ಚೆಟ್ಟಳ್ಳಿ, ನ. 14: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಕಟ್ಟಡದ ಹಿಂಭಾಗದಲ್ಲಿ ಗಬ್ಬೆದ್ದು ನಾರುತ್ತಿರುವ ಕಸದ ರಾಶಿಯನ್ನು ಪಂಚಾಯಿತಿ ತೆರವು ಗೊಳಿಸಿ ಶಾಶ್ವತ ಪರಿಹಾರ ಕಲ್ಪಿಸುವ ಮೂಲಕ ಕಾಯಿಲೆಗಳು ಹರಡದಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಗ್ರಾಮಸಭೆಯಲ್ಲಿ ಒತ್ತಾಯಿಸಿದರು.
ಪಂಚಾಯಿತಿ ಹಿಂಬದಿಯಲ್ಲೇ ಕಸದ ರಾಶಿ ತಂಬಿದ್ದು, ಗಬ್ಬು ನಾರುತ್ತಿದೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸಭೆಯಲ್ಲಿ ಹಾಗೂ ಆರೋಗ್ಯ ಕೇಂದ್ರದಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಕಸದ ಸಮಸ್ಯೆಯ ಬಗ್ಗೆ ಒತ್ತಾಯಿಸುತ್ತಾ ಬಂದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಸಭೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಮಣಿ ಉತ್ತಪ್ಪ ತಿಳಿಸಿದರು. ಎಲ್ಲ ಜನಪ್ರತಿನಿಧಿಗಳು ರಾಜಕೀಯ ಬಿಟ್ಟು ಕಸದ ಸಮಸ್ಯೆಗೆ ಶಾಶ್ವತ ಪ್ರರಿಹಾರ ಕಂಡುಕೊಳ್ಳ ಬಹುದಾಗಿದೆ ಎಂದರು. ಚೆಟ್ಟಳ್ಳಿ ಸಹಕಾರ ಸಂಘದ ಉಪಾದ್ಯಕ್ಷ ಹೆಚ್.ಎಸ್. ತಿಮ್ಮಪ್ಪಯ್ಯ ಮಾತನಾಡಿ, ಚೆಟ್ಟಳ್ಳಿ ಪಟ್ಟಣವು ಕಸದ ಸಮಸ್ಯೆಯಿಂದ ಗಬ್ಬೆದ್ದು ಹೋಗಿದ್ದಲ್ಲದೆ ನೆರೆಯ ಊರಾದ ಬಕ್ಕಾದಲ್ಲಿ ಸುರಿದು ಪರಿಸರವನ್ನು ಹಾಳುಮಾಡಿದ್ದಾರೆಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಗ್ರಾಮಸ್ಥರನ್ನು ಸೇರಿಸಿ ಹೋರಾಟ ಮಾಡುವದಾಗಿ ಸುಳಿವು ನೀಡಿದರಯ.
ಕಸದ ಸಮಸ್ಯೆ ನಿವಾರಣೆಗೆ ಪ್ಲಾಸ್ಟಿಕ್ ನಿಷೇಧ ಮಾಡುವದು, ಕಸದ ವಿಂಗಡಣೆ ಮಾಡಬೇಕು, ಕಸವನ್ನು ಸುಡುವ ವ್ಯವಸ್ಥೆಯನ್ನು ಸರಿಯಾಗಿ ಮಾಡುತ್ತಿಲ್ಲವೆಂದು ಸ್ಥಳೀಯರಾದ ಬಿದ್ದಂಡ ಮಾದಯ್ಯ ತಿಳಿಸಿದರು. ಚೆಟ್ಟಳ್ಳಿ ಕಸದ ಸಮಸ್ಯೆ ಇದೆ. ಜೊತೆಗೆ ಡಿ ಗ್ರೂಪ್ ನೌಕರರ ಕೊರತೆÉ ಇದೆ. ಆದರೆ ಸಾರ್ವಜನಿಕರು ಪಂಚಾಯಿತಿ ಯನ್ನೇ ದೂರುವ ಬದಲು ಸಹಕಾರ ಇದ್ದರೆ ಮಾತ್ರ ಗ್ರಾಮಗಳ ಶುಚಿತ್ವ ಸಾಧ್ಯವೆಂದು ಪಂಚಾಯಿತಿ ಕಾರ್ಯದರ್ಶಿ ಮಂಜುಳ ತಿಳಿಸಿದರು.
ಚೆಟ್ಟಳ್ಳಿ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ವತ್ಸಲ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಪಶು ವೈದ್ಯಾಧಿಕಾರಿ ಡಾ. ಸಂಜೀವ ಕುಮಾರ್ ಸಿಂಧೆ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಧೈವಾದೀನರಾದ ಕೇಂದ್ರ ಸಚಿವ ಅನಂತ್‍ಕುಮಾರ್ ಆತ್ಮಕ್ಕೆ ಶಾಂತಿಕೋರಿ ಮೌನಾಚರಿಸಲಾಯಿತು.
ತೋಟಗಾರಿಕೆ, ಕೃಷಿ, ಪಶುಪಾಲನೆ, ಆರೋಗ್ಯ ಇಲಾಖಾಧಿ ಕಾರಿಗಳು ಸೌಲಭ್ಯದ ಮಾಹಿತಿ ನೀಡಿದರು. ಕಂದಾಯ ಇಲಾಖೆಯ ಬಗ್ಗೆ ಗ್ರಾಮ ಲೆಕ್ಕಿಗರಾದ ಲಾವಣ್ಯ ಮಾತನಾಡಿ, ಪಿಂಚಣಿ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಚೆಟ್ಟಳ್ಳಿ ಗ್ರಾಮಪಂಚಾಯಿತಿಯಲ್ಲಿ ವಾರಕ್ಕೊಂದು ಬಾರಿ ಗ್ರಾಮಲೆಕ್ಕಿಗರು ಹಾಜರಿರಬೇಕು ಹಾಗೂ ಆರ್‍ಟಿಸಿ ಯಲ್ಲಿ ಬೆಳೆಯನ್ನು ನಮೂದಿಸ ಬೇಕೆಂದು ಮಣಿ ಉತ್ತಪ್ಪ ಹಾಗೂ ರತ್ತು ಚಂಗಪ್ಪ ಒತ್ತಾಯಿಸಿದರು. ಅರಣ್ಯ ಇಲಾಖೆ ಆನೆ ತಡೆಗೆ ಚರಂಡಿ ತೆಗೆಯುತ್ತಿದ್ದರೂ ಅಲ್ಲಿ ಕಸ ಸುರಿಯುತ್ತಿದ್ದಾರೆ. ಅವರನ್ನು ಪತ್ತೆ ಹಚ್ಚಲು ಸಿಸಿ ಕ್ಯಾಮರ ಹಾಗೂ ಸಿಬ್ಬಂದಿಗಳು ಕಾವಲು ಕಾದು ಸೂಕ್ತ ಕ್ರಮ ಕೈಗೊಳ್ಳಬೇಕು. ನಾಮಫಲಕವನ್ನು ನಾವೇ ಹಾಕಿಕೊಡುತ್ತೇವೆಂದು ಸ್ಥಳೀಯರಾದ ಪೇರಿಯನ ಉದಯ ತಿಳಿಸಿದರು. ಚೆಟ್ಟಳ್ಳಿ ಹೆಡ್‍ಕಾನ್ಸ್‍ಸ್ಟೇಬಲ್ ಪ್ರಕಾಶ್ ರಸ್ತೆ ನಿಯಮ ಪಾಲನೆಯ ಬಗ್ಗೆ ಮಾತನಾಡಿದರು.
ಕಳೆದ ಮೂರು-ನಾಲ್ಕು ತಿಂಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಪುತ್ತರಿರ ಐನ್‍ಮನೆಗೆ ಹೋಗುವ ರಸ್ತೆ ಹಾಳಾಗಿದ್ದು, ಜೊತೆಗೆ ಚರಂಡಿ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಪುತ್ತರಿರ ಕರುಣ್ ಕಾಳಯ್ಯ ಒತ್ತಾಯಿಸಿದರು.
ರೇಷನ್ ಕಾರ್ಡ್ ಪ್ರತಿಗಾಗಿ ಪ್ರತಿಯೊಬ್ಬರಿಂದ ರೂ. 50 ವಸೂಲಿಯಾಗಿದ್ದು, ಹಣದ ದುರ್ಬಳಕೆ ಬಗ್ಗೆ ಆರೋಪ ಕೇಳಿಬಂತು. ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಮಾತನಾಡಿ, ಪ್ರಕೃತಿ ವಿಕೋಪದಿಂದ ಈ ಹಿಂದೆ ಕೈಗೊಂಡ ಕಾಮಗಾರಿಗಳು ನಡೆಯದಿದ್ದು, ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಚರ್ಚಿಸಲಾಗಿ ರಸ್ತೆ, ತಡೆಗೋಡೆ, ತಂಗುದಾಣ, ಹಾಸ್ಟೇಲ್ ಮುಂತಾದ ಹಲವು ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಮಾಡಲಾಗಿದೆ ಎಂದರು.
ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಕಾಮಗಾರಿಗಳಿಗೆ ಬಿಡುಗಡೆಯಾದ ಹಣವೆಲ್ಲ ಪ್ರಕೃತಿ ವಿಕೋಪದಿಂದ ತೊಂದರೆಗೊಳಗಾದ 6 ಗ್ರಾಮಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ನಮಗೆ ಬರುವ ಅಲ್ಪ ಅನುದಾನದಲ್ಲಿ ಮಿಠಾಯಿಯಂತೆ ಹಂಚ ಬೇಕಾಗಿದೆ ಎಂದರು.
ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಂಚಾಯಿತಿ ಅಧ್ಯಕ್ಷೆ ವತ್ಸಲ ಮಾತನಾಡಿ, ಚೆಟ್ಟಳ್ಳಿ ಪಂಚಾಯಿತಿಗೆ ಒಳಪಡುವ ಬಕ್ಕ - ಬೇರೆಂಗಿಯಲ್ಲಿ 7 ಎಕರೆ ಜಾಗವನ್ನು ಕಸ ವಿಲೇವಾರಿಗೆ ಗುರಿತಿಸಲಾಗಿದೆ. ಪಂಚಾಯಿತಿ ಹೆಸರಿಗೆ ಮಾಡಲಾಗಿದೆ. ಕಳೆದ ವರ್ಷ ಕಸವನ್ನು ಸುರಿದು ಮಣ್ಣು ಮುಚ್ಚಲಾಗಿದೆ. ಈ ವರ್ಷ ಕಸದ ಹಾಕುವಾಗ ಗ್ರಾಮಸ್ಥರು ತಡೆಯೊಡ್ಡಿದ್ದರಿಂದ ಪೊಲೀಸ್ ಸಮ್ಮುಖದಲ್ಲಿ ಸಮಸ್ಯೆಯನ್ನು ಬಗೆಹರಿಸಲಾಯಿತು. ಜೊತೆಗೆ ಹಾಳಾಗಿರುವ ರಸ್ತೆಯನ್ನು ತಾತ್ಕಾಲಿಕ ವಾಗಿ ಸರಿಪಡಿಸಲು ತೀರ್ಮಾನಿಸ ಲಾಗಿದೆ ಎಂದು ತಿಳಿಸಿದರು.
ಗ್ರಾಮಸ್ಥರು ಗ್ರಾಮದ ಕಾಮಗಾರಿ ಬಗ್ಗೆ ಮನವಿ ಸಲ್ಲಿಸಿದರು. ಸಭೆಯಲ್ಲಿ ಪಂಚಾಯಿತಿ ಸದಸ್ಯರು, ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಇತರರು ಉಪಸ್ಥಿತರಿದ್ದರು. ಪಂಚಾಯಿತಿ ಸಿಬ್ಬಂದಿ ಪ್ರಶಾಂತ್ ಪ್ರಾರ್ಥಿಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಸ್ವಾಗತಿಸಿ, ಕಾರ್ಯದರ್ಶಿ ಮಂಜುಳ ವಂದಿಸಿದರು.
- ಪುತ್ತರಿರ ಕರುಣ್ ಕಾಳಯ್ಯ