ಕುಶಾಲನಗರ, ನ. 17: ಅನುಭವ ಮಂಟಪದ ಮೂಲಕ ಸಮಾಜದಲ್ಲಿ ಸಮಾನತೆಯ ಜಾಗೃತಿ ಮೂಡಿಸಿದ ಮಾನವೀಯ ಮೌಲ್ಯಗಳನ್ನು ಹೊಂದಿರುವ ಬಸವಾದಿ ಶರಣರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಗೌರವ ಕಾರ್ಯದರ್ಶಿ ಎಂ.ಎನ್. ವೆಂಕಟ್ ನಾಯಕ್ ತಿಳಿಸಿದರು.
ಕಾರ್ತಿಕ ಪೂಜೆ ಹಿನ್ನೆಲೆ ಸ್ಥಳೀಯ ಬಸವೇಶ್ವರ ದೇವಾಲಯ ದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿ ಕೊಂಡಿದ್ದ ಬಸವಣ್ಣ ಮತ್ತು ವೈಚಾರಿಕತೆ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಸಮಾಜದಲ್ಲಿ ಸ್ತ್ರೀ ಸಮಾನತೆ ಮತ್ತು ವೈಚಾರಿಕತೆ ಜಾಗೃತಿ ಸಂಬಂಧ ವಿಶ್ವದಲ್ಲಿ ಮೊದಲು ಧ್ವನಿ ಎತ್ತಿದವರು ಬಸವಣ್ಣನವರಾಗಿದ್ದು ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಅಲ್ಲಿಯೇ ಸ್ವರ್ಗ ಕಾಣಬಹುದು ಎನ್ನುವದನ್ನು ಕಾಯಕವೇ ಕೈಲಾಸ ಎನ್ನುವ ಮಾತಿನ ಮೂಲಕ ಬಸವಣ್ಣ ಸೂಚ್ಯವಾಗಿ ಹೇಳಿದರು. ಆಡಂಬರದ ದೇವಾಲಯದ ಪೂಜೆಗಿಂತ ಆಂತರಿಕ ಆತ್ಮಪೂಜೆಗೆ ಹೆಚ್ಚಿನ ಮಹತ್ವ ಕಲ್ಪಿಸಿದರು. ಸಮಾಜದಲ್ಲಿ ಮನೆ ಮಾಡಿದ್ದ ಮೌಢ್ಯತೆ, ಕಂದಾಚಾರ, ಮೂಢನಂಬಿಕೆಗಳ ವಿರುದ್ಧ ಮಾನವತಾವಾದಿ ಬಸವಣ್ಣ 12ನೇ ಶತಮಾನದಲ್ಲೇ ಹೋರಾಟ ರೂಪಿಸಿದ್ದರು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಸಮಾಜದಲ್ಲಿ ಮೌಢ್ಯಾಚರಣೆ, ಕಂದಾಚಾರ ವಿರುದ್ಧ ಜಾಗೃತಿ, ವೈಚಾರಿಕ ಪ್ರಜ್ಞೆ ಬೆಳೆಸುವಲ್ಲಿ ಯುವಜನತೆ ಮಹತ್ವದ ಪಾತ್ರ ವಹಿಸಬೇಕಿದೆ ಎಂದರು.
ಅರಕಲಗೂಡು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಮಾತನಾಡಿದರು. ತಾಲೂಕು ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹೆಚ್.ಪಿ. ಉದಯಕುಮಾರ್ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ವೀರಶೈವ ಮಹಾಸಭಾದ ನಿರ್ದೇಶಕ ಟಿ.ಎಸ್. ಶಾಂಭಶಿವ ಮೂರ್ತಿ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ. ಮಹದೇವಪ್ಪ, ಶಿಕ್ಷಕ ಎಸ್.ಎಸ್. ವಿರೂಪಾಕ್ಷ, ಟಿ.ವಿ. ಶೈಲಾ ಮತ್ತಿತರರು ಇದ್ದರು.