ಸೋಮವಾರಪೇಟೆ, ನ. 15: ತಾಲೂಕಿನ ಕಿರಗಂದೂರು ಗ್ರಾಮ ಪಂಚಾಯಿತಿಯನ್ನು ಅತಿವೃಷ್ಟಿ ಪೀಡಿತ ಪ್ರದೇಶ ಎಂದು ಘೋಷಿಸಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಕ್ಷಣ ಜನಸಂಪರ್ಕ ಸಭೆ ನಡೆಸಿ, ಸಂತ್ರಸ್ತರ ಅಹವಾಲು ಆಲಿಸಬೇಕೆಂದು ಆಗ್ರಹಿಸಿರುವ ಗ್ರಾಮಸ್ಥರು, ತಪ್ಪಿದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಕಾಫಿ ಬೆಳೆಗಾರರ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಸಿ. ಮುದ್ದಪ್ಪ ಅವರು, ಕಿರಗಂದೂರು ಗ್ರಾ.ಪಂ. ವ್ಯಾಪ್ತಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಆಲಿಸಲು ಜನಸಂಪರ್ಕ ಸಭೆ ನಡೆಸುವಂತೆ ಈ ಹಿಂದೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ತಹಶೀಲ್ದಾರ್ ನೀಡಿದ ಭರವಸೆ ಹುಸಿಯಾಗಿದೆ ಎಂದು ಆರೋಪಿಸಿದರು. ಕಿರಗಂದೂರು, ತಾಕೇರಿ, ಬಿಳಿಗೇರಿ ಭಾಗದಲ್ಲಿ ಹೆಚ್ಚಿನ ಹಾನಿ ಸಂಭವಿಸಿದ್ದರೂ ಯಾವದೇ ಪರಿಹಾರ ಲಭಿಸಿಲ್ಲ. ಕಾಫಿ, ಕರಿಮೆಣಸು, ಭತ್ತ ಸಂಪೂರ್ಣ ಹಾನಿಯಾಗಿದ್ದು, ಸಾಲ ಮರುಪಾವತಿ ಸಾಧ್ಯವೇ ಇಲ್ಲ. ಕಂದಾಯ ಕಟ್ಟಲೂ ಆಗುವದಿಲ್ಲ. ಕೃಷಿಕರು ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಮಕ್ಕಳಗುಡಿ ಬೆಟ್ಟದ ತಳಭಾಗದಲ್ಲಿ ಭೂಕುಸಿತ ಸಂಭವಿಸಿದ್ದು, 58 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇದರೊಂದಿಗೆ ಗ್ರಾಮದ ಸುರೇಂದ್ರ, ಶೆಟ್ಟೇರ ಕುಟುಂಬಸ್ಥರ ಅಸ್ತಿಪಾಸ್ತಿ, ತೋಟ ಹಾನಿಯಾಗಿದ್ದರೂ ಯಾರೂ ಇತ್ತ ತಲೆಹಾಕಿಲ್ಲ. ಮನೆಗಳನ್ನು ಕಳೆದುಕೊಂಡಿರುವ ನಿರ್ಗತಿಕರಿಗೆ ಬದಲಿ ನಿವೇಶನವನ್ನೂ ನೀಡಿಲ್ಲ. ಈ ಭಾಗದಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಭೂ ವಿಜ್ಞಾನಿಗಳಿಂದ ಪರಿಶೀಲಿಸಿ ವಾಸಕ್ಕೆ ಯೋಗ್ಯವೇ? ಎಂಬದನ್ನು ಪರಿಶೀಲಿಸುವಂತೆ ಒತ್ತಾಯಿಸಿದ್ದರೂ ಯಾವದೇ ಕ್ರಮ ವಹಿಸಿಲ್ಲ ಎಂದು ಕಿರಗಂದೂರು ಗ್ರಾ.ಪಂ. ಸದಸ್ಯ ಭರತ್ ಆರೋಪಿಸಿದರು.
ಕಿರಗಂದೂರು ಗ್ರಾ.ಪಂ.ಗೆ ತಕ್ಷಣ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಒದಗಿಸಬೇಕು. ಈ ಭಾಗದ ಕೃಷಿಕರ ಮಕ್ಕಳ ವಿದ್ಯಾಭ್ಯಾಸ ಹಾಗೂ ವಸತಿ ನಿಲಯದ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ವಿದ್ಯಾವಂತರಿಗೆ ಉದ್ಯೋಗವಕಾಶ ಕಲ್ಪಿಸಬೇಕು. ದಾನಿಗಳು-ಸಂಘ-ಸಂಸ್ಥೆಗಳು ನೀಡುವ ಸಹಾಯ ಧನ ನಿಜವಾದ ಸಂತ್ರಸ್ತರಿಗೆ ತಲಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಗೋಷ್ಠಿಯಲ್ಲಿದ್ದ ಗ್ರಾ.ಪಂ. ಉಪಾಧ್ಯಕ್ಷ ಸುರೇಂದ್ರ, ಗ್ರಾಮಸ್ಥರಾದ ಶ್ಯಾಂಪ್ರಸಾದ್, ಬಿ.ಕೆ. ಗಾಂಧಿ, ದಯಾನಂದ್ ಅವರುಗಳು ಒತ್ತಾಯಿಸಿದರು.
ಕಿರಗಂದೂರು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಮುಂದಿನ 15 ದಿನದೊಳಗೆ ವಿಶೇಷ ಜನಸಂಪರ್ಕ ಸಭೆ ಕರೆಯಬೇಕು. ಭೂವಿಜ್ಞಾನಿಗಳಿಂದ ಪರಿಶೀಲನೆ ನಡೆಸಲು ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಮೂರೂ ಗ್ರಾಮಗಳ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಪ್ರಮುಖರು ಎಚ್ಚರಿಕೆ ನೀಡಿದರು.