ಗೋಣಿಕೊಪ್ಪ ವರದಿ, ನ. 19 : ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಬಿ. ಡಿವಿಜನ್ ಹಾಕಿ ಲೀಗ್‍ನಲ್ಲಿ ಹೆಚ್ಚು ಗೆಲುವು ದಾಖಲಿಸಿದ 4 ತಂಡಗಳಾದ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್, ಶಿವಾಜಿ, ಟಾಟಾ ಕಾಫಿ ಹಾಗೂ ಕೋಣನಕಟ್ಟೆ ಇಲೆವೆನ್ ತಂಡಗಳು ಎ. ಡಿವಿಜûನ್‍ಗೆ ಲಗ್ಗೆ ಇಟ್ಟಿವೆ. 4 ಪೂಲ್‍ಗಳಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಈ ತಂಡಗಳು ‘ಎ’ ಡಿವಿಜನ್‍ಗೆ ಪ್ರವೇಶ ಪಡಿದಿವೆ. ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡವು ಮರೆನಾಡ್ ತಂಡದ ವಿರುದ್ದ 4-0 ಗೋಲುಗಳ ಭರ್ಜರಿ ಗೆಲುವು ದಾಖಲಿಸಿತು ಪೊನ್ನಂಪೇಟೆ ಪರ 4 ನೇ ನಿಮಿಷದಲ್ಲಿ ಪ್ರಥ್ವಿ, 25 ರಲ್ಲಿ ಹುಮೈಜ್, 33 ರಲ್ಲಿ ದರ್ಶನ್, 39ರಲ್ಲಿ ಗೌತಂ ಗೋಲು ಬಾರಿಸಿದರು.

ಕುಂದ ತಂಡದ ಪರ 23 ನೆ ನಿಮಿಷದಲ್ಲಿ ಅಮಿತ್ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಪಾರಾಣೆ ತಂಡವನ್ನು ಸೋಲಿಸಲು ಕಾರಣವಾಯಿತು. ಬೇರಳಿನಾಡ್ ತಂಡವು ವೀರಾಜಪೇಟೆ ಕೊಡವ ಸಮಾಜ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿತು. ಬೇರಳಿನಾಡ್ ಪರ 14 ರಲ್ಲಿ ನಿಖಿಲ್, 7 ರಲ್ಲಿ ಸುಖನ್, ವೀರಾಜಪೇಟೆ ಪರ 29 ರಲ್ಲಿ ನಾಣಯ್ಯ ತಲಾ ಒಂದೊಂದು ಗೋಲು ಹೊಡೆದರು.

ಶ್ರೀಮಂಗಲ ನಾಡ್ ಕೊಡವ ಸಮಾಜ ತಂಡವು ಎಸ್‍ಹೆಚ್‍ಪಿ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು. ಶ್ರೀಮಂಗಲ ಪರ 30 ರಲ್ಲಿ ಬೋಪಣ್ಣ, 43 ರಲ್ಲಿ ಮಿಥುನ್, ಎಸ್‍ಹೆಚ್‍ಪಿ ಪರ 26 ರಲ್ಲಿ ದ್ರುವಿನ್ ಗೋಲು ಬಾರಿಸಿದರು. ಅಮ್ಮತ್ತಿ ತಂಡವು ಕಾಲ್ಸ್ ತಂಡವನ್ನು 4-1 ಗೋಲುಗಳಿಂದ ಸೋಲಿಸಿತು.

-ಸುದ್ದಿಪುತ್ರ