ವೀರಾಜಪೇಟೆ, ನ. 15: ಪೂರ್ವಕಾಲದ ಸಹಕಾರಿ ಚಳವಳಿ ಇಂದು ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿದೆ. ಇದರೊಂದಿಗೆ ಇಂದು ಕೊಡಗಿನ ಬೆಳೆಗಾರರು, ರೈತರು ಆಧುನಿಕ ಕೃಷಿಯಲ್ಲಿ ತೊಡಗಿಸಿಕೊಂಡು ಅದಕ್ಕೆ ಹೊಂದಿಕೊಂಡು ಕೃಷಿಯಲ್ಲಿ ಅಭಿವೃದ್ದಿ ಸಾಧಿಸಿದ್ದಾರೆ. ಕೊಡಗು ರಾಷ್ಟ್ರದಲ್ಲಿಯೇ ಸಹಕಾರಿ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮಡಿಕೇರಿಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಶ್ಲಾಘಿಸಿದರು.
ಇಲ್ಲಿನ ಪಟ್ಟಣ ಸಹಕಾರ ಬ್ಯಾಂಕ್ನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಮಡಿಕೇರಿಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಕೊಡಗು ಜಿಲ್ಲೆ ಸಹಕಾರ ಇಲಾಖೆ, ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್, ಜಿಲ್ಲಾ ಸಹಕಾರ ಮಹಾ ಮಂಡಳ, ಪ್ರಾಥಮಿಕ ಕೃಷಿ ಸಹಕಾರ ಸಂಘ, ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ, ತಾಲೂಕು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ಮೇಣ ಮತ್ತು ಜೇನು ಉತ್ಪಾದಕರ ಸಂಘ, ತಾಲೂಕು ಸಹಕಾರ ಕೂಟ, ಕೊಡಗು ಮುಸ್ಲಿಂ ಸಹಕಾರ ಸಂಘ, ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ, ಕೊಡಗು ಉಪಾಧ್ಯಾಯರ ಸ್ಟೋರ್ಸ್, ತಾಲೂಕು ಅಲ್ಪಸಂಖ್ಯಾತರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ, ಜನತಾ ಗ್ರಾಹಕರ ಸಂಘ, ಕೊಡಗು ಮಾಜಿ ಸೈನಿಕರ ಸಹಕಾರ ಸಂಘ ಹಾಗೂ ಸಂತ ಅನ್ನಮ್ಮ ಗ್ರಾಹಕರ ಸಹಕಾರ ಸೇರಿದಂತೆ ಇತರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 65ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಮನು ಮುತ್ತಪ್ಪ, ಪ್ರಪ್ರಥಮವಾಗಿ ಸಹಕಾರಿ ಚಳವಳಿ ಲಂಡನ್ನಲ್ಲಿ 1952 ರಲ್ಲಿ ಆರಂಭವಾದರೆ ಕರ್ನಾಟಕದಲ್ಲಿ ಗದಗಿನ ಕನ್ನಗಿನಾಳದಲ್ಲಿ 1905 ರಲ್ಲಿ ಆರಂಭವಾಯಿತು. ಕೊಡಗಿನಲ್ಲಿ ಸೋಮವಾರಪೇಟೆಯ ತೋಳೂರು ಶೆಟ್ಟಳ್ಳಿಯಲ್ಲಿ ದೊಡ್ಡಯ್ಯ ಅವರು ಇದಕ್ಕೆ ಚಾಲನೆ ನೀಡಿದ್ದರು. ಕೊಡಗಿನಲ್ಲಿ ಹಿಂದಿನಿಂದಲೂ ಸಹಕಾರಿ ಕ್ಷೇತ್ರ ಉಳಿದು ಬೆಳೆದು ಬರುತ್ತಿದೆ. ವೀರಾಜಪೇಟೆ ತಾಲೂಕಿನಲ್ಲಿ ಸಹಕಾರಿಗಳು ಇಂದು ಅಧಿಕವಾಗಿದ್ದು, ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಕೊಡಗಿನ ಗಾಂಧಿ ಎಂದು ಹೆಸರುಗಳಿಸಿದ್ದ ಪಂದ್ಯಂಡ ಬೆಳ್ಯಪ್ಪ ಕೊಡಗಿನಲ್ಲಿ ಪದವಿ ಕಾಲೇಜಿನ ಕೊರತೆ ನೀಗಿಸುವ ಸಲುವಾಗಿ ಮಡಿಕೇರಿಯಲ್ಲಿ ಎಫ್.ಎಂ.ಸಿ. ಕಾಲೇಜಿನ ಆರಂಭಕ್ಕೆ ಕಾರಣರಾದರು. ಇದಕ್ಕಾಗಿ ದೆಹಲಿಯಲ್ಲಿ ನಿರಂತರವಾಗಿ ಪ್ರಧಾನಿ ನೆಹರು ಜೊತೆ ಸಂರ್ಪಕ ಬೆಳೆಸಿ ಕಾರ್ಯ ನಿರ್ವಹಿಸಿದ್ದರು. ಅದೇ ರೀತಿ ಕೊಡಗಿನ ಸಹಕಾರ ಕ್ಷೇತ್ರದಲ್ಲಿ ಮಹತ್ವದ ಪಾತ್ರ ನಿಭಾಯಿಸಿದ ಹೆಗ್ಗಳಿಕೆ ಅವರದು. ಆದ್ದರಿಂದ ಮಡಿಕೇರಿಯ ಪ್ರಮುಖ ರಸ್ತೆಯಲ್ಲಿ ಅವರ ಪ್ರತಿಮೆ ಸ್ಥಾಪನೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದರು.
ಸಮಾರಂಭವನ್ನುದ್ದೇಶಿಸಿ ಸಹಕಾರ ಸಂಘಗಳ ಪ್ರಮುಖರಾದ ಬಿ.ಆರ್. ಮಹಮ್ಮದ್ ಶೋಯೇಬ್, ಚೇಂದ್ರಿಮಾಡ ನಂಜಪ್ಪ, ಎಂ.ಎಂ. ನಂಜಪ್ಪ ಮತ್ತಿತರರು ಮಾತನಾಡಿದರು. ಸಮಾರಂಭದಲ್ಲಿ ಅತಿಥಿಗಳಾಗಿ, ಜಿಲ್ಲಾ ಕೇಂದ್ರ ಬ್ಯಾಂಕ್ನ ನಿರ್ದೇಶಕ ಪಟ್ರಪಂಡ ರಘು ನಾಣಯ್ಯ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ಉಪಾಧ್ಯಕ್ಷ ಪಾಲಚಂಡ ಅಚ್ಚಯ್ಯ, ಜಿಲ್ಲಾ ಕೇಂದ್ರ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಕನ್ನಂಡ ಸಂಪತ್, ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ನಿರ್ದೇಶಕ ನಂದಿನೆರವಂಡ ರವಿ ಬಸಪ್ಪ, ವೀರಾಜಪೇಟೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಅಮ್ಮಣಿಚಂಡ ರಾಜ ನಂಜಪ್ಪ, ವೀರಾಜಪೇಟೆ ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಬೊಳಕಾರಂಡ ಅಯ್ಯಣ್ಣ, ತಾಲೂಕು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬೊಟ್ಟಂಗಡ ಬಿ. ಮುತ್ತಪ್ಪ, ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಂಘದ ಅಧ್ಯಕ್ಷ ಕೋಡಿರ ಚಂಗಪ್ಪ, ತಾಲೂಕು ಸಹಕಾರ ಕೂಟದ ಅಧ್ಯಕ್ಷ ಮಾಳೇಟಿರ ನಂಜಪ್ಪ, ಕೊಡಗು ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ, ತಾಲೂಕು ಅಲ್ಪಸಂಖ್ಯಾತ ಮಹಿಳೆಯರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ತಸ್ಲಿಂ ಅಕ್ತರ್, ವೀರಾಜಪೇಟೆ ಜನತಾ ಗ್ರಾಹಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಹೆಚ್. ಮೊಯಿನುದ್ದೀನ್, ಕೊಡಗು ಮಾಜಿ ಸೈನಿಕರ ಸಹಕಾರ ಸಂಘ, ಕೊಡಗು ಉಪಾಧ್ಯಾಯರ ಸ್ಟೋರ್ಸ್ನ ಅಧ್ಯಕ್ಷ ಎ.ಡಿ. ಸೋಮಯ್ಯ., ಮಡಿಕೇರಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಹೆಚ್.ಡಿ. ರವಿ ಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಿ.ಎಂ. ಅಪ್ಪಯ್ಯ, ಪಿ.ಯು. ಮಾದಪ್ಪ, ಎಸ್.ಹೆಚ್. ಮೊಯಿನುದ್ದೀನ್, ಬೇಬಿ ಮೇದಪ್ಪ ಮತ್ತು ಜೆ.ಎನ್. ವಸಂತದೇವಿ ಇವರನ್ನು ಸನ್ಮಾನಿಸಲಾಯಿತು. ದಿನದ ಮಹತ್ವದ ಕುರಿತು ಹಾಗೂ “ಸಾವಯವ ಕೃಷಿ ಮತ್ತು ಶೂನ್ಯ ಬಂಡವಾಳದ ಕೃಷಿಯಲ್ಲಿ ಸಹಕಾರ ಸಂಘಗಳ ಪ್ರಮುಖ ಪಾತ್ರ”ದ ವಿಷಯವಾಗಿ ಮಡಿಕೇರಿಯ ಕೆ.ಐ.ಸಿ.ಎಂ. ಪ್ರಾಂಶುಪಾಲ ಪುಟ್ಟಸ್ವಾಮಿ ಮಾಹಿತಿ ನೀಡಿದರು.
ಸಮಾರಂಭದ ಆಧ್ಯಕ್ಷತೆ ವಹಿಸಿದ್ದ ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷರು ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಕರ್ನಂಡ ರಘು ಸೋಮಯ್ಯ ಮಾತನಾಡಿ, ಪ್ರತಿಯೊಂದು ಸಹಕಾರ ಸಂಘಗಳ ನಿರ್ದೇಶಕರು, ಸದಸ್ಯರುಗಳಿಗೆ ಸಹಕಾರ ಸಂಘಗಳ ತತ್ವ-ಸಿದ್ಧಾಂತಗಳ ಕುರಿತು ಅರಿವಿರಬೇಕು. ಸಹಕಾರ ಸಂಘಗಳಿಂದ ಸದಸ್ಯರುಗಳಿಗೆ ದೊರೆಯುವ ಸೌಲಭ್ಯಗಳು, ವಿಶೇಷವಾಗಿ ಕೃಷಿ ಸಾಲ ಸಾಲ ಸೌಲಭ್ಯಗಳ ಯೋಜನೆಯನ್ನು ತಿಳಿದುಕೊಂಡಿರಬೇಕು. ಸಹಕಾರ ಸಂಘಗಳು ವಾರ್ಷಿಕವಾಗಿ ಆಯೋಜಿಸುವ ಸಹಕಾರ ಸಪ್ತಾಹ ಇನ್ನಿತರ ಸಹಕಾರಿ ಕಾರ್ಯಕ್ರಮಗಳಲ್ಲಿ ಖುದ್ದು ಭಾಗವಹಿಸಿ ಸಹಕಾರ ಕ್ಷೇತ್ರದಲ್ಲಿನ ಸಾಧನೆಗೆ ಕಾರಣರಾಗಬೇಕು ಎಂದು ಹೇಳಿದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.