ಗೋಣಿಕೊಪ್ಪಲು, ನ.19: ಸ್ನೇಹಿತರ ಮದುವೆ ಸಮಾರಂಭಕ್ಕೆ ದೂರದ ಊರಾದ ಬೆಂಗಳೂರಿನಿಂದ ಆಗಮಿಸಿದ್ದ ಸ್ನೇಹಿತರು ವಿವಾಹ ಮುಗಿಸಿ ಮರಳಿ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿದ್ದ ಸಂದರ್ಭ ಪೊನ್ನಂಪೇಟೆ ಗೋಣಿಕೊಪ್ಪ ಮುಖ್ಯರಸ್ತೆಯ ಅರುವತೋಕ್ಲು ಗ್ರಾಮ ಪಂಚಾಯ್ತಿ ಸಮೀಪ ಕಾರು ಪಲ್ಟಿಯಾಗಿ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ವರದಿಯಾಗಿದೆ. ಭಾನುವಾರದಂದು ಪೊನ್ನಂಪೇಟೆಯ ಕೊಡವ ಸಮಾಜದಲ್ಲಿ ಏರ್ಪಾಡಾಗಿದ್ದ ಸ್ನೇಹಿತರ ಮದುವೆ ಶುಭ ಕಾರ್ಯಕ್ಕೆ ಬೆಂಗಳೂರಿನಲ್ಲಿರುವ ಸ್ನೇಹಿತರಾದ ವೈಶಾಲಿ ಸುನೀಲ್ ತಿಮ್ಮಯ್ಯ, ಶ್ಯಾಮ್‍ವೆಲ್, ಶ್ವೇತಾ,ಜೈಶಾನ್, ಸೇರಿದಂತೆ ಐವರು ಭಾನುವಾರ ಮುಂಜಾನೆ ಬೆಂಗಳೂರಿನಿಂದ ತಮ್ಮ ಹೂಂಡೈ ಐ 20 ಕಾರಿನಲ್ಲಿ ಕೊಡಗಿನತ್ತ ಪ್ರಯಾಣ ಆರಂಭಿಸಿದ್ದರು.ಮಧ್ಯಾಹ್ನದ ವೇಳೆಗೆ ಪೊನ್ನಂಪೇಟೆ ತಲಪಿದ ಸ್ನೇಹಿತರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. (ಮೊದಲ ಪುಟದಿಂದ) ಸಂಜೆಯ ವೇಳೆಯಲ್ಲಿ ಕಾರ್ಯಕ್ರಮವನ್ನು ಮುಗಿಸಿ ರಾತ್ರಿ ಬೆಂಗಳೂರಿನತ್ತ ಪ್ರಯಾಣ ಬೆಳೆಸುವ ನಿರ್ಧಾರ ಮಾಡಿದ ಈ ತಂಡ 11 ಗಂಟೆ ರಾತ್ರಿ ಸಮಯದಲ್ಲಿ ಮಂಟಪದಿಂದ ತಮ್ಮ ಕಾರಿನಲ್ಲಿ ಪ್ರಯಾಣ ಆರಂಭಿಸಿದರು. 11.10ರ ಸುಮಾರಿಗೆ ಅರುವತೋಕ್ಲು ಗ್ರಾಮ ಪಂಚಾಯ್ತಿ ಸಮೀಪ ಕಾರು ಪಾಸ್ ಆಗುತ್ತಿದ್ದಂತೆಯೇ ರಸ್ತೆಯ ಅಡ್ಡಲಾಗಿ ಬೀದಿ ನಾಯಿಯೊಂದು ದಾಟಿತೆನ್ನಲಾಗಿದೆ.

ಈ ನಾಯಿಯನ್ನು ತಪ್ಪಿಸುವ ಆತುರದಲ್ಲಿ ಸಮೀಪದಲ್ಲಿದ್ದ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಮೂರು ಸುತ್ತು ಪಲ್ಟಿಯಾಗಿದೆ ಎನ್ನಲಾಗಿದೆ. ಈ ಸಂದರ್ಭ ಕಾರಿನಲ್ಲಿದ್ದ 28ರ ಪ್ರಾಯದ ವೈಶಾಲಿ ಎಂಬ ಮಹಿಳೆಯ ತಲೆಗೆ ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದಂತೆ ಚಾಲಕ ಸುನಿಲ್ ತಿಮ್ಮಯ್ಯ, ಶ್ಯಾಮ್‍ವೆಲ್, ಶ್ವೇತಾ, ಜೈಶಾನ್ ಇವರುಗಳಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಕಾರನ್ನು ಕೊಡಗು ಮೂಲದ ಸುನೀಲ್ ತಿಮ್ಮಯ್ಯ ಎಂಬವರು ಚಾಲನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.ಸುದ್ದಿ ತಿಳಿದ ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು.ವೈಶಾಲಿ ಮೃತ ದೇಹವನ್ನು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಇರಿಸಲಾಗಿದ್ದು. ಸಂಜೆ ಕುಟುಂಬಸ್ಥರು ಆಗಮಿಸಿ ಮೃತದೇಹವನ್ನು ಬೆಂಗಳೂರಿಗೆ ಸಾಗಿಸಿದರು.ಉತ್ತರ ಭಾರತದ ಗುರುಗಾವೋನ್ ಜಿಲ್ಲೆಯ ಜಿತೇಂದ್ರ ಸಿಂಗ್ ಯಾದವ್ ಪತ್ನಿ ವೈಶಾಲಿ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ತಂದೆ ನರೇಂದ್ರ ಕುಮಾರ್ ಏರ್‍ಫೋರ್ಸ್ ಅಧಿಕಾರಿಯಾಗಿದ್ದರು. ಗೋಣಿಕೊಪ್ಪ ವೈದ್ಯ ಸುರೇಶ್ ಅವರು ಮರಣೋತ್ತರ ಪರೀಕ್ಷೆ ನಡೆಸಿದರು. ವೃತ್ತ ನಿರೀಕ್ಷಕ ದಿವಾಕರ್, ಸಿಬ್ಬಂದಿ ಮಜೀದ್, ಕೆ.ಎ. ಗಣಪತಿ, ಪ್ರಮೀಳಾ ಹಾಜರಿದ್ದರು. -ಹೆಚ್.ಕೆ.ಜಗದೀಶ್