ಮಡಿಕೇರಿ, ನ. 17: ಪ್ರಾರ್ಥನೆ, ಉಪಾಸನೆ, ಧ್ಯಾನ, ಧಾರ್ಮಿಕ ಮೌಲ್ಯ, ವ್ಯಕ್ತಿಯ ಅಭ್ಯುದಯ, ವ್ಯಕ್ತಿತ್ವದ ಉದಯ - ಸಾರ್ಥಕ ಜೀವನಕ್ಕೆ ಬೇಕಾದ ಮೆದುಳಿನ ಆಹಾರದ ಭದ್ರ ಭಂಡಾರ ನಮ್ಮೊಡನಿದ್ದ ಶ್ರೀ ಜಗದಾತ್ಮಾನಂದ ಮಹಾರಾಜರಲ್ಲಿತ್ತು.
1927ರಲ್ಲಿ ಕೊಡಗು ಮೂಲದ ಸ್ವಾಮಿ ಶಾಂಭವಾನಂದ ಅವರ ಅಧ್ಯಕ್ಷತೆಯಲ್ಲಿ ಪೊನ್ನಂಪೇಟೆಯಲ್ಲಿ ಶ್ರೀ ರಾಮಕೃಷ್ಣ ಶಾರದಾ ಆಶ್ರಮ ಆರಂಭಗೊಂಡಿತು. ಶ್ರೀ ರಾಮಕೃಷ್ಣ ಪರಮಹಂಸರ ನೇರ ಶಿಷ್ಯ ಬ್ರಹ್ಮಾನಂದರು ಶಾಂಭವಾನಂದರಿಗೆ ದೀಕ್ಷೆ ನೀಡಿದ್ದರು.
ಆರಂಭದಲ್ಲಿ ಸಾಕಷ್ಟು ಭಕ್ತರನ್ನು ಆಕರ್ಷಿಸುತ್ತಿದ್ದ ಆಶ್ರಮಕ್ಕೆ ವರುಷಗಳು ಉರುಳಿದಂತೇ ಭಕ್ತರ ಸಂಖ್ಯೆ ಕ್ಷೀಣವಾಗತೊಡಗಿತ್ತು. ಆಶ್ರಮವಾಸಿಗಳ ಊಟ - ತಿಂಡಿಗೆ ತೊಂದರೆ ಉಂಟಾದ ದಿನಗಳೂ ಇತ್ತು. ಬಳಿಕ ಬಂದ ಯತಿಗಳು ಆಶ್ರಮದ ಏಳಿಗೆಗೆ ಶ್ರಮಿಸಿದರು. ಸಂಗೀತಕ್ಕೆ ಹೆಸರಾಗಿದ್ದ ಸ್ವಾಮಿ ಪುರುಷೋತ್ತಮಾನಂದರ ಬಳಿಕ 2010 ರಲ್ಲಿ ಅಧ್ಯಕ್ಷರಾಗಿ ಬಂದ ಜಗದಾತ್ಮಾನಂದರು ವಿಶ್ವ ಭಾವೈಕ್ಯ ದೇವಾಲಯ, ಸಭಾಂಗಣ ನಿರ್ಮಾಣ, ಆಸ್ಪತ್ರೆಯ ಜೀರ್ಣೋದ್ಧಾರ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ, ತರಬೇತಿ ಇತ್ಯಾದಿ ಯೋಜನೆಗಳಿಗೆ ಚಾಲನೆ ನೀಡಿ ಮತ್ತೊಮ್ಮೆ ಆಶ್ರಮದ ಹೆಸರನ್ನು ಎತ್ತಿಹಿಡಿದರು.
ಮಾತು ಮಾತಿಗೂ ಹಾಸ್ಯ ಚಟಾಕಿ ಹಾರಿಸುತ್ತಿದ್ದ ಅವರು ಧರ್ಮ ಗ್ರಂಥಗಳ, ರಾಮಕೃಷ್ಣ - ವಿವೇಕಾನಂದರ ವಿಚಾರಗಳ ಆಳವಾದ ಅಧ್ಯಯನ ನಡೆಸುತ್ತಿದ್ದರು. ಜೊತೆಗೆ ಭಾರತೀಯ ಋಷಿ ಪರಂಪರೆ, ಆಧ್ಯಾತ್ಮ ಹಾಗೂ ವಿದೇಶೀ ವಿಚಾರಧಾರೆಗಳನ್ನೂ ಅಭ್ಯಸಿಸಿದ್ದ ಅವರು ರೆಪ್ಪೆ ಮುಚ್ಚಿ ತೆರೆಯುವದರೊಳಗೆ ಆಧಾರ ಸಹಿತ ವಿಚಾರ ಮಂಡಿಸುತ್ತಿದ್ದರು. ವಿಜ್ಞಾನ ಮತ್ತು ಆಧ್ಯಾತ್ಮ ಸಮ್ಮಿಲನದ ಮಾತುಗಳೆಂದರೆ ಅವರಿಗೆ ಅಚ್ಚುಮೆಚ್ಚು. ದೇಶದ ಆಧ್ಯಾತ್ಮ ಸಂಸ್ಕøತಿ ಉಳಿಯಬೇಕೆಂದು ಒತ್ತಿ ಹೇಳುತ್ತಿದ್ದ ಅವರು, ಮೊದಲು ಪೋಷಕರು ಇತ್ತ ಆಸಕ್ತಿ ಹೊಂದಬೇಕೆಂದು ಹೇಳುತ್ತಿದ್ದರು. ವಿವೇಕಾನಂದರ ವೀರ ವಾಣಿಗಳನ್ನು ವಾಗ್ಜರಿಯಲ್ಲಿ ಹೇಳಿ ವಿದ್ಯಾರ್ಥಿಗಳು ಹುರಿದುಂಬುವಂತೆ ಮಾಡುತ್ತಿದ್ದರು. ಇವರು ಬರೆದು, ಹತ್ತು ಭಾಷೆಗಳಿಗೆ ಭಾಷಾಂತರಗೊಂಡ ‘ಬದುಕಲು ಕಲಿಯಿರಿ’ ಪುಸ್ತಕ ಓದಿ, ಸ್ಫೂರ್ತಿಗೊಂಡ, ಉತ್ತಮ ಫಲಿತಾಂಶ ದೊಂದಿಗೆ ಪಾಸಾದ, ಸಂಸಾರ ಸರಿಪಡಿಸಿಕೊಂಡ, ದೊಡ್ಡ ಹುದ್ದೆಗಳಿಗೆ ಏರಿದ, ಒಮ್ಮೆ ಸಾಯಲು ಮುಂದಾಗಿ - ಧೈರ್ಯದಿಂದ ಜೀವನ ಎದುರಿಸಿದ ನೂರಾರು ಮಂದಿ ಇವರನ್ನು ಸಂಪರ್ಕಿಸಿ ಕೃತಜ್ಞತೆ ಸಲ್ಲಿಸುವಾಗ ಸಾಮಾನ್ಯರಂತೆ ಉಬ್ಬದೆ, ‘ಹೌದೊ-ಬರಹ ಅಷ್ಟು ಪರಿಣಾಮ ಕಾರಿಯಾಗಿದೆಯಾ’ ಎಂದು ಪ್ರಶ್ನಿಸಿ ನಗುತ್ತಿದ್ದರು. ಬೆನ್ನು ತಟ್ಟಿ ದೇಶಕ್ಕೆ ಹೆಸರು ತನ್ನಿ ಎಂದು ಹುರಿದುಂಬಿಸುತ್ತಿದ್ದರು.
ಧರ್ಮ ಯುದ್ಧ, ದ್ವೇಷ, ಕ್ರೋಧಗಳ ಕುರಿತು ಮಾತನಾಡುತ್ತಿದ್ದ ಜಗದಾತ್ಮಾನಂದರು ಪ್ರತಿಯೊಬ್ಬರಲ್ಲೂ ಪರಮಾತ್ಮನ ಅಂಶವಿದೆ, ಇದನ್ನು ಅರ್ಥೈಸಿಕೊಂಡರೆ ಧರ್ಮಗಳ ನಡುವಿನ ಕಚ್ಚಾಟ, ಅನ್ಯಾಯ, ಅನಾಚಾರಗಳು ನಿಲ್ಲುತ್ತವೆ ಎಂದು ಹೇಳುತ್ತಿದ್ದರು. ಭಕ್ತಿಯಿಂದ ಭಗವಂತನ ಅವಿರ್ಭಾವ ಸಾಧ್ಯ ಎಂದು ಒತ್ತಿ ಹೇಳುತ್ತಿದ್ದರು.
ಧ್ಯಾನ ಮತ್ತು ಭಕ್ತಿಯ ಕುರಿತು ಮಾತು ಆರಂಭಿಸಿದರೆ, ತನ್ಮಯರಾಗಿ - ಹಾರ್ಮೋನಿಯಂ ಬಾರಿಸಿ ಭಕ್ತಿರಸ ಉಣಿಸಲಾರಂಭಿಸುತ್ತಿದ್ದರು. ಸಂಗೀತ ಅಭ್ಯಾಸ ಮಾಡಿದ್ದ ಅವರು ಕೃಷ್ಣನ ಕೊಂಡಾಟ, ಮೀರಾ ಭಜನ್ ಹಾಡುವಾಗ ಉದ್ವೇಗದಿಂದ ಹಾಡನ್ನು ನಿಲ್ಲಿಸಿಯೇ ಬಿಡುತ್ತಿದ್ದರು. ಉಸಿರಿದ್ದಾಗ ಇಂತಹ ಭಾವಕ್ಕೆ ಇಳಿಯುತ್ತಿದ್ದ ಜಗದಾತ್ಮಾನಂದರು - ಇಂದು ಭಗವದ್ಭಾವದೊಂದಿಗೆ ಲೀನ ಗೊಂಡಿದ್ದಾರೆ.
- ಅನಂತ ಶಯನ