ಸುಂಟಿಕೊಪ್ಪ, ನ. 15: ಇಲ್ಲಿನ ಪೌರ ಕಾರ್ಮಿಕರಾದ ರಾಮಚಂದ್ರ ಎಂಬವರು ತಮ್ಮ ಸಂಬಂದಿಕರ ಮನೆಗೆ ಸ್ಕೂಟರ್ ಹೋಡಾ ಡಿಯೋದಲ್ಲಿ ತೆರಳುವ ಸಂದರ್ಭ ದಾರಿ ಮಧ್ಯೆ ಕಾರು ಡಿಕ್ಕಿಯಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದೆ. ಸುಂಟಿಕೊಪ್ಪ ಗದ್ದೆಹಳ್ಳ ನಿವಾಸಿ ರಾಮಚಂದ್ರ ಎಂಬವರು ಸುಂಟಿಕೊಪ್ಪದ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತಾ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ತಮ್ಮ ಪತ್ನಿ ಯಶೋಧರೊಂದಿಗೆ

ಶ್ರೀರಂಗ¥ಟ್ಟಣದ ನಗುವಿನ ಹಳ್ಳಿಯಲ್ಲಿ ವಾಸವಿರುವ ನಾದಿನಿ ಮನೆಗೆ ತೆರಳಿದ್ದು, ತಾ.13ರಂದು (ಕೆ.ಎ.12-ಕ್ಯೂ-4310) ಹೋಡಾ ಡಿಯೋ ಸ್ಕೂಟರಿನಲ್ಲಿ ಸುಂಟಿಕೊಪ್ಪಕ್ಕೆ ಮರಳಿ ಬರುತ್ತಿದ್ದರು. ನಗುವಿನ ಹಳ್ಳಿ ಸಮೀಪ ಬೆಂಗಳೂರು ಮೈಸೂರು ಹೆದ್ದಾರಿ ದಾಟಲೆಂದು ರಸ್ತೆ ಬದಿ ಸ್ಕೂಟರನ್ನು ನಿಲ್ಲಿಸಿದ್ದಾರೆ. ಇದೇ ಸಂದರ್ಭ ಬೆಂಗಳೂರು ಕಡೆಯಿಂದ ಅತೀ ವೇಗದಿಂದ ಬಂದ ಕಾರು (ಕೆ.ಎ.03-ಎ.ಎಫ್421) ಸ್ಕೂಟರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಸ್ಕೂಟರಿನ ಹಿಂಬದಿಯಲ್ಲಿದ್ದ ಪತ್ನಿ ಯಶೋಧ ಮತ್ತು ರಾಮಚಂದ್ರ ರಸ್ತೆಗೆ ಬಿದ್ದಿದ್ದಾರೆ. ಇದರಿಂದ ರಾಮಚಂದ್ರ ಅವರಿಗೆ ಸೊಂಟ, ಎದೆ, ಕುತ್ತಿಗೆ, ಬಲಕೈಗೆ ಗಂಭೀರ ಗಾಯಗೊಂಡು ಶ್ರೀರಂಗಪಟ್ಟಣದ ಪ್ರಾಥಮಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮೈಸೂರಿನ ವಿದ್ಯಾರಣ್ಯಪುರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪತ್ನಿ ಯಶೋಧ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿದೆ. ರಾಮಚಂದ್ರ ಅವರ ಸ್ಕೂಟರಿಗೆ ಡಿಕ್ಕಿ ಹೊಡೆದ ಕಾರು ಪರಾರಿಯಾಗುವದನ್ನು ಮನಗಂಡು ಕೆಲವರು ಬೈಕಿನಲ್ಲಿ ಬೆನ್ನತ್ತಿದ್ದಾರೆ. ಈ ಸಂದರ್ಭ ಕಾರು ಬೇರೊಂದು ಬೊಲೇರೋ ವಾಹನಕ್ಕೆ ಡಿಕ್ಕಿಯಾಗಿ ನಿಂತಿದೆ. ಕಾರು ನಜ್ಜುಗುಜ್ಜಾಗಿದ್ದು, ಕಾರಿನ ಚಾಲಕನನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ.