ಕುಶಾಲನಗರ, ನ. 19: ಅಖಿಲ ಭಾರತ ಸಾಧು-ಸಂತರ ಸಂಘ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಆಶ್ರಯದಲ್ಲಿ ನಡೆದ ಕಾವೇರಿ ನದಿ ಜಾಗೃತಿ ರಥಯಾತ್ರೆ ಪೂಂಪ್ಹಾರ್ ನಲ್ಲಿ ಸಮಾರೋಪಗೊಂಡಿತು. ಅಕ್ಟೋಬರ್ 26 ರಿಂದ ಶ್ರೀ ಕ್ಷೇತ್ರ ತಲಕಾವೇರಿಯಿಂದ ಚಾಲನೆಗೊಂಡ ರಥಯಾತ್ರೆ 20 ದಿನಗಳ ಕಾಲ ಕರ್ನಾಟಕ ಮತ್ತು ತಮಿಳುನಾಡು ಭಾಗದ ಕಾವೇರಿ ನದಿ ತಟದ ವ್ಯಾಪ್ತಿಯಲ್ಲಿ ಸಾಗಿ ಜನರಿಗೆ ನದಿ ಸಂರಕ್ಷಣೆಯ ಮತ್ತು ಪಾವಿತ್ರ್ಯತೆಯ ಬಗ್ಗೆ ಅರಿವು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ತಲಕಾವೇರಿಯಿಂದ ಒಯ್ದ ಪವಿತ್ರ ತೀರ್ಥವನ್ನು ಪೂಂಪ್ಹಾರ್ನ ಪೂರ್ಣೇಶ್ವರಿ ದೇವಾಲಯದಲ್ಲಿ ಪೂಜಾ ವಿಧಿವಿಧಾನಗಳ ನಂತರ ಕಾವೇರಿ-ಬಂಗಾಳಕೊಲ್ಲಿ ಸಂಗಮದಲ್ಲಿ ವಿಸರ್ಜನೆ ಮಾಡಲಾಯಿತು. ಬಂಗಾಳಕೊಲ್ಲಿ ಸಮುದ್ರ ಸಂಗಮದಲ್ಲಿ ಬಡಿದ ಚಂಡಮಾರುತ ನಡುವೆಯೇ ಅಖಿಲ ಭಾರತ ಸಾಧು-ಸಂತರ ಸಂಘದ ಸಂಚಾಲಕ ಶ್ರೀ ರಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಾಧು-ಸಂತರು, ಕಾರ್ಯಕರ್ತರು ಸಮಾರೋಪ ಕಾರ್ಯಕ್ರಮ ಆತಂಕದ ನಡುವೆ ನಡೆಯಿತು.