಮುಖ ನದಿಗಳಲ್ಲಿ ಹರಿಯುವ ನೀರಿನ ಶುಭ್ರತೆ ಮರೆಯಾಗಿ, ಸದಾ ಕೊಳಕು ಮಿಶ್ರಣದಿಂದ ಗೋಚರಿಸ ತೊಡಗಿದೆ. ಹಿಂದಿನಂತೆ ಹರಿಯುವ ನೀರಿನ ತಿಳಿ ಅಥವಾ ಶುಭ್ರತೆಗಳನ್ನು ಎಲ್ಲೆಡೆ ಕಾಣುವದು ಅಸಾಧ್ಯ ಎಂಬಂತಾಗಿದೆ.

ರಾಶಿ ರಾಶಿ ಕೆಸರು : ಈ ಎಲ್ಲಾ ಪರಿಸ್ಥಿತಿ ನಡುವೆ ಹಾರಂಗಿ ಜಲಾಶಯದಲ್ಲಿ ರಾಶಿ ರಾಶಿ ಕೆಸರು ಮಣ್ಣು ಸಹಿತ ವನ ಸಂಪತ್ತು ಒಡಲು ಸೇರಿರುವ ಶಂಕೆ ಬಲವಾಗಿದೆ. ಇನ್ನು ಜಲಾಶಯದೊಳಗೆ ಪ್ರಸಕ್ತ ಸಾಲಿನಲ್ಲಿ ನೀರಿಗಿಂತಲೂ ಕೆಸರು ಅತ್ಯಧಿಕವಾಗಿ ತುಂಬಿಕೊಂಡಿರುವದಾಗಿ ಖಾತರಿ ಯಿದ್ದರೂ, ಯಾರೊಬ್ಬರೂ ನಿಖರವಾಗಿ ಹೇಳಲು ಹಿಂಜರಿ ಯುತ್ತಿದ್ದಾರೆ.

ಕಾರಣ ಹಾರಂಗಿ ಜಲಾಶಯದ ಒಡಲು ತುಂಬಿರುವ ರಾಶಿ ರಾಶಿ ಕೆಸರು ತೆರವುಗೊಳಿಸುವದು ನಿರೀಕ್ಷಿಸಿದಷ್ಟು ಸುಲಭದ ಕೆಲಸವಲ್ಲ. ಅಂತಹ ಕೆಲಸಕ್ಕೆ ಇಲ್ಲಿ ಕೈ ಹಾಕಿದ್ದೇ ಆದರೆ, ಭವಿಷ್ಯದಲ್ಲಿ ಕೃಷ್ಣರಾಜ ಸಾಗರಕ್ಕೂ ಅದರ ಪರಿಣಾಮ ತಟ್ಟಲಿದೆ. ಹೀಗಾಗಿ ಪರಿಸ್ಥಿತಿ ಬಗ್ಗೆ ಕಾವೇರಿ ನೀರಾವರಿ ನಿಗಮದಿಂದ ತೆರೆಮರೆಯಲ್ಲಿ ಸಾಕಷ್ಟು ಚಿಂತನೆ ನಡೆದಿರುವ ಬಗ್ಗೆ ‘ಶಕ್ತಿ’ಗೆ ಮಾಹಿತಿ ಲಭಿಸಿದೆ.

ಡಿಸೆಂಬರ್‍ನಲ್ಲಿ ಸಮೀಕ್ಷೆ : ಪ್ರಸಕ್ತ ಕೊಡಗಿನ ಮುಂಗಾರುವಿನ ತೀವ್ರತೆಯಿಂದ ಹಾರಂಗಿ ಒಡಲಿನಲ್ಲಿ ಎದುರಾಗಿರುವ ಸ್ಥಿತ್ಯಂತರಗಳ ಬಗ್ಗೆ ಮುಂದಿನ ಡಿಸೆಂಬರ್‍ನಲ್ಲಿ ಸೂಕ್ತ ಸಮೀಕ್ಷೆ ನಡೆಸಲು ಕರ್ನಾಟಕ ಕಾರ್ಯಪಾಲಕ ಅಭಿಯಂತರರ ಸಂಶೋಧನಾ ಘಟಕ ನಿರ್ಧರಿಸಿದೆ ಎಂದು ಮೂಲಗಳಿಂದ ಗೊತ್ತಾಗಿದೆ.

ಆ ಮೂಲಕ ಮಾಹಿತಿ : ಈ ಸಮೀಕ್ಷೆ ಮೂಲಕ ಹಾರಂಗಿ ಜಲಾಶಯದ 2859 ಅಡಿಯಷ್ಟು ಆಳದ ಪೈಕಿ ಎಷ್ಟು ಪ್ರಮಾಣದಲ್ಲಿ ಕೆಸರು (ಹೂಳು) ತುಂಬಿಕೊಂಡಿದೆ ಎಂಬ ನಿಖರ ಮಾಹಿತಿ ಸಂಗ್ರಹಿಸಿ, ಈ ಕೆಸರನ್ನು ಜಲಾಶಯದಿಂದ ಹೊರ ಹಾಕುವದು ಸಹಿತ ಮುಂದೇನು ಕ್ರಮ ತೆಗೆದುಕೊಳ್ಳಬಹುದು ಎಂದು ನಿರ್ಧಾರವಾಗಲಿದೆಯಂತೆ.

ಒಟ್ಟಿನಲ್ಲಿ ಮುಂಗಾರು ಮಳೆಯಿಂದ ನಲುಗಿ ಹೋಗಿರುವ ಜಿಲ್ಲೆಯ ಬಹುತೇಕ ಜನತೆ, ಬೇಸಿಗೆಯಲ್ಲಿ ಕುಡಿಯುವ ನೀರಿನ ಹಾಹಕಾರದೊಂದಿಗೆ ಮತ್ತೊಮ್ಮೆ ಕಾವೇರಿ ನಾಡಿನಲ್ಲಿ ಸಂಕಷ್ಟ ಅನುಭವಿಸುವ ಮುನ್ಸೂಚನೆ ಈಗಿನಿಂದಲೇ ಗೋಚರಿಸು ವಂತಾಗಿ ರುವದು ಸುಳ್ಳಲ್ಲ. ಈ ದಿಸೆಯಲ್ಲಿ ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆ ಗಳು, ಜನಪ್ರತಿನಿಧಿಗಳು ಮುಂಜಾಗ್ರತಾ ಕ್ರಮಗಳಿಗೆ ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕಿದೆ. ಅಂತಹ ಆತಂಕಕ್ಕೆ ಹಾರಂಗಿ ಹಿನ್ನೀರಿನ ಒಡಲು ಕೈಗನ್ನಡಿ ಯಾದೀತು.

-ವರದಿ: ಸಿಂಚು, ಚಿತ್ರ: ನಾಗರಾಜು ಶೆಟ್ಟಿ