ಕೂಡಿಗೆ, ನ. 16: ಸೋಮವಾರಪೇಟೆ ತಾಲೂಕು ಹೆಚ್ಚು ಭತ್ತವನ್ನು ಬೆಳೆಯುವ ಪ್ರದೇಶವಾಗಿದೆ. ಹಾರಂಗಿ ಅಚ್ಚುಕಟ್ಟು ಪ್ರದೇಶದ ನೀರಾವರಿಯಿಂದ ಹಾರಂಗಿಯಿಂದ ಕೊಡಗಿನ ಗಡಿಭಾಗದ ಗ್ರಾಮ ಶಿರಂಗಾಲದವರೆಗೆ ವಿವಿಧ ಹೈಬ್ರಿಡ್ ತಳಿಯ ಭತ್ತವನ್ನು ಬೆಳೆಯಲಾಗುತ್ತಿದ್ದು, ಭತ್ತವನ್ನು ಮಾರಾಟ ಮಾಡಲು ರೈತರು ಪರದಾಡುವಂತಾಗಿದೆ. ಈ ಹಿನ್ನೆಲೆ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಉತ್ತಮ ಗೋದಾಮು ಇರುವದರಿಂದ ಸರ್ಕಾರ ಭತ್ತದ ಖರೀದಿ ಕೇಂದ್ರವನ್ನು ತೆರೆದು, ಸೂಕ್ತ ಬೆಲೆ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಕಳೆದ ಸಾಲಿನಲ್ಲಿ ರೈತರು ಬೆಳದ ಭತ್ತವನ್ನು ಕಟಾವು ಮಾಡಿದ ಎರಡು ತಿಂಗಳ ನಂತರ ಭತ್ತದ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿತ್ತು. ಆದರೆ, ಕೇಂದ್ರವು ಪ್ರಾರಂಭವಾಗಲು ತಡವಾದ ಪರಿಣಾಮ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿ ಭತ್ತದ ದರದಲ್ಲಿ, ತೂಕದಲ್ಲಿ ಅನ್ಯಾಯವಾಗುತ್ತಿದೆ. ಈ ಬಾರಿಯೂ ರೈತರಿಗೆ ಅನ್ಯಾಯವಾಗದಂತೆ ಭತ್ತ ಮಾರಾಟದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಂಬಂಧಪಟ್ಟ ಕೃಷಿ ಇಲಾಖೆ ಮತ್ತು ಆಹಾರ ಸರಬರಾಜು ಇಲಾಖೆಯ ಅಧಿಕಾರಿಗಳು ಶೀಘ್ರವಾಗಿ ಈ ಸಾಲಿನಲ್ಲಿ ಭತ್ತದ ಕಟಾವಿನ ಸಂದರ್ಭಕ್ಕೆ ಸರಿಯಾಗಿ ಭತ್ತದ ಖರೀದಿ ಕೇಂದ್ರವನ್ನು ಡಿಸೆಂಬರ್ ಮೊದಲ ವಾರದಿಂದಲೇ ಪ್ರಾರಂಭಿಸಿ ರೈತರಿಗೆ ಸರ್ಕಾರ ನಿಗದಿ ಮಾಡಿದ ಬೆಲೆಯಲ್ಲಿ ರೈತರಿಂದ ಭತ್ತವನ್ನು ಖರೀದಿಸಿ, ರೈತರಿಗೆ ಅನ್ಯಾಯವಾಗದಂತೆ ತಡೆಯಲು ಮುಂದಾಗಬೇಕೆಂದು ಕುಶಾಲನಗರ ಹೋಬಳಿ ವ್ಯಾಪ್ತಿಯ ತೊರೆನೂರು, ಹೆಬ್ಬಾಲೆ, ಕೂಡಿಗೆ, ಶಿರಂಗಾಲ ಗ್ರಾಮದ ರೈತರು ಆಗ್ರಹಿಸಿದ್ದಾರೆ.
ಈಗಾಗಲೇ ಕೆಲವು ಭಾಗಗಳಲ್ಲಿ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಕೆಲವು ರೈತರು ಪ್ರಕೃತಿ ವಿಕೋಪದ ನಡುವೆಯೂ ಕಡಿಮೆ ಮಟ್ಟದಲ್ಲಿ ಬೆಳೆದಿದ್ದ ಭತ್ತವು ಕಟಾವಿಗೆ ಬಂದಿದೆ.
ಈ ಸಾಲಿನಲ್ಲಿ ಮುಸುಕಿನ ಜೋಳದ ಖರೀದಿ ಕೇಂದ್ರವನ್ನು ರದ್ದು ಮಾಡಿರುವದು ರೈತರಿಗೆ ಅನ್ಯಾಯ ಮಾಡಿದಂತಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 3665 ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಲಾಗಿದ್ದು, 300 ಕ್ಕೂ ಹೆಚ್ಚು ಲಾರಿಯ ಜೋಳವನ್ನು ಖರೀದಿಸುವ ನೆಪದಲ್ಲಿ ಮಧ್ಯವರ್ತಿಗಳು ದರ ಮತ್ತು ತೂಕದಲ್ಲಿ ವಂಚಿಸಿ ರೈತರೊಂದಿಗೆ ಜಗವಾಡಿರುವ ಪ್ರಸಂಗಗಳು ನಡೆದಿವೆ. ಖರೀದಿ ಕೇಂದ್ರವನ್ನು ರದ್ದು ಮಾಡಿರುವದರಿಂದ ರೈತರಿಗೆ ಅನ್ಯಾಯವಾಗಿದೆ. ಶೀಘ್ರವಾಗಿ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಹೋಬಳಿ ಕೇಂದ್ರದಲ್ಲಿ ಭತ್ತ ಖರೀದಿ ಕೇಂದ್ರವನ್ನು ತೆರೆಯುವಂತೆ ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ, ನಿದೇರ್ಶಕ ಟಿ.ಕೆ. ಪಾಂಡುರಂಗ, ಚಂದ್ರಪ್ಪ, ಕೂಡಿಗೆ ಗ್ರಾ.ಪಂ. ಸದಸ್ಯ ಟಿ.ಕೆ. ವಿಶ್ವನಾಥ್, ಮಂಜಯ್ಯ ಹಾಗೂ ರೈತ ಮುಖಂಡರು ಆಗ್ರಹಿಸಿದ್ದಾರೆ.