ಮಡಿಕೇರಿ, ನ. 16: ನಿನ್ನೆ ಸಂಜೆ ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯದೇವಿ ಗಲಗಲಿ, ಸಂತ್ರಸ್ತ ಮಹಿಳೆಯೊಬ್ಬರಿಂದ ದೌರ್ಜನ್ಯ ಸಂಬಂಧ ಪರಿಹಾರಕ್ಕಾಗಿ ಲಂಚ ಸ್ವೀಕರಿಸುವ ವೇಳೆ ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಸಿಲುಕಿರುವ ಬೆನ್ನಲ್ಲೇ ಅನಾರೋಗ್ಯದ ನೆಪದೊಂದಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವದಾಗಿ ತನಿಖಾದಿ üಕಾರಿಗಳು ಖಚಿತಪಡಿಸಿದ್ದಾರೆ. ಅಲ್ಲದೆ ಕಚೇರಿ ಸಿಬ್ಬಂದಿ ಮೋಹನ್‍ನನ್ನು ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಜೈಲಿಗೆ ಸೇರಿಸಲಾಗಿದೆ.ಈ ನಡುವೆ ಸಂತ್ರಸ್ತ ಮಹಿಳೆ ಮೇಕೇರಿ ಶಕ್ತಿ ನಗರದ ನಳಿನಾಕ್ಷಿ ಅವರಿಗೆ ಆರೇಳು ತಿಂಗಳಿನಿಂದ ಪರಿಹಾರ ನೀಡದೆ ಲಂಚಕ್ಕಾಗಿ ಅಲೆಸಿರುವ ಕುರಿತು, ಮಾಯದೇವಿ ಗಲಗಲಿ ನಡೆಸಿರುವ ಸಂಭಾಷಣೆಯ ತುಣುಕುಗಳ ಸಹಿತ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದು, ನಿನ್ನೆ ಸಂಜೆಯೂ ಆರೋಪಿ ಮಾಯದೇವಿ ಕಚೇರಿ ಗುಮಾಸ್ತ ಮೋಹನ್‍ನೊಂದಿಗೆ, ನಳಿನಾಕ್ಷಿಯಿಂದ ಹಣ ಪಡೆಯುವ ಸಂಬಂಧ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳ ಸಮ್ಮುಖವೇ ಮಾತುಕತೆ ನಡೆಸಿರುವದು ಬಹಿರಂಗಗೊಂಡಿದೆ.
ಕಚೇರಿ ಸಿಬ್ಬಂದಿ ಮೋಹನ್ : ಮೇಡಂ... ದೌರ್ಜನ್ಯದ ಹೆಂಗಸು ನಿಮ್ಮನ್ನು ಕಾಣಲು ಇಲ್ಲಿಗೆ ಬಂದಿದ್ದಾಳೆ...
ಮಾಯದೇವಿ : ಮೋಹನ್ ಏನಂತೆ ಆಕೆಯದು - ಸುಮ್ಮನೆ ಕಾಣೋದು ಅಂತ ಬೇಡ; ಅವರೆಷ್ಟು ತಂದಿದ್ದಾಳೆ. ಸರಿಯಾಗಿ ತಿಳಿದುಕೋ... ಇಂತಹವರ ಜತೆಗೆ ಡೀಲ್ ಕಷ್ಟ.
ಮೋಹನ್ : ಇಲ್ಲ ಮೇಡಂ ನಿಮ್ಮನ್ನೇ ಕಾಣಬೇಕೆಂತೆ... ಹಣ ತಂದಿದ್ದಾಳೆ.