ವೀರಾಜಪೇಟೆ, ನ. 14: ಕೊಡಗಿನ ಕವಿಮಿತ್ರರುಗಳು ಪರಸ್ಪರ ಸಂಧಿಸಿ, ಸಾಹಿತ್ಯದ ಬಗ್ಗೆ ಚರ್ಚೆಗಳು ನಡೆದು ಆ ಮೂಲಕ ಹೊಸ ಹೊಸ ಯುವ ಕವಿಮಿತ್ರರಿಗೆ ಅವಕಾಶ ಕಲ್ಪಿಸುತ್ತಾ ಕೊಡಗಿನ ಕವಿಗಳು ಒಂದುಗೂಡಿ ಎಳೆಯರಿಗೆ ಕಲಿಯುವ ಅವಕಾಶವನ್ನು ಒದಗಿಸಬೇಕು ಎಂದು ಮನೆ ಮನೆ ಕವಿಗೋಷ್ಠಿ ಪಿರಿಯಾ ಪಟ್ಟಣ ಖ್ಯಾತಿಯ ಮೋಹನ್ ಕಂಪ್ಲಾಪುರ ಅವರು ಅಭಿಪ್ರಾಯಪಟ್ಟರು.
ವೀರಾಜಪೇಟೆ ತಾಲೂಕಿನ ಕೆ. ಬೋಯಿಕೇರಿ ಗ್ರಾಮದ ಸಮುದಾಯ ಭವನದಲ್ಲಿ ನಡೆದ ಮನೆ ಮನೆ ಕಾವ್ಯಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೋಹನ್ ಕಂಪ್ಲಾಪುರ ಅವರು, ನಾವು ಹಿರಿಯರು ಮಕ್ಕಳಿಂದಲೂ ಕಲಿಯಬೇಕಾದ ಅನೇಕ ವಿಷಯಗಳಿವೆ. ಕಲಿಕೆ ಎಂಬದು ನಿತ್ಯ ನಿರಂತರ. ಇನ್ನು ಕೊಡಗಿನಲ್ಲಿ ಮನೆ ಮನೆ ಕಾವ್ಯಗೋಷ್ಠಿ ಬಳಗ ಯಶಸ್ವಿಯಾಗಿ ಮುನ್ನಡೆಯಲಿ, ಇದು ಕೂಡ ನಮ್ಮದೇ ಬಳಗವೆಂದು ಕೊಳ್ಳುವೆ. ಈ ಎರಡೂ ಬಳಗಗಳು ಸೇರಿ ಮುಂದೆ ಒಂದು ಉತ್ತಮ ಕಾರ್ಯಕ್ರಮವನ್ನು ಮಾಡುವಂತಹ ಯೋಜನೆ ಇದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಕಲಾವಿದ ಹಾಗೂ ಲೇಖಕರ ಬಳಗದ ಅಧ್ಯಕ್ಷರಾದ ಕೇಶವ ಕಾಮತ್ ಅವರು ಭಾರದ್ವಾಜ್ ಆನಂದ ತೀರ್ಥ ಕಣಿವೆ ಇವರ ‘ನೀರು ನುಗ್ಗಿದಾಗ’ ಲಲಿತ ಪ್ರಬಂಧಗಳ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿ, ಪ್ರತಿಯೊಬ್ಬ ಕವಿಗೂ ತನ್ನ ಬರಹ ಅಥವಾ ಕವಿತೆಯನ್ನು ಪ್ರಸ್ತುತ ಪಡಿಸಿದ ಬಳಿಕ ಸಿಗುವ ವಿಮರ್ಶೆ ಎಂಬದು ಆತನ ಮನಸ್ಸಿಗೆ ಸಿಗುವ ಬಹುಮಾನವಾಗಿದೆ. ಮತ್ಯಾವ ಪ್ರಶಸ್ತಿ ಕೂಡ ಇಂತಹ ನೆಮ್ಮದಿ ಸಂತಸ ಕೊಡಲಾಗದು. ಸಾಹಿತ್ಯ ಪರ ಚಟುವಟಿಕೆಗಳನ್ನು ಹಮ್ಮಿಕೊಂಡು ಇಂತಹ ಕೆಲಸವನ್ನು ಮಾಡ ಹೊರಟಿರುವ ಮನೆ ಮನೆ ಕಾವ್ಯಗೋಷ್ಠಿ ಬಳಗಕ್ಕೆ ಒಳಿತಾಗಲಿ ಎಂದರು. ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ಅವರು ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿಯ ಬಗ್ಗೆ ಸುಧೀರ್ಘ ಉಪನ್ಯಾಸ ನೀಡಿದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮ್ಮಣಿಚಂಡ ರಾಜಾ ನಂಜಪ್ಪ ಮಾತನಾಡಿ, ಸಾಹಿತ್ಯ ರಚನೆಗೆ ವಿದ್ಯಾಭ್ಯಾಸವಷ್ಟೇ ಮಾನದಂಡ ಅಲ್ಲ. ಅನುಭವದ ಜೊತೆಗೆ ಭಾವನೆಗಳನ್ನು ಅಭಿವ್ಯಕ್ತಿಸುವ ಮೂಲಕ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುವ ಬರಹಗಳು ನಿಜವಾದ ಸಾಹಿತ್ಯ ಎಂದರು. ಸರಸ್ವತಿ ಸ್ವಸಹಾಯ ಸಂಘದ ಅಧ್ಯಕ್ಷ ಸೌಜನ್ಯ ಸಿದ್ದಯ್ಯ ಬಳಗದ ಆಶಯವನ್ನು ಶ್ಲಾಘಿಸಿ ಶುಭ ಹಾರೈಸಿದರು. ಪಿ.ಪಿ. ಸುರೇಶ್ ಶಿಕ್ಷಕ ಮಾತನಾಡಿ, ಇಂತಹ ಪುಟ್ಟ ಗ್ರಾಮದಲ್ಲಿ ಒಂದು ಉತ್ತಮ ಸಾಹಿತ್ಯ ಕಾರ್ಯಕ್ರಮ ನಡೆಯುತ್ತಿದೆ ಎಂಬದು ನಮ್ಮ ಗ್ರಾಮಸ್ಥರಿಗೆ ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಧೋಷ್ ಪೂವಯ್ಯ, ಇದೊಂದು ಮಹೋನ್ನತ ಆಶಯವನ್ನು ಹೊಂದಿರುವ ಬಳಗವಾಗಿದೆ, ಅತ್ಯಂತ ಯಶಸ್ವಿಯಾಗಿ ಯುವ ಕವಿಗಳನ್ನು ಬೆಳೆಸುವಂತಹ ಕೆಲಸಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ತುಂಬು ಮನದ ಸಹಕಾರವನ್ನು ನೀಡುತ್ತೇನೆ. ಇಂತಹ ಕಾರ್ಯಕ್ರಮವು ಜಿಲ್ಲೆಯಾದ್ಯಂತ ಹರಡುವ ಮುಖಾಂತರ ಮನೆ ಮನೆಯನ್ನು ತಲುಪಲಿ ಎಂದರು.
ಗ್ರಾಮದ ಹಿರಿಯ ಮಹಿಳಾ ನಾಗರಿಕರಾದ ಬೋರಮ್ಮ, ಹಿರಿಯ ನಾಗರಿಕರಾದ ಟಿ.ಡಿ. ಸೋಮಯ್ಯ, ಹಿರಿಯ ನಾಟಕ ಕಲಾವಿದರು ವಿಘ್ನೇಶ್ವರ ಸೇವಾ ಸಮಿತಿ ಸಂಸ್ಥಾಪಕ ಎಂ.ಡಿ. ಹಾಲಪ್ಪ, ಕೊಡಗಿನ ಹಾಕಿ ತರಬೇತುದಾರ ಕೊಡಗಿಗೆ ಪ್ರಪ್ರಥಮವಾಗಿ ಹಾಕಿಯಲ್ಲಿ ಬೆಳ್ಳಿ ಪದಕ ಗಳಿಸಿದ ಖ್ಯಾತಿಯ ವಿನೋದ್ ಕುಮಾರ್ (ಪ್ರದೀಪ್) ಹಾಗೂ ಗ್ರಾಮದ ಮತ್ತೋರ್ವ ನಾಟಕಕಾರ ಗ್ರಾಮದ ದೇವಸ್ಥಾನದ ಅರ್ಚಕ ಪಿ.ಕೆ. ಶಿವಪ್ಪ, ಕಂಪ್ಲಾಪುರ ಮೋಹನ್ ಇವರನ್ನು ಸನ್ಮಾನಿಸಲಾಯಿತು.
ಜಿಲ್ಲೆಯ ಮೂರು ತಾಲೂಕುಗಳಿಂದ ಆಗಮಿಸಿದ ಕವಿಮನಸ್ಸುಗಳಿಂದ ಕವಿಗೋಷ್ಠಿ ಯಲ್ಲಿ ಕವನಗಳು ವಾಚನ ಗೊಂಡವು. ನಂತರ ಕವನ ವಾಚಿಸಿದ ಎಲ್ಲ ಕವಿಗಳಿಗೂ ಪ್ರಮಾಣಪತ್ರ ವಿತರಿಸಿದರು. ಇದೇ ಸಂದರ್ಭದಲ್ಲಿ ವೈಲೇಶ ಪಿ.ಎಸ್ ಇವರು ಬರೆದ ಭಕ್ತಿಗೀತೆಗೆ ಟಿ.ಡಿ ಮೋಹನ್ ಅವರು ರಾಗ ಸಂಯೋಜಿಸಿ ಹಾಡಿದರೆ ಕಲಾವಿದ ಬಿ.ಆರ್ ಸತೀಶ್ ತಮ್ಮ ಕುಂಚದಿಂದ ಅದ್ಭುತ ಗಣಪನ ಚಿತ್ರ ಬಿಡಿಸಿ ಕುಂಚಗಾಯನವಾಗಿಸಿದರು. ಗ್ರಾಮದ ಕವನ್ ಕುಮಾರ್ ಪಿ.ವಿ. ಸ್ವಾಗತಿಸಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕಿ ನಳಿನಾಕ್ಷಿ ನಿರೂಪಿಸಿದರೆ, ಮನೆ ಮನೆ ಕಾವ್ಯಗೋಷ್ಠಿ ಬಳಗದ ಸಂಚಾಲಕ ಪಿ.ಎಸ್. ವೈಲೇಶ್ ವಂದಿಸಿದರು.
- ರಜಿತಾ ಕಾರ್ಯಪ್ಪ