ಮಡಿಕೇರಿ, ನ.13: ಮೂರ್ನಾಡು ಸಮೀಪದ ಐಕೊಳ ತಾಜ್ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ತಾಜುಲ್ ಉಲಮಾ ಮಸೀದಿಯನ್ನು ಅಸ್ಸಯ್ಯಿದ್ ಸುಹೈಲ್ ಅಸ್ಸಕ್ವಾಫ್ ತಂಗಳ್ ಅವರು ಉದ್ಘಾಟಿಸಿದರು. ಕೆ.ಕೆ.ಯೂಸಫ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಸಖಾಫಿ ಉದ್ಘಾಟನಾ ಭಾಷಣ ಮಾಡಿದರು. ಕೆ.ಎ.ಮಹಮೂದ್ ಮುಸ್ಲಿಯಾರ್ ಪ್ರಾರ್ಥನೆ ನೆರವೇರಿಸಿದರು. ಅಬ್ದುಲ್ ಸಮದ್ ಅಮಾನಿ ಸಂಗಡಿಗರಿಂದ ಬುರ್ದಾ ಆಲಾಪನೆ ನಡೆಯಿತು. ಮಾಸ್ಟರ್ ನಬೀಲ್, ಮಾಸ್ಟರ್ ಮುಹೀನ್ ಬೆಂಗಳೂರು ನಹ್ತ್ ಷರೀಫ್ ಹಾಡಿದರು.

ಈ ಸಂದರ್ಭ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಸೀದಿ ಸಮಿತಿ ಕಾರ್ಯದರ್ಶಿ ಅಬ್ದುಲ್ ಲತೀಫ್ ಎಂ.ಜಿ ಮಾತನಾಡಿ ಸರ್ವರ ಸಹಕಾರದಿಂದ ನೂತನ ಮಸೀದಿ ನಿರ್ಮಾಣಗೊಂಡಿದ್ದು, ಎಲ್ಲರಿಗೂ ಧನ್ಯವಾದ ಸಮರ್ಪಿಸುವದಾಗಿ ತಿಳಿಸಿದರು. ಅತಿವೃಷ್ಟಿ ಹಾನಿ ಸಂತ್ರಸ್ತರಿಗಾಗಿ ಭೂದಾನ ಮಾಡಿದ ಜಿ.ಪಂ. ಸದಸ್ಯ ಪಿ.ಎಂ.ಲತೀಫ್ ಅವರನ್ನು ಇದೇ ಸಂದರ್ಭ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.