ಗೋಣಿಕೊಪ್ಪಲು, ನ. 15 : ಕಾಡು ಮಕ್ಕಳ ಸ್ವಾತಂತ್ರ್ಯಕ್ಕೆ ಹೋರಾಡಿದ ಕೆಚ್ಚೆದೆಯ ಬಿರ್ಸಾಮುಂಡ ಅವರನ್ನು ನಾವು ಮರೆತಿರುವದು ವಿಷಾದನೀಯ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಜಡೇಗೌಡ ಹೇಳಿದರು.
ತಿತಿಮತಿ ಸಮುದಾಯ ಭವನದಲ್ಲಿ ಬುಡಕಟ್ಟು ಕೃಷಿಕರ ಸಂಘದ ವತಿಯಿಂದ ನಡೆದ ಬಿರ್ಸಾಮುಂಡರ 143ನೇ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಹಲವಾರು ಹೋರಾಟಗಾರರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಆದರೇ ರಾಂಚಿಯ ಕಾಡಿನ ಯುವಕನೊಬ್ಬ ಬ್ರಿಟಿಷರ ವಿರುದ್ದ ಹೋರಾಡಿ ಇಂದು ಆದಿವಾಸಿ ಜನಾಂಗವನ್ನು ಸ್ವಾತಂತ್ರ್ಯಗೊಳಿಸಿದ್ದಾನೆ ಅಂತವನನ್ನು ನಾವು ಇಂದು ಮರೆತಿರುವದು ವಿಷಾದನೀಯ. ಇಂದಿನ ಯುವಜನತೆ ಬಿರ್ಸಮುಂಡರ ಜೀವನ ಚರಿತ್ರೆಯನ್ನು ಓದಬೇಕು. ಬಿರ್ಸಾಮುಂಡ ಅವರÀ ಜಯಂತಿ ದೇಶದೆಲ್ಲೆಡೆ ಆಚರಿಸುವಂತಾಗಬೇಕು. ಆದಿವಾಸಿ ಜನಾಂಗ ಶಿಕ್ಷಣವಂತಾರಾಗಿ ಸಂಘಟಿತಗೊಂಡರೆ ಎಲ್ಲರಂತೆ ಮುಖ್ಯವಾಹಿನಿಗೆ ತರಬಹುದು ಎಂದರು.
ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ ಬೋಪಣ್ಣ ಮಾತನಾಡಿ, ಬುಡಕಟ್ಟು ಜನಾಂಗದಲ್ಲಿ ಹುಟ್ಟಿ ಹೋರಾಟದ ಕಿಚ್ಚು ಹಚ್ಚಿದ ಇಂತವರ ಜಯಂತಿಯನ್ನು ಸರ್ಕಾರ ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಜಯಂತಿ ಆಚರಣೆಗೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಿದೆ ಎಂದರು.
ಜಿ.ಪಂ. ಸದಸ್ಯೆ ಪಂಕಜ ಮಾತನಾಡಿ, ಬೀರ್ಸಾಮುಂಡ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಜೊತೆಗೆ ಜನಾಂಗದ ಆಚಾರ, ವಿಚಾರವನ್ನು ಮರೆಯಬಾರದು ಎಂದರು.
ಗಿರಿಜನ ಸಮಗ್ರ ಯೋಜನಾಧಿಕಾರಿ ಶಿವಕುಮಾರ್ ಮಾತನಾಡಿ, ಸರ್ಕಾgದ ಸೌಲಭ್ಯ ಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸ್ಥಳೀಯ ಜನಪ್ರತಿನಿಧಿಗಳು ಕೂಡ ಸರ್ಕಾರದ ಯೋಜನೆ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಹಿಂದುಳಿದಿರುವ ಆದಿವಾಸಿ ಜನಾಂಗವನ್ನು ಮೇಲೆತ್ತುವ ಕೆಲಸವಾಗಬೇಕಿದೆ ಎಂದರು.
ಇದಕ್ಕೂ ಮೊದಲು ತಿತಿಮತಿಯ ಮುಖ್ಯ ಬೀದಿಗಳಲ್ಲಿ ಬಿರ್ಸಾಮುಂಡರ ಭಾವಚಿತ್ರ ಸಮೇತ ನೂರಾರು ಮಂದಿ ಮೆರವಣಿಗೆ ಸಾಗಿದರು. ಕಾರ್ಯಕ್ರಮದಲ್ಲಿ 12 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಯಿತು.
ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ರಾಮು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯೆ ಆಶಾ ಜೇಮ್ಸ್, ಸುಮಾ, ತಿತಿಮತಿ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್, ರಾಜ್ಯ ವನ್ಯಜೀವಿ ಸಲಹಾ ಮಂಡಳಿ ಸದಸ್ಯ ಸುಬ್ರು, ಆದಿವಾಸಿ ಹೋರಾಟ ಗಾರರಾದ ಜೆ.ಕೆ ರಾಮು, ಇಂದಿರಾ ಸೇರಿದಂತೆ ಗ್ರಾ.ಪಂ. ಸದಸ್ಯರು ಪಾಲ್ಗೊಂಡಿದ್ದರು.