ಮಡಿಕೇರಿ, ನ. 16: ಜಿಲ್ಲೆಯಲ್ಲಿ ಸಂತ್ರಸ್ತರಾದವರಿಗೆ ಮಾದರಿ ಮನೆಯನ್ನು ಪರಿಶೀಲಿಸುವ ಕಾರ್ಯವನ್ನು ಖುದ್ದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿದ್ದಾರೆ. ಒಂದು ಮನೆಗೆ ರೂ. 10 ಲಕ್ಷ ಒದಗಿಸುವ ಬಗ್ಗೆ ತೀರ್ಮಾನಿಸಿದ್ದಾರೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿ ಭೂಮಿಪೂಜೆ ಮಾಡಿ ಮಾದರಿ ಮನೆಗೆ ಶಿಲಾನ್ಯಾಸ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಹೇಳಿದ್ದಾರೆ.ಪತ್ರಕರ್ತರ ಸಂಘದ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ಸಚಿವರು ತಡವಾದ ಹಿನ್ನೆಲೆಯಲ್ಲಿ ಪತ್ರಕರ್ತರನ್ನು ಭೇಟಿ ಮಾಡಿ ಮಾತನಾಡಿದರು.ಪರಿಹಾರೋಪಾಯ ಕಾರ್ಯಗಳು ಸುಸೂತ್ರವಾಗಿ ಸಾಗುತ್ತಿದೆ. ಮಾದರಿ ಮನೆಗಳ ನಿರ್ಮಾಣ ಕಾರ್ಯ ಅಂತಿಮ (ಮೊದಲ ಪುಟದಿಂದ) ಹಂತದಲ್ಲಿದ್ದು, ಪರಿಶೀಲಿಸಿದ ಬಳಿಕ ಗುರುತಿಸಲಾದ ಮನೆಗಳ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಲಿದೆ ಯೆಂದು ಹೇಳಿದರು.ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ ಹಾಗೂ ಗುಮಾಸ್ತ ಕೆ.ಬಿ. ಮೋಹನ್ ಅವರನ್ನು ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿರುವದಾಗಿ ಸಚಿವರು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ ಹಾಗೂ ಗುಮಾಸ್ತ ಲಂಚ ಪಡೆಯಲು ಮುಂದಾಗಿರುವದು ತಪ್ಪು. ಈ ಭಾಗದ ಜನರು ಈಗಾಗಲೇ ಸಮಸ್ಯೆಯಲ್ಲಿದ್ದಾರೆ. ಲಂಚ ಪಡೆಯಲು ಮುಂದಾದ ಇವರನ್ನು ಅಮಾನತು ಗೊಳಿಸಲು ಸೂಚಿಸಲಾಗಿದೆ ಎಂದರು. ಮಾತ್ರವಲ್ಲದೇ ಸಾರ್ವಜನಿಕರಿಗೆ ನೋವು ನೀಡುವ ಕೆಲಸ ಯಾರೇ ಮಾಡಿದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವದಾಗಿ ಎಚ್ಚರಿಕೆ ನೀಡಿದರು.
ಮೈಸೂರು ಮೇಯರ್ ಸ್ಥಾನದ ಚುನಾವಣೆ ವಿಷಯವಾಗಿ ಬೆಳಗ್ಗೆನಿಂದ ರಾಷ್ಟ್ರೀಯ ನಾಯಕ ದೇವೆಗೌಡ ಹಾಗೂ ಹಲವು ನಾಯಕರೊಂದಿಗೆ ಚರ್ಚೆ ನಡೆಸಿದ್ದೇವೆ. ಮುಖ್ಯಮಂತ್ರಿಗಳಿಗೂ ಈ ವಿಷಯದ ಬಗ್ಗೆ ಮಾಹಿತಿ ನೀಡಲಾಗಿದೆ. ಮೊದಲು ಮೇಯರ್ ಆಗುವವರು ಎರಡು ವರ್ಷ, ನಂತರ ಮೂರು ವರ್ಷದ ಅವಧಿ ನೀಡಲಾಗುತ್ತದೆ. ಆದರೆ ಮೊದಲು ಹಾಗೂ ನಂತರ ಮೇಯರ್ ಆಗುವವರು ಯಾರು ಎಂಬದನ್ನು ಮಂಗಳೂರಿನಲ್ಲಿ ರಾಷ್ಟ್ರೀಯ ನಾಯಕ ದೇವೆಗೌಡರು ನಿರ್ಧರಿಸುತ್ತಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರ ದಲ್ಲಿರುವದರಿಂದ ಸ್ಥಳೀಯವಾಗಿ ನಾವು ಯಾವದೇ ತೀರ್ಮಾನವನ್ನು ಕೈಗೊಳ್ಳುವಂತಿಲ್ಲ. ರಾಷ್ಟ್ರೀಯ ನಾಯಕರ ತೀರ್ಮಾನವೇ ಅಂತಿಮ ಎಂದರು.