ಕುಶಾಲನಗರ: ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಹೋಬಳಿ ಘಟಕದ ವತಿಯಿಂದ 40 ಸಾವಿರ ರೂಪಾಯಿಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ.

ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಆಗಿರುವ ನಷ್ಟದ ಹಿನ್ನೆಲೆ ಸಂಘದ ಪದಾಧಿಕಾರಿಗಳು ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಚೆಕ್‍ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಸ್ತಾಂತರಿಸಲಾಯಿತು. ಸಂಘದ ಅಧ್ಯಕ್ಷ ಡಿ.ಕೆ. ಬೊಮ್ಮಯ್ಯ, ಉಪಾಧ್ಯಕ್ಷ ಕೆ.ಇ. ಉತ್ತಪ್ಪ, ಖಜಾಂಚಿ ಸಿ.ಸಿ. ರಾಘವಯ್ಯ ಹಾಗೂ ನಿರ್ದೇಶಕ ಕೆ.ಎಂ. ಗಿರೀಶ್ ಇದ್ದರು.ಸೋಮವಾರಪೇಟೆ: ಪ್ರಾಕೃತಿಕ ವಿಕೋಪದಿಂದ ಮನೆ ಹಾಗೂ ಆಸ್ತಿಯನ್ನು ಕಳೆದುಕೊಂದು ಸಂತ್ರಸ್ತರಾಗಿರುವ ತಾಲೂಕಿನ 5 ಮಂದಿಗೆ ಬೆಂಗಳೂರಿನ ವಿದ್ಯುತ್ ಇಲಾಖೆಯಲ್ಲಿ ಸಹಾಯಕ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿರುವ ಮೋಹನ್ ಅವರು ತಲಾ 10 ಸಾವಿರದಂತೆ ರೂ. 50 ಸಾವಿರ ಪರಿಹಾರ ವಿತರಿಸಿದರು.

ತಾಲೂಕಿನ ಮಾದಾಪುರ ಸಮೀಪದ ಇಗ್ಗೋಡ್ಲು ಗ್ರಾಮದ ದೇವಯ್ಯ, ರೀತುಕುಮಾರ್, ಕಾವೇರಪ್ಪ, ಜಂಬೂರಿನ ರವಿ, ಮುಕ್ಕೋಡ್ಲಿನ ಸುಶೀಲ ಅವರುಗಳಿಗೆ ಸಹಾಯ ಧನ ವಿತರಿಸಲಾಯಿತು. ಈ ಸಂದರ್ಭ ಬೆಟ್ಟಗಳಲೆ ಗ್ರಾಮದ ಮೋಹನ್ ಉಪಸ್ಥಿತರಿದ್ದರು.ಗೋಣಿಕೊಪ್ಪಲು: ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ಹಲವು ರೀತಿಯಲ್ಲಿ ತೊಂದರೆಗೊಳಗಾಗಿ ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾಸಂಸ್ಥೆಯಲ್ಲಿ ಆಶ್ರಯ ಪಡೆದಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗೋಣಿಕೊಪ್ಪಲು ವಿನ ಜಯಲಕ್ಷ್ಮಿ ಜ್ಯುವೆಲ್ಲರಿ ಮಾಲೀಕರು ಹಾಗೂ ದಾನಿಗಳಾದ ಎಂ.ಜಿ. ಮೋಹನ್ ಅವರು 36 ಸಾವಿರ ಮೌಲ್ಯದ ಯು.ಪಿ.ಎಸ್. ಅನ್ನು ದಾನವಾಗಿ ನೀಡಿದರು.

ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾಸಂಸ್ಥೆಗೆ ತೆರಳಿದ ಮೋಹನ್ ಅವರು ಅಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದಿನನಿತ್ಯ ಓದುವ ಸಮಯದಲ್ಲಿ ತೊಂದರೆ ಯಾಗದಂತೆ ಇವರ ಅನುಕೂಲ ಕ್ಕಾಗಿ ಯು.ಪಿ.ಎಸ್.ಅನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಝರು ಗಣಪತಿ ಅವರಿಗೆ ಹಸ್ತಾಂತರಿಸಿದರು. ನಂತರ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.ಮಡಿಕೇರಿ: ಕೊಡಗಿನ ನೆರೆ ಸಂತ್ರಸ್ತರಿಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ರಾಜರಾಜೇಶ್ವರಿ ನಗರದ ಶಾಖೆಯ ಯೋಗ ಬಂಧುಗಳು ಮುಕೋಡ್ಲು ಹಾಗೂ ಕಾಲೂರಿನ 198 ನೆರೆ ಸಂತ್ರಸ್ತರಿಗೆ ಪಿಜನ್ ಕಂಪೆನಿಯ “ಪ್ರೆಶರ್ ಕುಕ್ಕರ್”ನ್ನು ರಾಜ್ಯೋತ್ಸವದ ಕೊಡುಗೆಯಾಗಿ ವಿತರಿಸಿದರು.

ಈ ಸಂದರ್ಭ ಭಾರತೀಯ ವಿದ್ಯಾಭವನದ ಸಲೀಲ ಪಾಟ್ಕರ್ ಹಾಗೂ ಮುಕ್ಕೋಡ್ಲಿನ ಮೊಣ್ಣಂಡ ಮಿಟ್ಟು ಪೂಣಚ್ಚ ಮತ್ತು ಹಂಚೆಟ್ಟಿರ ಮನು ಅವರ ನೆರವಿನೊಂದಿಗೆ ಸಾಮಗ್ರಿಗಳನ್ನು ಅರ್ಹ ಫಲಾನುಭವಿಗಳಿಗೆ ಅವರವರ ಗ್ರಾಮದಲ್ಲಿ ವಿತರಿಸಲಾಯಿತು.

ಈ ಸಂದರ್ಭ ಕಾಲೂರಿನ ದೇವಸ್ಥಾನದ ಅರ್ಚಕ ನಾಗೇಶ್ ಕಾಲೂರು ಅವರು ಸೂಕ್ತ ಸಲಹೆಗಳನ್ನು ನೀಡಿದರು. ಮನೆಯನ್ನು ಕಳೆದುಕೊಂಡ 4 ಸಂತಸ್ತರಿಗೆ ಸ್ವಲ್ಪ ಹಣ ಹಾಗೂ ಕೆಲ ಸಾಮಗ್ರಿಗಳನ್ನು ವಿತರಿಸಲಾಯಿತು. ಎರಡೂ ಗ್ರಾಮದಲ್ಲಿ ಯೋಗ ಬಂಧುಗಳು ಶಾಂತಿ ಮಂತ್ರವನ್ನು ಪಠಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

ಶಿವಕುಮಾರ್, ವೆಂಕಟೇಶ್ವರಲು, ಮಹಾದೇವರಾವ್, ಸತೀಶ್, ಗೋಪಾಲಕೃಷ್ಣ, ಗೋವಿಂದರಾವ್, ಆಲ್ಮಚಂಡ ಕಾವೇರಿ ಸುಬ್ರಮಣಿ, ಪದ್ಮಿನಿ, ಜಾನಕಿ, ಕನಕ, ಸರೋಜಮ್ಮ ಉಪಸ್ಥಿತರಿದ್ದರು.