ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ಸಂಕಷ್ಟಕ್ಕೊಳಗಾದವರಿಗೆ ಬೆಂಗಳೂರಿನ ಸ್ತ್ರೀ ಜಾಗೃತಿ ಮಾಸ ಪತ್ರಿಕೆಯ ಸಂಪಾದಕಿ ಹೆಚ್.ಜಿ. ಶೋಭಾ ಅವರ ಪ್ರಯತ್ನದ ಫಲವಾಗಿ ನವದೆಹಲಿಯ ಮಾತಾಜಿ ಆಶ್ರಮದ ವತಿಯಿಂದ ಉದಾರವಾಗಿ ನೀಡಿದ ಸೀರೆ, ಸ್ಟೀಲ್ ತಟ್ಟೆ, ಸ್ಟೀಲ್ ಲೋಟ ಹಾಗೂ ದಿನೋಪಯೋಗಿ ಸಾಮಗ್ರಿಗಳನ್ನು ಜಿಲ್ಲೆಯ ಹಲವು ಸ್ಥಳಗಳಲ್ಲಿ ವಿತರಿಸಲಾಯಿತು.

ಮಡಿಕೇರಿಯ ದೀಪಕ್ ಹಾಗೂ ರುಜಿತ್ ಶೆಟ್ಟಿ ಅವರುಗಳು ಮಕ್ಕಂದೂರಿನ ಉದಯಗಿರಿ, ಕರ್ಣಂಗೇರಿಯ ವಿದ್ಯಾಭಾರತಿ ಬಡಾವಣೆ, 3ನೇ ಮೈಲು, ಕರ್ಣಂಗೇರಿ ನವಗ್ರಾಮ, ಇಂದಿರಾನಗರ, ಕಾಲೂರಿನ ಪಾಟಿ, ಮೈತ್ರಿ ಪುನರ್ವಸತಿ ಕೇಂದ್ರ, ಬಾಲಕಿಯರ ಬಾಲ ಮಂದಿರ ಪುನರ್ವಸತಿ ಕೇಂದ್ರ ಹಾಗೂ ಸುಂಟಿಕೊಪ್ಪದ ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿ ಒಟ್ಟು 500 ಕ್ಕಿಂತಲೂ ಹೆಚ್ಚು ಸೀರೆ ಹಾಗೂ ಸ್ಟೀಲ್ ತಟ್ಟೆ ಮತ್ತು ಸ್ಟೀಲ್ ಲೋಟಗಳನ್ನು ವಿತರಿಸಿದರು. ಜಾಗೃತಿ ಮಾಸ ಪತ್ರಿಕೆಯ ಸಂಪಾದಕಿ ಹೆಚ್.ಜಿ. ಶೋಭಾ ಅವರ ಪ್ರಯತ್ನದಿಂದ ನವದೆಹಲಿಯ ಮಾತಾಜಿ ಆಶ್ರಮದಿಂದ ಇನ್ನಷ್ಟು ಸಾಮಗ್ರಿಗಳು ಬರಲಿದ್ದು, ಅವುಗಳನ್ನು ನೆರೆ ಹಾವಳಿಯಿಂದ ತೊಂದರೆಗೊಳಗಾದವರಿಗೆ ವಿತರಿಸಲಾಗುವದು ಎಂದು ದೀಪಕ್ ಮತ್ತು ರುಜಿತ್ ಶೆಟ್ಟಿ ತಿಳಿಸಿದ್ದಾರೆ.ಮೂರ್ನಾಡು: ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ಮರಣ ಹೊಂದಿರುವ ಕಾಟಕೇರಿ ಗ್ರಾಮದ ಮೂರು ಕುಟುಂಬಗಳಿಗೆ ಬಲಮುರಿ ದೇವನೂರು ಗೌಡ ಒಕ್ಕೂಟದಿಂದ ನೆರವು ನೀಡಲಾಯಿತು.

ದುರಂತದ ಹಿನ್ನೆಲೆ ಪ್ರಸಕ್ತ ವರ್ಷದ ಕೈಲ್ ಮೂಹೂರ್ತ ಊರೊರ್ಮೆ ಸಂತೋಷ ಕೂಟವನ್ನು ರದ್ದುಗೊಳಿಸಿರುವ ಒಕ್ಕೂಟದ ಸದಸ್ಯರು ರೂ. 9 ಸಾವಿರವನ್ನು ಕ್ರೋಢೀಕರಿಸಿ ಕಾಟಕೇರಿ ಗ್ರಾಮದ ಅಚ್ಚಲ್‍ಪಾಡಿ ವೆಂಕಟರಮಣ, ಅಚ್ಚಲ್‍ಪಾಡಿ ಪವನ್ ಹಾಗೂ ಅಚ್ಚಲ್‍ಪಾಡಿ ಯಶವಂತ್ ಕುಮಾರ್ ಅವರ ಕುಟುಂಬಗಳಿಗೆ ತಲಾ ಮೂರು ಸಾವಿರದಂತೆ ನೆರವು ನೀಡಲಾಯಿತು. ಒಕ್ಕೂಟದ ಕಾರ್ಯದರ್ಶಿ ಎ.ಎಂ. ಸೋಮಣ್ಣ, ನಿರ್ದೇಶಕ ಎಂ.ಎಂ. ಹರೀಶ್ಚಂದ್ರ ನೆರವನ್ನು ಹಸ್ತಾಂತರಿಸಿದರು.ವೀರಾಜಪೇಟೆ: ಸಮಾಜ ಸೇವೆ ಮಾಡಬೇಕೆಂಬ ಹುಮ್ಮನಸ್ಸಿನ ವಿದ್ಯಾರ್ಥಿಗಳು ಇತರರಿಂದ ಸಂಗ್ರಹ ಮಾಡಿದ ರೂ. 1 ಲಕ್ಷವನ್ನು ಕೊಡಗಿನಲ್ಲಿ ಮಹಾ ಮಳೆಯಿಂದ ಆಸ್ತಿ, ಮನೆ ಕಳೆದುಕೊಂಡ 12 ನಿರಾಶ್ರಿತರಿಗೆ ಹಸ್ತಾಂತರಿಸಿದರು.

ವೀರಾಜಪೇಟೆಯ ಮಂಡೆಪಂಡ ಸುಜಾ ಕುಶಾಲಪ್ಪ ಅವರ ಕಿರಿಯ ಪುತ್ರ ನಿಶಾಂಕ್ ಪೊನ್ನಪ್ಪ ಅವರ ಮುಂದಾಳತ್ವದಲ್ಲಿ ಅಜ್ಜಮಾಡ ತಿಮ್ಮಯ್ಯ ಅವರ ಪುತ್ರ ಚಂಗಪ್ಪ, ಚಾರಿಮಂಡ ಕಾವೇರಪ್ಪ ಅವರ ಪುತ್ರ ಬಿದ್ದಪ್ಪ, ಕೊಲ್ಲಿರ ಭರತ್, ಗಗನ್ ಮುತ್ತಪ್ಪ, ಪಟ್ಟಡ ರಕ್ಷಿತ್ ಹಾಗೂ ಜಾನವಿ ಅವರುಗಳು ಇತರರಿಂದ ಸಂಗ್ರಹಿಸಿದ್ದ ರೂ. 1 ಲಕ್ಷವನ್ನು ಆಸ್ತಿ, ಮನೆ ಕಳೆದುಕೊಂಡ ಮಾದಾಪುರದ ಮುಕ್ಕಾಟ್ಟಿರ ತಂಗಮ್ಮ ಉತ್ತಯ್ಯ, ನಿಡುಗಣೆಯ ಸೋಮಣ್ಣ, ಹೆಬ್ಬಟ್ಟಗೇರಿಯ ಬೊಟ್ಟೊಳಂಡ ಅಪ್ಪಿ, ಮಡಿಕೇರಿಯ ಮುಂಡಂಡ ಬೇಬಿ, ಕಾಲೂರು ಗ್ರಾಮದ ಹರೀಶ್, ಅಯ್ಯಣ್ಣ ಮತ್ತು ಪೂವಯ್ಯ, ಮೇಘತಾಳುವಿನ ಶಾರದ ಮತ್ತು ಪೂವಯ್ಯ, ಹೆಮ್ಮೆತ್ತಾಳು ನೀಲಮ್ಮ, ನಿಡುಗಣೆಯ ಬೊಳ್ಳೆರ ಸೋಮಣ್ಣ, ಮತ್ತು ಕಾರೇರ ಸುನಿ ಚೋಂದಮ್ಮ ಅವರುಗಳಿಗೆ ಸಹಾಯ ನೀಡಿರುವದಾಗಿ ನಿಶಾಂಕ್ ಪೊನ್ನಪ್ಪ ತಿಳಿಸಿದರು.