ಗೋಣಿಕೊಪ್ಪಲು, ನ. 13: ಗೋಣಿಕೊಪ್ಪಲಿನಲ್ಲಿ ನ. 5 ರಂದು ಪ್ರಜ್ಞಾ ಕಾವೇರಿ ವೇದಿಕೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪ್ರವಾದಿ ಅವರ ಬಗ್ಗೆ ಅವಹೇಳನ ಕಾರಿ ಭಾಷಣ ಮಾಡಿದ್ದರು. ಎಂಬ ಆಧಾರದಲ್ಲಿ ಅಂಕಣಕಾರ ಹಾಗೂ ಪತ್ರಕರ್ತ ಮಾಣಿಪಂಡ ಸಂತೋಷ್ ತಮ್ಮಯ್ಯ (37) ಅವರನ್ನು ಗೋಣಿಕೊಪ್ಪಲು ಪೊಲೀಸರು ನಿನ್ನೆ ಮಧ್ಯರಾತ್ರಿ ಬಂಧಿಸಿದ್ದಾರೆ. ಸಂತೋಷ್ ಅವರ ಪತ್ನಿಯ ತವರು ಮನೆ ತುಮಕೂರಿನ ಮಧುಗಿರಿಯ ಕರಿಲಿಂಗೇಗೌಡ ಎಂಬವರ ಮನೆಯಿಂದ ಸಂತೋಷ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಇಂದು ಪೊನ್ನಂಪೇಟೆ ನ್ಯಾಯಾಲಯಕ್ಕೆ ಮಧ್ಯಾಹ್ನ ಹಾಜರು ಪಡಿಸಲಾಯಿತು. ತಡ ಸಂಜೆ ಸಂತೋಷ್ ತಮ್ಮಯ್ಯ ಅವರನ್ನು ಜಾಮೀನಿನ ಮೇರೆ ನ್ಯಾಯಾಧೀಶ ಮೋಹನ್ ಗೌಡ ಅವರು ಬಿಡುಗಡೆ ಮಾಡಿದರು. ತಾ. 5 ರಂದು ಗೋಣಿಕೊಪ್ಪಲುವಿನಲ್ಲ್ಲಿ ಪ್ರಜ್ಞಾ ಕಾವೇರಿ ಸಂಘಟನೆ ವತಿಯಿಂದ ಆಯೋಜಿಸಿದ್ದ ಟಿಪ್ಪು ಕರಾಳ ಮುಖಗಳ ಅನಾವರಣ ಕಾರ್ಯ ಕ್ರಮದಲ್ಲಿ ಇಸ್ಲಾಂ ಧರ್ಮ ಹಾಗೂ ಪ್ರವಾದಿ ಅವರ ಮೇಲೆ ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ, ಸ್ಥಳೀಯ ಪತ್ರಿಕೆ ಯೊಂದರಲ್ಲಿ ಪ್ರಕಟಗೊಂಡಿದ್ದ ವರದಿ ಯನ್ನಾಧರಿಸಿ ಅಂಕಣಕಾರ ಸಂತೋಷ್ ತಮ್ಮಯ್ಯ ವಿರುದ್ದ ಸಿದ್ದಾಪುರದ ಆಸ್ಕರ್ ಎಂಬÀವರು ದೂರು ದಾಖಲಿಸಿದ್ದರು. ಇದರಂತೆ ಬಂಧಿಸಿ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ.

ಈ ಬಂಧನವನ್ನು ವಿರೋಧಿಸಿ ಸಂಘ ಪರಿವಾರ ಕಾರ್ಯಕರ್ತರು ಗೋಣಿಕೊಪ್ಪಲುವಿನಲ್ಲಿ ಇಂದು ಮಾನವ ಸರಪಳಿ ಹಾಗೂ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭ ಸಂತೋಷ್ ತಮ್ಮಯ್ಯ ವಿರುದ್ಧ ವೀರಾಜಪೇಟೆ ಯಲ್ಲಿ ಪ್ರತ್ಯೇಕ ಎರಡು ಬಾರಿ ಮುಸಲ್ಮಾನರು ಪ್ರತಿಭಟನೆ ನಡೆಸಿ ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಇನ್ನೊಂದೆಡೆ, ನಾಪೋಕ್ಲುವಿನ ಎಂ.ಆಸಿಫ್ ಎಂಬವರು ಸಾಮಾಜಿಕ ಜಾಲ ತಾಣದಲ್ಲಿ ಹಿಂದೂ ಸಮುದಾಯದ ವಿರುದ್ಧ ಧರ್ಮ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿರುವ ಪೊನ್ನಂಟೇಟೆ ಕೊಡವ ಸಮಾಜ

(ಮೊದಲ ಪುಟದಿಂದ) ಪ್ರಮುಖರು ಆಸಿಫ್ ಬಂಧನಕ್ಕೆ ಆಗ್ರಹಿಸಿದ್ದಾರೆ.. ಅಲ್ಲದೆ, ಜಿಲ್ಲಾ ಸಂಘ ಪರಿವಾರದಿಂದ ಬುಧವಾರ 12 ರಿಂದ ಮ. 1 ಗಂಟೆವರೆಗೆ ಕೊಡಗು ಬಂದ್‍ಗೆ ಕರೆ ನೀಡಲಾಗಿದೆ.

ದಮನಕಾರಿ ನೀತಿ ಸಹಿಸುವದಿಲ್ಲ : ಸಂಘ ಪರಿವಾರದ ಪ್ರಮುಖರಾದ ಚಕ್ಕೇರ ಮನು ಮುಂದಾಳತ್ವದಲ್ಲಿ ಗೋಣಿಕೊಪ್ಪಲುವಿ ನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯು ಸ್ಥಳೀಯ ಉಮಾಮಹೇಶ್ವರಿ ದೇವಸ್ಥಾನದಿಂದ ಹೊರಟು ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸುವದ ರೊಂದಿಗೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವದರ ಮೂಲಕ ತಮ್ಮಯ್ಯ ಅÀವರ ಬಂಧನವನ್ನು ಖಂಡಿಸಲಾಯಿತು.

ಬಸ್ ನಿಲ್ದಾಣದಲ್ಲಿ ಸಾರ್ವಜನಿ ಕರನ್ನು ಉದ್ದೇಶಿಸಿ ಮಾತನಾಡಿದ ಚಕ್ಕೇರ ಮನು ಅವರು, ವೀರರ, ಸತ್ಯದ ನಾಡಿನಲ್ಲಿ ನಾವು ಆರಂಭದಿಂದಲೂ ಟಿಪ್ಪು ಜಯಂತಿಗೆ ವಿರೋಧ ಮಾಡುತ್ತಲೇ ಬಂದಿದ್ದೇವೆ. ನಮ್ಮ ಕಾರ್ಯಕರ್ತರ ಬಲಿದಾನ ವಾಗಿದೆ. ನಾವು ಯಾವದಕ್ಕೂ ಅಂಜುವದಿಲ್ಲ, ಹೆದರುವದಿಲ್ಲ. ಪೊಲೀಸ್ ಕೇಸಿನ ಮೂಲಕ, ಬೆದರಿಕೆಯ ಮುಖಾಂತರ ನÀಮ್ಮನ್ನು ಬಾಯಿ ಮುಚ್ಚಿಸಲು ಪ್ರಯತ್ನ ನಡೆಸಿದರೆ ಇದು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರ ಟಿಪ್ಪುವಿನ ವಿಚಾರದಲ್ಲಿ ವೈಭವೀಕರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಕಾರ್ಯಕರ್ತರ ಮೇಲೆ ಮಾತ್ರ ಪೊಲೀಸರು ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿದರು. ಬಸ್ ನಿಲ್ದಾಣದ ಎದುರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸ ಲಾಯಿತು. ಹಿಂದೂ ಸಂಘಟನೆಗಳ ಕರೆಯಂತೆ ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ 1 ಗಂಟೆವರೆಗೆ ಅಂಗಡಿ-ಮುಂಗಟ್ಟು ಮುಚ್ಚಿ ವಿರೋಧ ವ್ಯಕ್ತಪಡಿಸಲಾಯಿತು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ ಮಾತನಾಡಿ, ಒಂದು ವರ್ಗದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಇದಾಗಿದೆ ಎಂದರು. ಈ ಸಂದರ್ಭ ಪ್ರಮುಖರುಗಳಾದ ಐನಂಡ ಜಪ್ಪು, ಸುಬ್ರಮಣಿ, ಕೊಣಿಯಂಡ ಬೋಜಮ್ಮ, ಸಿ.ಕೆ. ಬೋಪಣ್ಣ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಗೋಣಿಕೊಪ್ಪಲುವಿನ ಪ್ರತಿಭಟನೆಯಲ್ಲಿ ಸಂಘ ಪರಿವಾರದ ಪ್ರಮುಖರಾದ ಮಾಚಿಮಾಡ ರವೀಂದ್ರ, ಅರಮಣಮಾಡ ರಂಜನ್ ಚಂಗಪ್ಪ, ಮಂಜು ರೈ, ಸುಬ್ರಮಣ್ಯ, ಗಣೇಶ್, ನೆಲ್ಲೀರ ಚಲನ್, ಚೀರಂಡ ಕಂದಾ ಸುಬ್ಬಯ್ಯ, ಮಧು ದೇವಯ್ಯ, ಕೊಲ್ಲೀರ ಧರ್ಮಜ, ಕೆ.ಬಿ. ಗಿರೀಶ್ ಗಣಪತಿ, ಸೇರಿದಂತೆ ನೂರಾರು ಪ್ರಮುಖರು ಪಾಲ್ಗೊಂಡಿದ್ದರು. ಡಿವೈಎಸ್ಪಿ ನಾಗಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಅ.12 ಗಂಟೆಯಿಂದ 1 ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಪ್ರತಿಭಟನೆಯಿಂದ ಕೆಲ ಕಾಲ ವಾಹನ ಸಂಚಾರದಲ್ಲಿ ಆಡಚಣೆಯಾಗಿತ್ತು.

ಹಿನ್ನೆಲೆ : ನ.5 ರ ಸಂವಾದ ಕಾರ್ಯಕ್ರಮದಲ್ಲಿ ಸಂತೋಷ್ ತಮ್ಮಯ್ಯ ಪ್ರವಾದಿ ವಿರುದ್ಧ ಮಾತನಾಡಿದ್ದರು ಎಂಬ ಆರೋಪವು ತಮ್ಮಯ್ಯನವರ ಮೇಲೆ ಕೇಳಿ ಬಂದಿತ್ತು. ಈ ಭಾಷಣದಿಂದ ಆಕ್ರೋಶಗೊಂಡ ಮುಸ್ಲಿಂ ಸಂಘಟನೆಗಳು ಪ್ರತಿಭಟಿಸಿ ಸಂತೋಷ್ ತಮ್ಮಯ್ಯ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದವು. ಈ ಬಗ್ಗೆ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಸಂತೋಷ್ ತಮ್ಮಯ್ಯ ಸೇರಿದಂತೆ ಐವರ ಮೇಲೆ ಸಿದ್ದಾಪುರದ ಆಸ್ಕರ್ ಎಂಬವರು ಲಿಖಿತ ದೂರು ನೀಡಿದ್ದರು. ದೂರನ್ನು ಪರಿಶೀಲಿಸಿದ ಗೋಣಿಕೊಪ್ಪ ಠಾಣೆಯ ಪೊಲೀಸರು ಆರಂಭದ ತನಿಖೆಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡಿದ್ದರು. ಆ ದಿನ ಸಮರಂಭದಲ್ಲಿ ನಾಟಕಕಾರ ಅಡ್ಡಂಡ ಕಾರ್ಯಪ್ಪ, ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಜಾರಿಯೋ ಹಾಗೂ ಸಾಹಿತಿ ಚಿಕ್ಕರಂಗೇಗೌಡ ಹಾಜರಿದ್ದರೂ ಇವರುಗಳ ಮೇಲಿನ ಆರೋಪಕ್ಕೆ ಯಾವದೇ ಸಾಕ್ಷಿ ಇಲ್ಲದಿದ್ದು ಅರೋಪಪಟ್ಟಿಯಿಂದ ಕೈ ಬಿಟ್ಟಿರುವದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಇತ್ತ ಪೊಲೀಸರು ಸಂತೋಷ್ ತಮ್ಮಯ್ಯ ಅವರನ್ನು ಬಂಧಿಸಲು ಹುಡುಕಾಟ ನಡೆಸಿದ್ದರು. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ತಮ್ಮಯ್ಯ ಅವರ ಪತ್ನಿಯ ಮನೆಯಲ್ಲಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ ಗೋಣಿಕೊಪ್ಪ ಪೊಲೀಸರು ತಾ.12ರ ಮಧ್ಯರಾತ್ರಿ ವೇಳೆಯಲ್ಲಿ ಸಂತೋಷ್ ತಮ್ಮಯ್ಯ ಅವರನ್ನು ವಶಕ್ಕೆ ಪಡೆದು ಗೋಣಿಕೊಪ್ಪಲು ಠಾಣೆಗೆ ಕರೆ ತರಲಾಯಿತು. ನಂತರ ಸಂತೋಷ್ ತಮ್ಮಯ್ಯ ಅವರ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಪೊಲೀಸರು ಸಂತೋಷ್ ತಮ್ಮಯ್ಯ ಅವರÀನ್ನು ಬಂಧಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವಂತೆಯೆ ಗೋಣಿಕೊಪ್ಪಲು ಪೊಲೀಸ್ ಠಾಣೆಗೆ ಸಂಘ ಪರಿವಾರದ ಪ್ರಮುಖರು ಆಗಮಿಸಿ ವೃತ್ತ ನಿರೀಕ್ಷಕರಾದ ದಿವಾಕರ್‍ರವರೊಂದಿಗೆ ಮಾತುಕತೆ ನಡೆಸಿದರು. ಆಗಮಿಸಿದ್ದ ಮುಖಂಡರು ಸಂತೋಷ್ ತಮ್ಮಯ್ಯ ಅÀವರೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಿದರು. ಠಾಣೆಯ ಮುಂದೆ ಹೆಚ್ಚಿನ ಜನತೆ ಆಗಮಿಸುತ್ತಿದ್ದಂತೆಯೇ ಮುಂಜಾಗೃತಾ ಕ್ರಮವಾಗಿ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.

ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿÉ ಸಂಘ ಪರಿವಾರದ ಪ್ರಮುಖರಾದ ಚಕ್ಕೇರ ಮನು, ಮಾಚಿಮಾಡ ರವೀಂದ್ರ, ನೆಲ್ಲಿರ ಚಲನ್, ಅರುಣ್ ಭೀಮಯ್ಯ, ಕಿರಣ್, ರಾಮಕೃಷ್ಣ, ಸಿಡಿ ಮಾದಪ್ಪ, ಸಿ.ಕೆ.ಬೋಪಣ್ಣ, ಲಾಲಾ ಅಯ್ಯಣ್ಣ, ಮಂಜು ರೈ, ಗಣೇಶ್ ರೈ, ಅಶೋಕ್ ರೈ, ಕೊಣಿಯಂಡ ಬೋಜಮ್ಮ, ಯುಕೋ ಸಂಘಟನೆಯ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ರಾಬಿನ್ ಸೇರಿದಂತೆ ಅನೇಕ ಮುಖಂಡರು ಜಮಾಯಿಸಿದ್ದರು. ಡಿವೈಎಸ್‍ಪಿ ನಾಗಪ್ಪ, ಗೋಣಿಕೊಪ್ಪಲು ಠಾಣಾಧಿಕಾರಿ ಶ್ರೀಧರ್, ಪೊನ್ನಂಪೇಟೆ ಠಾಣಾಧಿಕಾರಿ ಮಹೇಶ್, ವೀರಾಜಪೇಟೆ ಠಾಣಾಧಿಕಾರಿ ಸುರೇಶ್ ಬೋಪಣ್ಣ ಗೋಣಿಕೊಪ್ಪಲು ಠಾಣೆಯಲ್ಲಿ ಮೊಖ್ಖಾಂ ಹೂಡಿದ್ದರು.

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧÀಕ್ಕೆ : ಸಂವಾದ ಕಾರ್ಯಕ್ರಮ ಮುಕ್ತವಾಗಿ ನಡೆದಿತ್ತು. ವಿಚಾರಗಳನ್ನು ವೇದಿಕೆಯಲ್ಲಿ ಚರ್ಚಿಸುವ ಅವಕಾಶ ಕಲ್ಪಿಸಲಾಗಿತ್ತು. ನಾವು ಮಾತನಾಡುವ ಹಕ್ಕನ್ನು ಪಡೆದಿದ್ದೇವೆ. ಆದರೆ ಈ ಬೆಳವಣಿಗೆ ನೋಡಿದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧÀಕ್ಕೆ ತಂದಂತಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ.ಮನಸ್ಸಿಗೆ ಒಂದಷ್ಟು ನೋವಾಗಿದೆ ನ್ಯಾಯಾಲಯದಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತೇನೆ ಎಂದು ಠಾಣೆಯಲ್ಲಿ ಹಾಜರಿದ್ದ ಅಂಕಣಕಾರ ಸಂತೋಷ್ ತಮ್ಮಯ್ಯ ‘ಶಕ್ತಿ’ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸಂತೋಷ್ ಅವರನ್ನು ವೈದ್ಯಕೀಯ ಪರೀಕ್ಷೆ ಹಾಗೂ ನ್ಯಾಯಾಲಯಕ್ಕೆ ಕರೆದೊಯ್ಯುವ ಸಂದÀರ್ಭ ಹಿಂದೂಪರ ಸಂಘಟನೆ ಕಾರ್ಯಕರ್ತರು “ಬೋಲೋ ಜೈಭಾರತ್ ಮಾತಾಕಿ ಜೈ” ಎಂಬ ಘೋಷಣೆ ಕೂಗಿದರು. ಕೊಡಗಿನ ಕೇಸರಿ ಸಂತೋಷ್ ಎಂದು ಸಂತೋಷ್ ಪರ ಘೋಷಣೆ ಕೂಗಿ ನ್ಯಾಯಕ್ಕೆ ಒತ್ತಾಯಿಸಿದರು.

ಬುಧವಾರ ಬಂದ್ ಕರೆ : ಸಂತೋಷ್ ತಮ್ಮಯ್ಯ ಅವರ ಬಂಧನ ಹಿಂದೂ ಪರ ಸಂಘಟನೆಗಳ ವಿರುದ್ದ ನಡೆಯುತ್ತಿರುವ ಪಿತೂರಿಯಾಗಿದ್ದು, ಅವರಿಗೆ ನ್ಯಾಯ ಒದಗಿಸಬೇಕು ಹಾಗೂ ಜನಾಂಗೀಯ ನಿಂದÀನೆ ಮಾಡಿರುವ ಆಸೀಫ್ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಬುಧವಾರ 1 ಗಂಟೆಗಳ ಕಾಲ ಕೊಡಗು ಬಂದ್‍ಗೆ ಹಿಂದೂ ಸುರಕ್ಷಾ ವೇದಿಕೆ ಕರೆ ನೀಡಿದೆ. ಈ ಸಂದರ್ಭ ತಾ.ಪಂ. ಉಪಾದ್ಯಕ್ಷ ನೆಲ್ಲಿರಾಚೆಲನ್, ಹಿಂದು ಜಾಗರಣ ವೇದಿಕೆಯ ತಾÀಲೂಕು ಅಧ್ಯಕ್ಷ ಶರತ್ ಉಪಸ್ಥಿತರಿದ್ದರು. ಬಿ.ಜೆ.ಪಿ. ತಾಲೂಕು ಮಂಡಲ ಅಧ್ಯಕ್ಷ ಅರುಣ್ ಭೀಮಯ್ಯ, ತಾ.ಪಂ. ಉಪಾದ್ಯಕ್ಷ ನೆಲ್ಲಿರ ಚೆಲನ್, ಜಿ.ಪಂ. ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಜಿ.ಪಂ. ಮಾಜಿ ಸದಸ್ಯ ಅರಮಣಮಾಡ ರಂಜನ್, ಜಿಲ್ಲಾ ಬಿ.ಜೆ.ಪಿ. ಮಾಜಿ ಅದ್ಯಕ್ಷ ರವೀಂದ್ರ, ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಸದಸ್ಯೆ ರತಿ ಅಚಪ್ಪ, ರಾಮಕೃಷ್ಣ, ಸೇರಿದಂತೆ ನುರಾರು ಕಾರ್ಯಕರ್ತರು ಹಾಜರಿದ್ದರು.

ಪತ್ರಿಕಾ ಹೇಳಿಕೆ ನೀಡಿರುವ ಹಿಂದೂ ಸುರಕ್ಷಾ ವೇದಿಕೆ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ತಮ್ಮಯ್ಯ ಅವರ ಬಂಧನವನ್ನು ಖಂಡಿಸಲಾಗುತ್ತದೆ. ಇವರಿಗೆ ನ್ಯಾಯ ದೊರಕಬೇಕು. ಹಾಗೂ ಕೊಡಗಿನವರ ಬಗ್ಗೆ ಜನಾಂಗೀಯ ನಿಂದನೆ ಮಾಡಿರುವ ಆಸೀಫ್ ಎಂಬವರ ವಿರುದ್ದ ಕ್ರಮಕೈಗೊಳ್ಳಬೇಕು. ಇದಕ್ಕೆ ಆಗ್ರಹಿಸಿ ಬುಧವಾರ 1 ಗಂಟೆಗಳ ಕಾಲ ಬಂದ್ ನಡೆಸಲಾಗುವುದು ಎಂದರು. ಮಧ್ಯಾಹ್ನ 12 ಗಂಟೆಯಿಂದ 1 ಗಂಟೆವರೆಗೆ ಜಿಲ್ಲೆಯ ಎಲ್ಲಾ ಪಟ್ಟಣಗಳಲ್ಲಿ ಅಂಗಡಿ-ಮುಂಗಟ್ಟು ಮುಚ್ಚಿ ಬೆಂಬಲ ನೀಡುವಂತೆ ಕೋರಿದ್ದಾರೆ.

ನ್ಯಾಯಾಂಗದ ಮೇಲೆ ನಂಬಿಕೆ ಇದೆ :ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದ್ದು, ನ್ಯಾಯಾಲಯದ ಮೇಲೆ ನಂಬಿಕೆ ಇಡಲಾಗಿದೆ ಎಂದು ಸಂತೋಷ್ ಪರ ವಕೀಲ ಕೃಷ್ಣಮೂರ್ತಿ ಮಾಧ್ಯಮದೊಂದಿಗೆ ಹೇಳಿದರು.

ಕೊಡವ ಸಮಾಜ ಮುನ್ನೆಚ್ಚರಿಕೆ : ಶ್ರೀಮಂಗಲ: ಈ ನಡುವೆ ಒಂದು ಧರ್ಮದ ಮೇಲೆ ಅವಹೇಳನಕರ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ನಾಪೋಕ್ಲುವಿನ ಆಸಿಫ್ ಎಂಬವರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕೆಂದು ಪೊನ್ನಂಪೇಟೆ ಕೊಡವ ಸಮಾಜ ಆಡಳಿತ ಮಂಡಳಿ ಒತ್ತಾಯಿಸಿದೆ.

ಪೊನ್ನಂಪೇಟೆ ಕೊಡವ ಸಮಾಜದ ಅದ್ಯಕ್ಷ ಚೊಟ್ಟೇಕ್‍ಮಾಡ ರಾಜೀª ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಾಜದ ಕಛೇರಿಯಲ್ಲಿ ನಡೆದ ಆಡÀಳಿತ ಮಂಡಳಿ ಸಭೆಯಲ್ಲಿ ಒತ್ತಾಯಿಸಲಾಯಿತು. ಈ ಸಂಧರ್ಭ ನಾಪೊಕ್ಲುವಿನ ಆಸಿಫ್ ಎಂಬವರು ಒಂದು ಧರ್ಮಕ್ಕೆ ನಿಂದನೆ, ಕೋಮು ಪ್ರಚೋದನೆಗೆ ಅವಕಾಶ ನೀಡುವಂತಹ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದು ಕೂಡಲೇ ಅವರನ್ನು ಬಂಧಿಸಬೇಕು. ಬಂಧಿಸದಿದ್ದರೆ ತಾ:17 ರಂದು ಪೊನ್ನಂಪೇಟೆ ಕೊಡವ ಸಮಾಜ ಕ್ಲಬ್ ಸಭಾಂಗಣದಲ್ಲಿ ಪೂರ್ವಾಹ್ನ 10-30 ಗಂಟೆಗೆ ಈ ಬಗ್ಗೆ ಸಭೆ ಕರೆದು ಬೃಹತ್ ಪ್ರತಿಭಟನೆಗೆ ಕರೆ ನೀಡುವ ಎಚ್ಚರಿಕೆ ನೀಡಲಾಯಿತು.

ಸಭೆಯಲ್ಲಿ ಸಮಾಜದ ಉಪಾಧ್ಯಕ್ಷ ಚೆಪ್ಪುಡಿರ ಪಿ. ಬೋಪಣ್ಣ, ಕಾರ್ಯದರ್ಶಿ ಪೊನ್ನಿಮಾಡ ಎಸ್. ಸುರೇಶ್, ಜಂಟಿ ಕಾರ್ಯದರ್ಶಿ ಅಪ್ಪಂಡೇರಂಡ ಶಾರದ, ಖಜಾಂಚಿ ಮೂಕಳೇರ ಪಿ. ಲಕ್ಷ್ಮಣ, ನಿರ್ದೇಶಕರುಗಳಾದ ಮಲ್ಲಮಾಡ ಪ್ರಭು ಪೂಣಚ್ಚ, ಮೂಕಳಮಾಡ ಅರಸು ನಂಜಪ್ಪ, ಅಡ್ಡಂಡ ಸುನೀಲ್ ಸೋಮಯ್ಯ, ಚೆಪ್ಪುಡಿರ ರಾಕೇಶ್ ದೇವಯ್ಯ, ಮಂಡಚಂಡ ದಿನೇಶ್‍ಚಿಟ್ಟಿಯಪ್ಪ, ಚೆಪ್ಪುಡಿರ ರೂಪಾಉತ್ತಪ್ಪ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಹಾಜರಿದ್ದರು.

ಸಂತೋಷ್ ವಿರುದ್ಧ ಪ್ರತಿಭಟನೆ :ಗೋಣಿಕೊಪ್ಪಲುವಿನಲ್ಲ್ಲಿ ಇತ್ತಿಚೆಗೆ ನಡೆದ ಕಾರ್ಯಕ್ರದಲ್ಲಿ ರಾಜ್ಯ ಮಟ್ಟದ ದಿನಪತ್ರಿಕೆಯ ಅಂಕಣಕಾರ ಸಂತೋಷ್ ತಮ್ಮಯ್ಯ ಎಂಬವರು ಮುಸ್ಲಿಂ ಗುರು ಪ್ರವಾದಿಯವರ ಬಗ್ಗೆ ಅವಹೇಳನಾಕಾರಿ ಹೇಳಿಕೆಯನ್ನು ನೀಡಿದ್ದಾರೆ ಎಂದು ಆರೋಪಿಸಿ ಇಲ್ಲಿನ 2 ಮುಸ್ಲಿಂ ಸಂಘಟನೆಗಳು ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿದವು.