ಮಡಿಕೇರಿ, ನ. 21: ರಾಜ್ಯದ ಮುಖ್ಯಮಂತ್ರಿಗಳ ನಿಧಿಗೆ ಕೊಡಗಿನ ಮಳೆ ಹಾನಿ ಸಂತ್ರಸ್ತರಿಗಾಗಿ ದಾನಿಗಳು ನೀಡಿರುವ ನೆರವು ಹಣವನ್ನು, ಕೊಡಗು ಜಿಲ್ಲೆಗೆ ಹೊರತಾಗಿ ಯಾವದೇ ಅನ್ಯ ಉದ್ದೇಶಗಳಿಗೆ ಬಳಸುವದಿಲ್ಲವೆಂದು, ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಈ ಬಗ್ಗೆ ‘ಶಕ್ತಿ’ಯೊಂದಿಗೆ ಹೇಳಿಕೆ ನೀಡಿದ್ದು, ತಾವು ಖುದ್ದು ಮುಖ್ಯಮಂತ್ರಿಗಳನ್ನು ಈ ಸಂಬಂಧ ಭೇಟಿಯಾಗಿ ಚರ್ಚಿಸಿದ ವೇಳೆ ಮೇಲಿನ ಭರವಸೆ ನೀಡಿದರೆಂದು ಸ್ಪಷ್ಟಪಡಿಸಿದ್ದಾರೆ.ಅಲ್ಲದೆ, ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಬಿಡುಗಡೆಗೊಂಡಿರುವ ರೂ. 546 ಕೋಟಿ ಅನುದಾನದಲ್ಲಿಯೂ ಹೆಚ್ಚಿನ ಮೊತ್ತವನ್ನು ಕೊಡಗಿನ ಸಂತ್ರಸ್ತರ ನೆರವಿಗಾಗಿ ಒದಗಿಸಬೇಕೆಂದು ತಾವು ಮುಖ್ಯಮಂತ್ರಿಗಳ ಗಮನ ಸೆಳೆದಿರುವದಾಗಿ ಬೋಪಯ್ಯ ತಿಳಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಆಶ್ವಾಸನೆ ನೀಡಿದ್ದಾಗಿ ಅವರು ವಿವರಿಸಿದ್ದಾರೆ.
ಶೀಘ್ರ ಪುನರ್ವಸತಿ: ಕೊಡಗಿನಲ್ಲಿ ಮನೆ - ಮಠದೊಂದಿಗೆ ಕೃಷಿಭೂಮಿ, ತೋಟ ಕಳೆದುಕೊಂಡು ಈಗಾಗಲೇ ಮೂರ್ನಾಲ್ಕು ತಿಂಗಳು ಕಳೆದಿದ್ದರೂ, ಪುನರ್ವಸತಿ ಕೆಲಸ ಹಾಗೂ ನಷ್ಟ ಪರಿಹಾರ ಸಮರ್ಪಕವಾಗಿ ದೊರಕದಿರುವ ಬಗ್ಗೆ ಕುಮಾರಸ್ವಾಮಿ ಬಳಿ ಚರ್ಚಿಸಿದ್ದು, ಶೀಘ್ರವೇ ಜಿಲ್ಲೆಗೆ ಭೇಟಿ ನೀಡಿ, ಆಡಳಿತದಿಂದ ಗುರುತಿಸಿರುವ ಪರ್ಯಾಯ ಜಾಗ ಪರಿಶೀಲಿಸಿ ಅಗತ್ಯ ಕ್ರಮಕ್ಕೆ ಶಿಫಾರಸು ನೀಡುವದಾಗಿ ಭರವಸೆ ದೊರೆತಿದೆ ಎಂದು ಕೆಜಿಬಿ ಸುಳಿವು ನೀಡಿದ್ದಾರೆ.
ರೂ. 10 ಲಕ್ಷದ ಮನೆ : ಸಂತ್ರಸ್ತರಿಗೆ ರೂ. 10 ಲಕ್ಷ ಮೊತ್ತದಲ್ಲಿ ಸರಕಾರವು ಸೂಕ್ತ ಮನೆ ಕಟ್ಟಿಕೊಡಲಿದ್ದು, ಅಗತ್ಯವಿದ್ದರೆ ನೇರ ಫಲಾನುಭವಿಗೆ ಆ ಮೊತ್ತದ ಮನೆ ಕಟ್ಟಿಕೊಳ್ಳಲು ಕಂತುಗಳಲ್ಲಿ ಹಣ ಪಾವತಿಸುವ ಇಂಗಿತವನ್ನು ಕೂಡ ಮಾತುಕತೆ ವೇಳೆ ಮುಖ್ಯಮಂತ್ರಿ ವ್ಯಕ್ತಪಡಿಸಿದ್ದಾಗಿ ಬೋಪಯ್ಯ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಜ್ಯಕ್ಕೆ ಗರಿಷ್ಠ ಮೊತ್ತದ ಅನುದಾನ ಕಲ್ಪಿಸಿರುವ ಬಗ್ಗೆ ಬೋಪಯ್ಯ ಶ್ಲಾಘಿಸಿದ್ದಾರೆ.
ಅಕ್ರಮ ಸಕ್ರಮ : ಜಿಲ್ಲೆಯಲ್ಲಿ ಸರಕಾರದ ಪೈಸಾರಿ ಜಾಗವನ್ನು ಕೃಷಿ ಮಾಡಿಕೊಂಡಿರುವ ಸಣ್ಣ ಹಿಡುವಳಿದಾರರು, ಈ ಹಿಂದೆ 94 ‘ಸಿ’ ಅರ್ಜಿ ಸಲ್ಲಿಸಲು ಅವಕಾಶ ಲಭಿಸದವರು ಪ್ರಸಕ್ತ ನಮೂನೆ 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿ ಜಾಗ ಸಕ್ರಮಕ್ಕೆ ಸರಕಾರ ಅವಕಾಶ ಕಲ್ಪಿಸಿದೆ ಎಂದು ಇದೇ ವೇಳೆ ಕೆ.ಜಿ. ಬೋಪಯ್ಯ ಸ್ಪಷ್ಟ ಪಡಿಸಿದ್ದಾರೆ. ಈ ಸಂಬಂಧ ನಮೂನೆ 57ರ ಅರ್ಜಿಗಳನ್ನು ಶಾಸಕರ ಕಚೇರಿಯಿಂದ ಪಡೆದುಕೊಂಡು, ಆರ್ಟಿಸಿ ಇತ್ಯಾದಿ ಜಾಗದ ದಾಖಲೆಗಳೊಂದಿಗೆ ಆಯ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ರೂ. 100 ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಅವರು ಫಲಾನುಭವಿಗಳಿಗೆ ಸಲಹೆ ನೀಡಿದ್ದಾರೆ.