ಮಡಿಕೇರಿ, ನ.19: ಜನಸಂಪರ್ಕ ಸಭೆಗಳಲ್ಲಿ ಸ್ವೀಕೃತವಾಗುವ ಕುಂದು ಕೊರತೆಗಳ ಅರ್ಜಿಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಕಂದಾಯಾಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಂದಾಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಸೂಕ್ತ ಜಾಗವನ್ನು ಗುರುತಿಸಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸುವಂತೆ ಸೂಚನೆ ನೀಡುತ್ತಾ ಶಿಶು ಅಭಿವೃದ್ಧಿ ಯೋಜನಾ ದಾಸ್ತಾನು ಮಳಿಗೆ ನಿರ್ಮಾಣಕ್ಕೆ ಅಗತ್ಯವಿರುವ ಜಾಗ ಗುರುತಿಸಿ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಸರ್ವೇ ಕಾರ್ಯವನ್ನು ಕೈಗೊಂಡು ಜಾಗವನ್ನು ಗುರುತಿಸಿ ಸಂರಕ್ಷಿಸುವಂತೆ ತಹಶೀಲ್ದಾರರುಗಳಿಗೆ ಹಾಗೂ ಸರ್ವೇ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಅವಶ್ಯವಿರುವ ಕಡೆಗಳಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ನಿರ್ಮಾಣದ ಕುರಿತು ಮಾಹಿತಿ ಪಡೆದ ಅವರು ತುರ್ತಾಗಿ ವಸತಿ ಶಾಲೆಗಳಿಗೆ ಜಾಗವನ್ನು ಗುರುತಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಹಸ್ತಾಂತರಿಸುವಂತೆ ತಹಶೀಲ್ದಾರರುಗಳಿಗೆ ಹಾಗೂ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಿದರು.

ವಿವಿಧ ವಸತಿ ಯೋಜನೆಯಡಿಯಲ್ಲಿ ವಸತಿ ರಹಿತರಿಗೆ ಆಶ್ರಯ ಮನೆಗಳಿಗೆ ಸಂಬಂಧಿಸಿದಂತೆ ಇರುವಂತಹ ತೊಡಕುಗಳನ್ನು ನಿವಾರಣೆ ಮಾಡಿ ಅರ್ಹ ಫಲಾನುಭವಿಗಳಿಗೆ ತುರ್ತಾಗಿ ಮನೆಗಳ ನಿರ್ಮಾಣಕ್ಕೆ ಕ್ರಮವಹಿಸುವಂತೆ ಮೂರು ತಾಲೂಕುಗಳ ತಹಶೀಲ್ದಾರರಿಗೆ ಸೂಚನೆ ನೀಡಿದರು. ಹಾಗೆಯೇ ಅವಶ್ಯವಿರುವ ಕಡೆಗಳಲ್ಲಿ ಸ್ಮಶಾನಕ್ಕೆ ಜಾಗವನ್ನು ತುರ್ತಾಗಿ ಮಂಜೂರು ಮಾಡುವಂತೆ ಹೇಳಿದರು.

ಜಿಲ್ಲೆಯಾದ್ಯಂತ ಅಂಬೇಡ್ಕರ್ ಭವನಕ್ಕೆ ಗುರುತು ಪಡಿಸಿರುವ ಜಾಗದಲ್ಲಿ ನಿರ್ಮಾಣ ಕಾರ್ಯಕ್ಕೆ ಇದುವರೆಗೂ ಚಾಲನೆ ನೀಡದಿರುವದಕ್ಕೆ ತೀವ್ರ ಅಸಮಾದಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಅವರು ಈಗಾಗಲೇ ಮಂಜೂರು ಮಾಡಿರುವ ಜಾಗದಲ್ಲಿ ಅಂಬೇಡ್ಕರ್ ಭವನಗಳನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ತಹಶೀಲ್ದಾರರುಗಳಿಗೆ ತಾಕೀತು ಮಾಡಿದರು. ಈ ಸಂಬಂಧ ಉಪವಿಭಾಗಾಧಿಕಾರಿ ಟಿ.ಜವರೇಗೌಡ ಅವರಿಗೆ ಮೇಲ್ವಿಚಾರಣೆ ನಡೆಸುವಂತೆ ತಿಳಿಸಿದರು.

ಅರಣ್ಯ ಹಕ್ಕು ಕಾಯ್ದೆಯಡಿ ಬಾಕಿ ಇರುವ ಅರ್ಜಿಗಳ ಪ್ರಗತಿ ಕುರಿತ ಮಾಹಿತಿ ಪಡೆದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಅರಣ್ಯ ಹಕ್ಕು ಕಾಯ್ದೆಯಡಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಆರ್.ಟಿ.ಸಿ.ಯಲ್ಲಿ ಹೆಸರು ನೋಂದಾಯಿಸುವ ಕಾರ್ಯವನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅರಣ್ಯ ಹಕ್ಕು ಪತ್ರ ಪಡೆದುಕೊಂಡವರಿಗೆ ಮನೆ ನಿರ್ಮಾಣಕ್ಕೆ ಯಾವದೇ ತೊಂದರೆ ನೀಡದಂತೆ ಅರಣ್ಯಾಧಿಕಾರಿಗಳಿಗೆ ಸಭೆಯಲ್ಲಿ ಸ್ಪಷ್ಟ ನಿರ್ದೇಶನ ನೀಡಿದರು. ಗೊಂದಲ ಇರುವ ಕಡೆಗಳಲ್ಲಿ ಕಂದಾಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿಕೊಂಡು ಸರ್ವೇ ಕಾರ್ಯ ಪೂರ್ಣಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಶೇಷ ಅಪರ ಜಿಲ್ಲಾಧಿಕಾರಿ ಜಗದೀಶ್ ಮಾತನಾಡಿ ಗಾಳಿಬೀಡು ಪ್ರದೇಶ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕೆ ಗುರುತಿಸಿರುವ ನಿವೇಶನದಲ್ಲಿರುವ ಮರಗಳನ್ನು ತೆರವುಗೊಳಿಸಿ ಮನೆ ನಿರ್ಮಾಣಕ್ಕೆ ಅನುಕೂಲ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅತಿವೃಷ್ಟಿಯಿಂದ ಉಂಟಾದ ಮನೆ ಹಾನಿ ಸಂಬಂಧ ಇದುವರೆಗೂ ತೆಗೆದುಕೊಂಡಿರುವ ಕ್ರಮಗಳ ಕುರಿತು ಕಂದಾಯಾಧಿಕಾರಿಗಳಿಂದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಅಗತ್ಯ ಮಾಹಿತಿ ಪಡೆದುಕೊಂಡು ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿ ಸಂಬಂಧ ಸರ್ವೇ ಕಾರ್ಯ ಬಗ್ಗೆ ಮಾಹಿತಿ ಪಡೆದು ತುರ್ತಾಗಿ ಬೆಳೆ ಹಾನಿ ಸರ್ವೆಯನ್ನು ಪೂರ್ಣಗೊಳಿಸುವಂತೆ ಕಂದಾಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಕಂದಾಯ ಅದಾಲತ್‍ನಲ್ಲಿ ಆರ್.ಟಿ.ಸಿ. ಕುರಿತು ಹೆಚ್ಚಿನ ದೂರುಗಳು ಕೇಳಿ ಬರುತ್ತಿದ್ದು, ತುರ್ತಾಗಿ ದೂರುಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ಯಾವದೇ ತೊಂದರೆಯಾಗದಂತೆ ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ಅವರಿಗೆ ತಾಕೀತು ಮಾಡಿದರು.

94ಸಿ, 94ಸಿಸಿರಡಿ ಸ್ವೀಕರಿಸಿದ ಅರ್ಜಿಗಳ ವಿಲೇವಾರಿ ಕುರಿತು ಮಾಹಿತಿ ಪಡೆದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಡಿಸೆಂಬರ್ ಅಂತ್ಯದೊಳಗೆ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದರು.

ಸಾಮಾಜಿಕ ಭದ್ರತಾ ಯೋಜನೆ, ಪಿಂಚಣಿ ಅದಾಲತ್, ಕಂದಾಯ ಅದಾಲತ್ ಹಾಗೂ ಭೂ ಕಂದಾಯ ವಸೂಲಾತಿ ಪ್ರಗತಿ ಬಗ್ಗೆ ಸಭೆಯಲ್ಲಿ ತಹಶೀಲ್ದಾರರುಗಳಿಂದ ಮಾಹಿತಿ ಪಡೆದರು.

ಅತಿವೃಷ್ಟಿಯಿಂದಾಗಿ ಪ್ರಾಣ ಕಳೆದುಕೊಂಡ ಸಂತ್ರಸ್ತರಾದ ಕುಟುಂಬಗಳಿಗೆ ಹೆಚ್ಚುವರಿಯಾಗಿ 2 ಲಕ್ಷ ರೂ. ಪರಿಹಾರ ನೀಡಿರುವದಾಗಿ ಸಭೆಗೆ ಜಿಲ್ಲಾಧಿಕಾರಿ ಅವರು ತಿಳಿಸುತ್ತಾ ಸಂಬಂಧಪಟ್ಟ ಸಂತ್ರಸ್ತರ ಕುಟುಂಸ್ಥರ ಗಮನಕ್ಕೆ ತರುವಂತೆ ಉಪವಿಭಾಗಾಧಿಕಾರಿಗಳಿಗೆ ಹಾಗೂ ತಹಶೀಲ್ದಾರರುಗಳಿಗೆ ತಿಳಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಟಿ.ಜವರೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಲ್ಲೇಸ್ವಾಮಿ, ತಹಶೀಲ್ದಾರರುಗಳಾದ ಕುಸುಮ, ಗೋವಿಂದರಾಜು, ಮಹೇಶ್, ಮೂರು ತಾಲ್ಲೂಕುಗಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು, ಕಂದಾಯಾಧಿಕಾರಿಗಳು ಇತರರು ಇದ್ದರು.

.