ವೀರಾಜಪೇಟೆ, ನ. 16: ಅತಿವೇಗದಿಂದ ಕಾರು ಚಾಲನೆ ಮಾಡಿ ಅಪಘಾತ ಸಂಭವಿಸಿದ ಘಟನೆ ವೀರಾಜಪೇಟೆ-ಗೊಣಿಕೊಪ್ಪ ರಸ್ತೆಯಲ್ಲಿ ನಡೆದಿದೆ. ವೀರಾಜಪೇಟೆ ನಗರದಿಂದ ಅನತಿ ದೂರದ ಅಂಬಟ್ಟಿ ಗ್ರಾಮದ ಇಳಿಜಾರಿನಲ್ಲಿ ವೀರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಚವರ್‍ಲೇಟ್ ಚಾಯ್ಸ್ ಕಾರು (ಕೆಎ-01ಎಸಿ-9691) ಮತ್ತು ವೀರಾಜಪೇಟೆ ನಗರಕ್ಕೆ ಬರುತ್ತಿದ್ದ ಮಾರುತಿ ಒಮ್ನಿ (ಕೆಎಲ್-14ಜೆ 306) ಕಾರುಗಳ ಮಧ್ಯೆ ಅಪಘಾತ ಸಂಭವಿಸಿದೆ. ಬೆಂಗಳೂರು ಒಲಾ ಸಂಸ್ಥೆಗೆ ಸೇರಿದ ಚವರ್‍ಲೆಟ್ ವಾಹನವು ಕ್ಲಬ್ ಮಹೀಂದ್ರ ವಿಲಾಸಿ ಕೇಂದ್ರಕ್ಕೆ ಪ್ರವಾಸಿಗರನ್ನು ಕರೆತಂದು ಹಿಂದಿರುಗುವ ವೇಳೆ ಇಂದು ಬೆಳಿಗ್ಗೆ ಶಾಲಾ ಬಸ್ಸನ್ನು ಹಿಂದಿಕ್ಕುವ ಸಂದರ್ಭ ಎದುರಿನಿಂದ ಬಂದ ಮಾರುತಿ ಕಾರಿನ ಮುಂಭಾಗಕ್ಕೆ ಅಪ್ಪಳಿಸಿದೆ. ಕಾರುಗಳು ನಜ್ಜುಗುಜ್ಜಾಗಿದ್ದು, ಮಾರುತಿ ಕಾರಿನ ಚಾಲಕ ಹಾತೂರು ಗ್ರಾಮದ ಎಂ.ಕೆ. ಚೆಂಗಪ್ಪ ಅವರಿಗೆ ಎಡಭಾಗ ಕೈಗೆ ಮತ್ತು ಭುಜಕ್ಕೆ ಬಲವಾಗಿ ಪೆಟ್ಟು ಬಿದ್ದಿದೆ. ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಚವರ್‍ಲೆಟ್ ವಾಹನ ಚಾಲಕ ಭರತ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
- ಕೆ.ಕೆ.ಎಸ್.