ಮಡಿಕೇರಿ, ನ. 17: ಜಿಲ್ಲಾ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಡಗು ಜಿಲ್ಲೆ ವತಿಯಿಂದ 2018-19ನೇ ಸಾಲಿನ ಜಿಲ್ಲಾ ಮಟ್ಟದ ಕಲಾಶ್ರೀ ಆಯ್ಕೆ ಶಿಬಿರವು ಇತ್ತೀಚೆಗೆ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ನಡೆಯಿತು.
ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾಶ್ರೀ ಆಯ್ಕೆ ಶಿಬಿರ ಮಕ್ಕಳ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಸೂಕ್ತ ವೇದಿಕೆಯಾಗಿದ್ದು ಇದರ ಬಳಕೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವವಾದುದು ಎಂದರು.
ಹಿರಿಯ ಪತ್ರಕರ್ತ ಬಿ.ಜಿ. ಅನಂತಶಯನ ಅವರು ಉದ್ಘಾಟಿಸಿ ಕಲೆಯಿಂದ ಏಕಾಗ್ರತೆ ಹೆಚ್ಚುತ್ತದೆ. ಮಕ್ಕಳು ಪಠ್ಯ ಚಟುವಟಿಕೆಗೆ ಮಾತ್ರ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲ್ಲೂ ಭಾಗವಹಿಸಲು ಇದು ಉತ್ತಮ ವೇದಿಕೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್ ಎಚ್.ಐ., ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್, ನಿವೃತ್ತ ಪ್ರಾಂಶುಪಾಲರಾದ ಜೋಯಪ್ಪ, ಚಿತ್ರಕಲೆ ಸತೀಶ್, ಶಿಕ್ಷಕರಾದ ದಿಲೀಪ್ ಕುಮಾರ್, ಶಿವರಾಮ್, ಲೀಲಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಾವಿತ್ರಿ ಇವರು ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳನ್ನು ಸೃಜನಾತ್ಮಕ ಕಲೆ, ಸೃಜನಾತ್ಮಕ ಬರವಣಿಗೆ, ಸೃಜನಾತ್ಮಕ ಪ್ರದರ್ಶನ ಕಲೆ, ವಿಜ್ಞಾನದಲ್ಲಿ ನೂತನ ಅವಿಷ್ಕಾರ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಿ ರಾಜ್ಯ ಮಟ್ಟದಲ್ಲಿ ಜಿಲ್ಲೆಯಿಂದ ಪ್ರತಿನಿಧಿಸಲು ಆಯ್ಕೆಮಾಡಲಾಗಿರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶP ಮಲ್ಲೇಸ್ವಾಮಿ ಅವರು ಸ್ವಾಗತಿಸಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.