ಮಡಿಕೇರಿ, ನ. 13: ಪ್ರಾಕೃತಿಕ ವಿಕೋಪದಿಂದ ಸಂಸ್ರಸ್ತರಾಗಿರುವ ಜಿಲ್ಲೆಯ ಜನತೆಗೆ ಮಿಡಿದಿರುವ ಬಾಂಬೆ ಕೂರ್ಗ್ ಅಸೋಸಿ ಯೇಷನ್‍ನ ಪ್ರಮುಖರು ರೂ. 12 ಲಕ್ಷದ ಭಾರೀ ಕೊಡುಗೆಯನ್ನು ನೀಡುವ ಮೂಲಕ ಸ್ಪಂದಿಸಿದ್ದಾರೆ.

ನಿನ್ನೆ ನಗರದ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬೈಯಿಂದ ಆಗಮಿಸಿದ ತಂಡದ ಸದಸ್ಯರು ಹಾನಿಗೊಳಗಾದ 39 ಕುಟುಂಬಗಳಿಗೆ ತಲಾ ರೂ. 25 ಸಾವಿರದಂತೆ ರೂ. 12 ಲಕ್ಷ ನೆರವನ್ನು ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಬಾಂಬೆ ಕೂರ್ಗ್ ಅಸೋಸಿ ಯೇಷನ್‍ನ ಟ್ರಸ್ಟಿ ಬಿದ್ದಂಡ ಜಗದೀಶ್ ನಂಜಪ್ಪ ಅವರು, ಪ್ರಾಕೃತಿಕ ವಿಕೋಪದಿಂದ ಹಲವು ರೀತಿಯಲ್ಲಿ ಸಮಸ್ಯೆ ಉಂಟಾಗಿದ್ದು, ಅಂತಹವರಿಗೆ ನೆರವು ನೀಡಲು ಯತ್ನಿಸಿರುವದಾಗಿ ಹೇಳಿದರು.

ಮತ್ತೋರ್ವ ಟ್ರಸ್ಟಿ ನಾಪಂಡ ರಮೇಶ್ ಅವರು ಮಾತನಾಡಿ, ಸಂಸ್ಥೆಯಿಂದ 39 ಕುಟುಂಬಗಳಿಗೆ ತಲಾ ರೂ. 25 ಸಾವಿರ ಹಣದ ಸಹಾಯ ನೀಡಲಾಗುತ್ತಿದೆ. ಸಂತ್ರಸ್ತರಾದವರಿಗೆ ಎಲ್ಲಾ ರೀತಿಯಲ್ಲೂ ಧೈರ್ಯ ತುಂಬ ಬೇಕಾಗಿದೆ ಎಂದರು.

ಟ್ರಸ್ಟಿಗಳಾದ ಮಚ್ಚಂಗಡ ಅಪ್ಪಯ್ಯ, ಕರ್ತಮಾಡ ತಿಮ್ಮಯ್ಯ, ಕರ್ತಮಾಡ ವಿವೇಕ್, ನಾಪಂಡ ಹೇಮಂತ್, ಭಾರತೀಯ ವಿದ್ಯಾಭವನದ ಕೊಂಗಾಂಡ ಎಸ್. ದೇವಯ್ಯ ಈ ಸಂದರ್ಭ ಹಾಜರಿದ್ದರು.