ಸೋಮವಾರಪೇಟೆ, ನ. 19: ಸ್ವಯಂ ಸೇವಾ ಸಂಸ್ಥೆಯಾಗಿರುವ ಲಯನ್ಸ್‍ನಿಂದ ಕೊಡಗಿನಲ್ಲಿ 4 ಮನೆಗಳನ್ನು ನಿರ್ಮಿಸಿ ಸಂತ್ರಸ್ತರಿಗೆ ನೀಡಲಾಗುವದು ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಚಂದ್ರಶೇಖರ್ ಭಂಡಾರಿ ತಿಳಿಸಿದರು. ಸೋಮವಾರಪೇಟೆ ಲಯನ್ಸ್ ಸಂಸ್ಥೆಗೆ ಅಧಿಕೃತ ಭೇಟಿ ಹಾಗೂ ಲಿಯೋ ಕ್ಲಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪ ಸಂದರ್ಭ ಸಂಸ್ಥೆಯ ಪದಾಧಿಕಾರಿಗಳು ತಕ್ಷಣದ ಸಹಕಾರ ನೀಡಿದ್ದು, ಮುಂದಿನ ದಿನಗಳಲ್ಲಿ ಸಂತ್ರಸ್ತರಿಗೆ ಸಂಸ್ಥೆಯಿಂದ 4 ಮನೆಗಳನ್ನು ನಿರ್ಮಿಸಿಕೊಡಲಾಗುವದು ಎಂದರು. ಲಯನ್ಸ್ ಸಂಸ್ಥೆಯು ಸಾಮಾಜಿಕ ಸೇವಾ ಮನೋಭಾವನೆಯನ್ನು ವೃದ್ಧಿಗೊಳಿಸುವದರೊಂದಿಗೆ ನಾಯಕತ್ವದ ಗುಣಗಳನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿಯೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು ಲಿಯೋ ಸಂಸ್ಥೆ ಅತ್ಯುನ್ನತ ವೇದಿಕೆಯಾಗಿದೆ ಎಂದು ಅಭಿಪ್ರಾಯಿಸಿದರು. ಇದೇ ಸಂದರ್ಭ ಇಲ್ಲಿನ ಒಕ್ಕಲಿಗರ ಸಂಘದ ಬಿಟಿಸಿಜಿ ಪದವಿಪೂರ್ವ ಕಾಲೇಜಿನಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಲಿಯೋ ಕ್ಲಬ್‍ನ್ನು ಉದ್ಘಾಟಿಸಲಾಯಿತು. ಅಧ್ಯಕ್ಷರಾಗಿ ಗಗನ್, ಕಾರ್ಯದರ್ಶಿಯಾಗಿ ಅಜಿತ್ ಹಾಗೂ ಖಜಾಂಚಿಯಾಗಿ ರಕ್ಷಿತ್ ಸೇರಿದಂತೆ 20 ಮಂದಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು. ಲಯನ್ಸ್ ಪದಾಧಿಕಾರಿಗಳಾದ ಕೆ.ಎಂ. ಜಗದೀಶ್, ಸಿ.ಕೆ. ರಾಜೀವ್, ಎಂ.ಎ. ಹರೀಶ್, ಎಸ್.ಎನ್. ಯೋಗೇಶ್, ಎನ್.ಬಿ. ರಾಮಚಂದ್ರ, ಕಾಜೂರು ಅರುಣ್ ಅವರುಗಳು ಲಿಯೋ ಕ್ಲಬ್‍ನ ಪ್ರಾಯೋಜಕತ್ವ ವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಎನ್. ಯೋಗೇಶ್ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಉಪ ರಾಜ್ಯಪಾಲ ಗೀತಾಪ್ರಕಾಶ್, ಪ್ರಾಂತೀಯ ಅಧ್ಯಕ್ಷ ಬೋಸ್ ಪೆಮ್ಮಯ್ಯ, ವಲಯ ಅಧ್ಯಕ್ಷ ಎ.ಎಸ್. ಮಹೇಶ್, ಕಾರ್ಯದರ್ಶಿ ಮಂಜುನಾಥ್ ಚೌಟ, ಖಜಾಂಚಿ ಬಸಪ್ಪ, ಲಿಯೋ ಕ್ಲಬ್ ಜಿಲ್ಲಾಧ್ಯಕ್ಷೆ ಪಲ್ಲವಿ ಪೈ ಅವರುಗಳು ಉಪಸ್ಥಿತರಿದ್ದರು.