ಸುಂಟಿಕೊಪ್ಪ, ನ. 13: ಸಂಘಟನೆಯಿಂದ ವ್ಯಕ್ತಿಯ ವೈಯಕ್ತಿಕ ಬೆಳವಣಿಗೆ ಹೊಂದಲು ಸಾಧ್ಯ ಎನ್ನುವದಕ್ಕೆ ಜನನಿ ಸ್ವಸಹಾಯ ಸಂಘದ ಸದಸ್ಯರೇ ಉದಾಹರಣೆ ಯಾಗಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಂಟಿಕೊಪ್ಪ ಮೇಲ್ವಿಚಾರಕಿ ಕಾಂತಿಮಣಿ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾಕೂರು-ಶಿರಂಗಾಲ, ಕಾನ್‍ಬೈಲ್ ಗ್ರಾಮದ ಜನನಿ ಸ್ವಸಹಾಯ ಸಂಘದ 10ನೇ ವಾರ್ಷಿಕೋತ್ಸವ ಕಾನ್‍ಬೈಲ್ ತೋಟದ ಆವರಣದಲ್ಲಿ ಆಯೋಜಿಸಲಾದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮೇಲ್ವಿಚಾರಕಿ ಕಾಂತಿಮಣಿ, ಯಾವದೇ ಗ್ರಾಮೀಣ ಪ್ರದೇಶದ ವ್ಯಕ್ತಿಯು ವೈಯಕ್ತಿಕವಾಗಿ ಬೆಳವಣಿಗೆಗೊಳ್ಳಲು ಕಷ್ಟಸಾಧ್ಯ, ಸಂಘಟನೆಯಿಂದ ಮಾತ್ರ ವ್ಯಕ್ತಿಯು ಬೆಳವಣಿಗೆ ಹೊಂದಲು ಸಾಧ್ಯವಾಗಲಿದೆ ಎಂದರು.
ಈ ಸಂಘದ ಎಲ್ಲಾ ಸದಸ್ಯರು 10 ವರ್ಷಗಳಲ್ಲಿ ಸ್ವಂತ ಸೂರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವದೇ ಸಾಕ್ಷಿಯಾಗಿದೆ. ವೈಯಕ್ತಿಕ ಅಭಿವೃದ್ಧಿ ಹೊಂದ ಬೇಕಾದರೆ ಮೊದಲು ಯೋಜನೆ ಯನ್ನು ರೂಪಿಸಿ ಕೊಂಡಾಗ ಅಭಿವೃದ್ಧಿ ಹೊಂದಲು, ಪಡೆದ ಸಾಲವನ್ನು ಮರು ಪಾವತಿಸಲು ಸುಲಭವಾಗಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನೀಡುವ ಎಲ್ಲಾ ತರಬೇತಿ ಕಾರ್ಯಾಗಾರ, ಸಭೆಗಳಲ್ಲಿ ಪಾಲ್ಗೊಂಡು ಅಲ್ಲಿನ ಸವಲತ್ತುಗಳ ಬಗ್ಗೆ ಮಾಹಿತಿಗಳನ್ನು ಸದ್ಬಳಕೆ ಗೊಳಿಸುವ ಮೂಲಕ ಅಭಿವೃದ್ಧಿಪಥ ಸಾಗುವಂತೆ ಕಿವಿಮಾತು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾನ್‍ಬೈಲ್ ತೋಟದ ವ್ಯವಸ್ಥಾಪಕ ಪಿ.ಜಿ. ಹೆಗ್ಡೆ ವಹಿಸಿದರು. ಮುಖ್ಯ ಅತಿಥಿಗಳಾಗಿ ನಾಕೂರು-ಶಿರಂಗಾಲ, ಕಾನ್‍ಬೈಲ್ ಒಕ್ಕೂಟದ ಅಧ್ಯಕ್ಷೆ ಕತ್ತೀಜ, ನಾಕೂರು-ಶಿರಂಗಾಲ ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ ಬಸವರಾಜು, ಸೇವಾ ಪ್ರತಿನಿಧಿ ಶಿವಕುಮಾರ್ ಮಾತನಾಡಿದರು. ಸಂಘದ ಸದಸ್ಯರು ಇದ್ದರು.