ಕೂಡಿಗೆ, ನ. 17: ಕೂಡಿಗೆ ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ಗ್ರಾಮಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

2015-16ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಪರಿಶಿಷ್ಟ ಜಾತಿ ವಿಭಾಗದಿಂದ ಮನೆಯನ್ನು ಪಡೆದಿದ್ದು, ಸದಸ್ಯರೇ ಎರಡು ಮನೆಗಳನ್ನು ನಿರ್ಮಿಸಿಕೊಂಡಿರುವ ಬಗ್ಗೆ ಮತ್ತು ತನ್ನ ಹೆಂಡತಿಯ ಹೆಸರಿನಲ್ಲಿ ಅರ್ಜಿಗೆ ಸಹಿ ಹಾಕದೆ ಮನೆಯನ್ನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಬ್ಯಾಡಗೊಟ್ಟ ಗ್ರಾಮದ ಅಣ್ಣಯ್ಯ ಮತ್ತು ಗ್ರಾಮಸ್ಥರು ಸಭೆಯಲ್ಲಿ ಆಕ್ಷೇಪ ವ್ಯಕ್ತ ಪಡಿಸಿದರು. ಕೆಲವು ಸದಸ್ಯರು ತಮಗೆ ಬೇಕಾದವರಿಗೆ ಕೊಟ್ಟಿಗೆಗಳನ್ನು ಮಂಜೂರು ಮಾಡಿರುವ ವಿಷಯಕ್ಕೂ ಸಭೆಯಲ್ಲಿ ಗೊಂದಲದ ಚರ್ಚೆ ನಡೆಯಿತು.

ಗ್ರಾಮಸ್ಥರು ಪಡಿತರ ವಸ್ತುಗಳ ವಿತರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಕೂಡಿಗೆ ಸರ್ಕಲ್‍ಗೆ ಹೈಮಾಸ್ಕ್ ದೀಪವನ್ನು ಅಳವಡಿಸುವಂತೆ ಮತ್ತು ಸೀಗೆಹೊಸೂರು, ಬ್ಯಾಡಗೊಟ್ಟ ಗ್ರಾಮಗಳ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.

ಮುಖ್ಯ ಅತಿಥಿಗಳಾಗಿದ್ದ ಬಸವನಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್.ರಾಜಾರಾವ್ ಮಾತನಾಡಿ, ಸದಸ್ಯರು ಒಳ ಜಗಳವನ್ನು ಬಿಟ್ಟು ಒಗ್ಗೂಡಿ ಗ್ರಾಮದ ಪ್ರಗತಿಗೆ ಶ್ರಮಿಸಬೇಕು. ಎಸ್‍ಟಿ, ಎಸ್‍ಸಿ ಜನಾಂಗದವರಿಗೆ ಸಿಗಬೇಕಾದ ಸವಲತ್ತುಗಳನ್ನು ಸಮರ್ಪಕವಾಗಿ ಒದಗಿಸಬೇಕು. ಸರಕಾರದ ಯೋಜನೆ ಗಳು ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮವಾಗಿ ಬಳಕೆಯಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೇಮಲೀಲಾ ಮಾತನಾಡಿ, ಎಲ್ಲಾ ವಿಷಯಗಳನ್ನು ಆಲಿಸಲಾಗಿದೆ. ಮುಂದಿನ ಮಾಸಿಕ ಸಭೆಯಲ್ಲಿ ತೀರ್ಮಾನ ಕೈಗೊಂಡು ಕಾಮಗಾರಿಗಳನ್ನು ಪ್ರಾರಂಭಿಸುತ್ತೇವೆ ಎಂದರು. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿ.ಜೆ.ಲೋಕೇಶ್, ಉದ್ಯೋಗ ಖಾತರಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಮಾಹಿತಿ ನೀಡಿದರು. ಉದ್ಯೋಗ ಖಾತರಿ ಮತ್ತು ಇತರ ಯೋಜನೆಯ ಕಾಮಗಾರಿಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಗ್ರಾಮಸ್ಥರು ತಮ್ಮ ಗ್ರಾಮಗಳ ಸಮಸ್ಯೆಗಳನ್ನು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಕೃಷಿ ಇಲಾಖೆಯ ಅಧಿಕಾರಿ ಪೂಣಚ್ಚ ಕಾರ್ಯ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ, ತಾಲೂಕು ಪಂಚಾಯಿತಿ ಸದಸ್ಯೆ ಸಬಿತಾ ಚನ್ನಕೇಶವ ಸೇರಿದಂತೆ ಗ್ರಾ.ಪಂ. ಸದಸ್ಯರು ಇದ್ದರು.