ಮಡಿಕೇರಿ, ನ. 14: ನಗರದಲ್ಲಿ ಉತ್ತಮ ಬೆಳವಣಿಗೆ ಹೊಂದುತ್ತಿರುವ ಜನರಲ್ ಕೆ.ಎಸ್. ತಿಮ್ಮಯ್ಯ ವಿದ್ಯಾಸಂಸ್ಥೆಯು ಪ್ರೌಢ ಶಿಕ್ಷಣದೊಂದಿಗೆ, ಭವಿಷ್ಯದಲ್ಲಿ ಪದವಿ ಹಂತಕ್ಕೆ ಮುಂದುವರಿದು ನಾಡಿನ ಮಕ್ಕಳಿಗೆ ಒಳ್ಳೆಯ ವಿದ್ಯೆಯನ್ನು ಕಲ್ಪಿಸುವಂತಾಗಲಿ ಎಂದು ಮಾಜಿ ಸಚಿವ ಎಂ.ಸಿ. ನಾಣಯ್ಯ ಆಶಿಸಿದರು. ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊಡಗು ಜಮೀನ್ದಾರರ ಸಂಘದ ಆಸ್ತಿಯನ್ನು ಹೊಂದಿರುವ ವಿದ್ಯಾಸಂಸ್ಥೆ ಇನ್ನಷ್ಟು ಪ್ರವರ್ಧಮಾನವಾಗಿ ಬೆಳೆಯಲೆಂದು ಆಶಿಸಿದರು.
ಮಡಿಕೇರಿ ಕೊಡವ ಸಮಾಜ ಹಾಗೂ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎಸ್. ದೇವಯ್ಯ ಆಶಯ ನುಡಿಗಳೊಂದಿಗೆ, ಪ್ರಾಕೃತಿಕ ವಿಕೋಪ ಹಿನ್ನೆಲೆ ಪ್ರಸಕ್ತ ವರ್ಷ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನೆನಪಿಸಿದರು. ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಅವರು ತಿಳಿ ಹೇಳಿದರು. ಸಂಸ್ಥೆ ಹಾಗೂ ಕೊಡವ ಸಮಾಜ ಪ್ರಮುಖರುಗಳಾದ ಚಿಣ್ಣಪ್ಪ, ಕಾಳಪ್ಪ, ಪೊನ್ನಮ್ಮ, ಪ್ರಾಂಶುಪಾಲೆ ಸರಸ್ವತಿ, ಶಿಕ್ಷಕ ವೃಂದ, ವಿದ್ಯಾರ್ಥಿ ಸಮೂಹ ಮತ್ತು ಪೋಷಕರು ಭಾಗವಹಿಸಿದ್ದರು.