ಸೋಮವಾರಪೇಟೆ, ನ.16: ಬೆಳೆಗಾರರು ಆನ್‍ಲೈನ್ ಮಾರಾಟದ ಮೂಲಕ ತಾವು ಬೆಳೆದ ಕಾಫಿಯನ್ನು ನೇರವಾಗಿ ಬಳಕೆದಾರರಿಗೆ ಮಾರಾಟ ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ ಎಂದು ಕಾಫಿ ಮಂಡಳಿ ಮಾಜಿ ಸದಸ್ಯ ಬೋಸ್ ಮಂದಣ್ಣ ಹೇಳಿದರು.

ಮಹಿಳಾ ಸಮಾಜದಲ್ಲಿ ಕಾಫಿ ಮಂಡಳಿಯು ಕಾಫಿಯ ಆನ್‍ಲೈನ್ ಮಾರಾಟ ಉತ್ತೇಜಿಸಲು ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈಗ ಕೇಂದ್ರ ಸರ್ಕಾರವು ಕಾಫಿ ಬೆಳೆಗಾರರು ತಾವು ಬೆಳೆದ ಕಾಫಿಯನ್ನು ತಾವೇ ಸಂಸ್ಕರಿಸಿ ಮಾರಾಟ ಮಾಡಿದರೆ ಒಟ್ಟು ಮೌಲ್ಯದ ಶೇಕಡಾ 25 ರಷ್ಟಕ್ಕೆ ಆದಾಯ ತೆರಿಗೆ ಇಲಾಖೆಯು ರೂಲ್ 7 ಬಿ ಅನ್ವಯ ನಿಗದಿಪಡಿಸಿದ ತೆರಿಗೆಯನ್ನು ಕಟ್ಟಬೇಕಾಗಿದೆ. ಇದು ಬೆಳೆಗಾರರಿಗೆ ಹೊರೆ ಆಗಿದೆ ಎಂದರು. ಈ ಹಿನ್ನೆಲೆ ಕಾಫಿ ಬೆಳೆಗಾರರ ನಿಯೋಗ ಲೋಕಸಭೆಯ ಹಣಕಾಸು ಸಂಸದೀಯ ಮಂಡಳಿಯ ಅಧ್ಯಕ್ಷ ಎಂ. ವೀರಪ್ಪಮೊಯ್ಲಿ ಅವರನ್ನು ಮಡಿಕೇರಿಯಲ್ಲಿ ಭೇಟಿ ಮಾಡಿ ತೆರಿಗೆ ರದ್ದುಪಡಿಸಲು ಮನವಿ ಮಾಡಿದ್ದು ಮೊಯ್ಲಿ ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಈ ಸಂದರ್ಭ ಮಾತನಾಡಿದ ಅಮೆಜಾನ್ (ಇಂಡಿಯಾ) ಕಂಪೆನಿಯ ಮಾರಾಟ ಮುಖ್ಯಸ್ಥ ಪ್ರಹ್ಲಾದ್ ಅವರು ಕಾಫಿ ಬೆಳೆಗಾರರೇ ಮಾರಾಟಗಾರರಾಗುವ ಮೂಲಕ ಉತ್ತಮ ಆದಾಯ ಗಳಿಸಬಹುದಾಗಿದೆ ಎಂದರು. ಇದರಿಂದಾಗಿ ಕಾಫಿಯ ಬಳಕೆದಾರರಿಗೂ ಅನುಕೂಲವಾಗಲಿದೆ ಎಂದರು. ಆನ್‍ಲೈನ್ ಮಾರುಕಟ್ಟೆಯಲ್ಲಿ ಕಾಫಿಯ ಗುಣಮಟ್ಟ ಕಾಯ್ದುಕೊಂಡರೆ ಉತ್ತಮ ಬೆಲೆ ಸಿಗಲಿದೆ ಎಂದರು. ಬೆಳೆಗಾರರು ತಮ್ಮದೇ ಬ್ರಾಂಡ್ ಮೂಲಕ ಕಾಫಿಯನ್ನು ಮಾರಾಟ ಮಾಡಿದರೆ ಬೇಡಿಕೆಯೂ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.

ಆನ್‍ಲೈನ್ ಕಂಪೆನಿ ಸ್ನಾಪ್‍ಡೀಲ್ ನ ಮಾರಾಟ ಮುಖ್ಯಸ್ಥ ಪವನ್ ಕೌಲ್ ಅವರು ಮಾತನಾಡಿ ನೆರೆಯ ಚೀನಾ ದೇಶದಲ್ಲಿ ಆನ್‍ಲೈನ್ ಮಾರುಕಟ್ಟೆ ಶೇಕಡಾ 90 ರಷ್ಟು ಇದ್ದು ಭಾರತದಲ್ಲಿ ಇನ್ನೂ ಶೇಕಡ 35 ರಷ್ಟಿದೆ. ಹಾಗಾಗಿ ಆನ್‍ಲೈನ್ ಮಾರುಕಟ್ಟೆ ವೃದ್ದಿಗೆ ವಿಫುಲ ಅವಕಾಶವಿದ್ದು, ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದರು. ಈಗ ಗ್ರಾಹಕರು ಒಂದು ಟೂಥ್ ಪೇಸ್ಟ್, ಸೋಪನ್ನು ಖರೀದಿಸಲೂ ಆನ್‍ಲೈನ್ ಮೊರೆ ಹೋಗುತಿದ್ದು ಇದರಿಂದಾಗಿ ಮಧ್ಯವರ್ತಿಗಳ ಪಾಲಾಗುತಿದ್ದ ಲಾಭ ಬಳಕೆದಾರನಿಗೇ ಸಿಗುತ್ತಿದೆ. ಇದು ಉತ್ತಮ ಬೆಳವಣಿಗೆ ಎಂದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಅವರು ಕಾಫಿಗೆ ಮುಕ್ತ ಮಾರುಕಟ್ಟೆ ಅವಕಾಶ ಕಲ್ಪಿಸಿದ ನಂತರ ಬೆಳೆಗಾರರ ಆರ್ಥಿಕ ಪರಿಸ್ಥಿತಿ ಉತ್ತಮ ವಾಗಿದ್ದು ಇದಕ್ಕಾಗಿ ಹೋರಾಟ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಿದರು. ಬೆಳೆಗಾರರು ಗ್ರಾಹಕ ಬಯಸುವ ಗುಣಮಟ್ಟದ ಕಾಫಿಯನ್ನು ಉತ್ಪಾದಿಸಿ ಹೆಚ್ಚಿನ ದರ ಪಡೆಯಬಹುದಾಗಿದ್ದು ಎಲ್ಲರೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ಕಾಫಿ ಮಂಡಳಿಯ ಸಂಪರ್ಕಾಧಿಕಾರಿ ಮುರಳೀಧರ್ ಮಾತನಾಡಿ, ಇಂದು ಕಾಫಿ ಬೆಳೆಗಾರರು ಉತ್ತಮ ಗುಣಮಟ್ಟದ ಕಾಫಿಯನ್ನು ಬೆಳೆಯುತ್ತಿದ್ದರೂ ಉತ್ತಮ ಬೆಲೆ ಸಿಗುತ್ತಿಲ್ಲ. ಏಕೆಂದರೆ ಇಲ್ಲಿ ಮಧ್ಯವರ್ತಿಗಳು ಆಟವಾಡುತ್ತಿದ್ದಾರೆ ಎಂದರು. ನೇರ ಮಾರುಕಟ್ಟೆಯಿಂದ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ರಾಷ್ಟ್ರ ಹಾಗೂ ಅಂತರ್ರಾಷ್ಟ್ರ ಮಟ್ಟದಲ್ಲೂ ನೇರವಾಗಿ ಬಳಕೆದಾರರಿಗೆ ತಲಪಿಸಬಹುದಾಗಿದೆ ಎಂದರು.

ಸಭೆಯಲ್ಲಿ ಕಾಫಿ ಮಂಡಳಿ ಉಪನಿರ್ದೇಶಕ ಸತೀಶ್ ಚಂದ್ರನ್, ಕಾಫಿ ಮಂಡಳಿ ಸದಸ್ಯ ಎಂ.ಬಿ. ಅಭಿಮನ್ಯು ಕುಮಾರ್, ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಉಪಸ್ಥಿತರಿದ್ದರು.