ನಾಪೆÇೀಕ್ಲು, ನ. 17: ನಾಪೆÇೀಕ್ಲು ಗ್ರಾಮ ಪಂಚಾಯಿತಿ ಗ್ರಾಮ ಸಭೆಯನ್ನು ತಾ. 17ರ ಬೆಳಿಗ್ಗೆ 11 ಗಂಟೆಗೆ ಪಂಚಾಯಿತಿ ಸಭಾಂಗಣದಲ್ಲಿ ಕರೆಯಲಾಗಿತ್ತು. ಆದರೆ ಸಭೆಯಲ್ಲಿ ಕೆಲವು ಇಲಾಖಾ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಾಜರಿಲ್ಲದ ಕಾರಣ ಸಭೆಯನ್ನು ಮುಂದೂಡಿದ ಘಟನೆ ನಡೆಯಿತು.
11 ಗಂಟೆಗೆ ಕರೆದಿದ್ದ ಸಭೆಗೆ 12 ಗಂಟೆಯಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಆಗಮಿಸದ ಕಾರಣ ರೊಚ್ಚಿಗೆದ್ದ ಗ್ರಾಮಸ್ಥರು ಸಭೆಯನ್ನು ಮುಂದೂಡುವಂತೆ ಒತ್ತಾಯಿಸಿದರು. ಅದರೊಂದಿಗೆ ಸಭೆಯಲ್ಲಿ ಹಾಜರಿಲ್ಲದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸಭೆಯಿಂದ ನಿರ್ಗಮಿಸಿದರು.
ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಗ್ರಾ.ಪಂ. ವತಿಯಿಂದ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಲಿಖಿತವಾಗಿ ಪತ್ರವನ್ನು ಕಳುಹಿಸಲಾಗಿದೆ. ಆದರೂ ಅವರು ಗೈರು ಹಾಜರಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಲಾಗುವದು ಎಂದು ತಿಳಿಸಿದರು.
ಮುಂದಿನ ಗ್ರಾಮ ಸಭೆಯನ್ನು ತಾ. 29ರಂದು ನಡೆಸಲಾಗುವದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗ ಹಾಜರಿದ್ದರು.