ಕುಶಾಲನಗರ, ನ 17: ಟಿಪ್ಪು ಜಯಂತಿ ಸಂದರ್ಭ ಜಾಲತಾಣದ ಮೂಲಕ ಟೀಕಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದರೆನ್ನಲಾದ ಘಟನೆ ಸಂಬಂಧ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ ನಡೆದಿದೆ. ಸುಂದರನಗರದ ನಿವಾಸಿ ಮಂಜು ಎಂಬಾತ ಮೊಬೈಲ್‍ನಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಸ್ಟೇಟಸ್ ಹಾಕಿರುವದಾಗಿ ಜನತಾ ಕಾಲೋನಿಯ ಅಫ್ಜಲ್ ಎಂಬಾತ ಗುಂಪು ಗೂಡಿ ಆತನ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಠಾಣೆಗೆ ದೂರು ನೀಡಲಾಯಿತು. ಘಟನೆ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಇಬ್ಬರ ಕಡೆಯಿಂದ ಪೊಲೀಸ್ ಠಾಣೆಯಲ್ಲಿ ಗುಂಪು ಸೇರಿದೆ. ಪೊಲೀಸರು ತಕ್ಷಣ ಎರಡೂ ತಂಡದ ಸದಸ್ಯರನ್ನು ಕರೆಸಿ ವಿಚಾರಣೆಗೆ ಒಳಪಡಿಸಿ ಯಾವದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಚ್ಚಳಿಕೆ ಬರೆದು ಪ್ರಕರಣಕ್ಕೆ ಇತಿಶ್ರೀ ಹಾಡುವಲ್ಲಿ ಯಶಸ್ವಿಯಾಗಿದ್ದಾರೆ.