ಕುಶಾಲನಗರ, ನ. 13: ಬಿಎಸ್‍ಎನ್‍ಎಲ್ ಸಂಸ್ಥೆ ಉಳಿವಿಗಾಗಿ ಹೋರಾಟದ ಅನಿವಾರ್ಯತೆ ಉಂಟಾಗಿದೆ ಎಂದು ಬಿಎಸ್‍ಎನ್‍ಎಲ್ ನೌಕರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಸಿ.ಕೆ. ಗುಂಡಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಸ್ಪರ್ಧಾತ್ಮಕ ಬೆಳವಣಿಗೆಯ ನಡುವೆ ಸೇವೆಯ ಗುರಿ ಹೊಂದಿರುವ ಬಿಎಸ್‍ಎನ್‍ಎಲ್ ನಷ್ಟದ ಹಾದಿ ಹಿಡಿಯುವಂತಾಗಿದೆ. ಈ ನಿಟ್ಟಿನಲ್ಲಿ ನೌಕರರು ಉತ್ತಮ ಸೇವೆ ನೀಡುವದರೊಂದಿಗೆ ಸಂಸ್ಥೆಯ ಏಳಿಗೆಗಾಗಿ ಪಣತೊಡಬೇಕಾಗಿದೆ ಎಂದರು.
ನೌಕರರು, ಖಾಸಗಿ ಗುತ್ತಿಗೆ ಆಧಾರದ ನೌಕರರು ಸೇವಾ ಮನೋಭಾವನೆಯೊಂದಿಗೆ ಕಾರ್ಯ ತತ್ಪರರಾಗಬೇಕಾಗಿದೆ ಎಂದರು. ಡಿಸೆಂಬರ್ ತಿಂಗಳಲ್ಲಿ ಸಂಘಟನೆಯ ಅಖಿಲ ಭಾರತ ಮಟ್ಟದ ಸಮಾವೇಶ ಮೈಸೂರಿನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಡಿಸೆಂಬರ್ 17 ರಿಂದ 20 ರ ತನಕ ನಡೆಯಲಿರುವ ಸಮಾವೇಶದಲ್ಲಿ 1500 ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಕೊಡಗು ಜಿಲ್ಲಾ ಸಂಘದ ಅಧ್ಯಕ್ಷ ಜಿ.ಜಿ. ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಸುದರ್ಶನ್, ಕೇಶವ್, ವಲಯ ಸಹ ಕಾರ್ಯದರ್ಶಿಗಳಾದ ಇರ್ಫಾನ್ ಪಾಷ, ಕುಶಾಲಪ್ಪ, ಜಿಲ್ಲಾ ಕಾರ್ಯದರ್ಶಿ ವಿಜಯ ಅಂಥೋಣಿ, ಪ್ರಕಾಶ್, ಕೇಶವಯ್ಯ, ವಲಯ ಮಾಜಿ ಸಹ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಪದಾಧಿಕಾರಿಗಳು ಇದ್ದರು.