ಕೂಡಿಗೆ, ನ. 15: ಹೆಬ್ಬಾಲೆ ಮತ್ತು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯು ಮೊದಲು ತೊರೆನೂರು ಸಹಕಾರ ಸಂಘದ ವ್ಯಾಪ್ತಿಗೊಳಪಟ್ಟಿತ್ತು. ಈ ಎರಡು ಗ್ರಾಮ ಪಂಚಾಯಿತಿಯು ಜನಸಂಖ್ಯೆ ಮತ್ತು ಸಹಕಾರ ಸಂಘದ ಸದಸ್ಯರು ಹೆಚ್ಚಾಗಿದ್ದ ಹಿನ್ನೆಲೆ ರಾಜ್ಯ ಸರ್ಕಾರದ ಹೊಸ ನೀತಿಯಂತೆ ಶಿರಂಗಾಲ ಮತ್ತು ಹೆಬ್ಬಾಲೆಗಳಲ್ಲಿ ನೂತನವಾಗಿ ಸಹಕಾರ ಸಂಘ ಆರಂಭವಾಗಿವೆ. ಇದೀಗ ಹೆಬ್ಬಾಲೆ ಸಹಕಾರ ಸಂಘದ ಚುನಾವಣೆ ತಾ. 25 ರಂದು ನಿಗದಿಗೊಂಡಿರುವ ಹಿನ್ನೆಲೆ ಪ್ರಕ್ರಿಯೆ ಚುರುಕುಗೊಂಡಿದೆ.
ಈಗಾಗಲೇ ತೊರೆನೂರು ಸಹಕಾರ ಸಂಘ ಆಡಳಿತ ಮಂಡಳಿಯ ನಿರ್ದೇಶಕರ, ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಶಿರಂಗಾಲ ಸಹಕಾರ ಸಂಘದ ಚುನಾವಣೆ ಡಿಸೆಂಬರ್ ಮೊದಲ ವಾರದಲ್ಲಿ ನಡೆಯಲಿದೆ. ಹೆಬ್ಬಾಲೆ ಮತ್ತು ಶಿರಂಗಾಲ ನೂತನ ಸಹಕಾರ ಸಂಘಗಳಿಗೆ ಬೇಕಾಗುವ ಕಟ್ಟಡ ಮತ್ತು ಗೋದಾಮು ವ್ಯವಸ್ಥೆಯನ್ನು ಮೊದಲಿದ್ದ ಆಡಳಿತ ಮಂಡಳಿಯವರು ಆಯಾ ಗ್ರಾಮಗಳಲ್ಲಿ ಕಲ್ಪಿಸಿದ್ದಾರೆ.
ಹೆಬ್ಬಾಲೆ ಸಹಕಾರ ಸಂಘವು 1300ಕ್ಕೂ ಹೆಚ್ಚು ಸಾಲಗಾರ ರೈತರನ್ನು ಹೊಂದಿದ್ದು, 600 ಕ್ಕೂ ಹೆಚ್ಚು ಸಾಲಗಾರರಲ್ಲದ ರೈತರನ್ನು ಹೊಂದಿದೆ.