ಸ್ವಾತಂತ್ರ್ಯ ಸ್ವಾಭಿಮಾನಕ್ಕಾಗಿ ಹೋರಾಡಿದ ಬಿರ್ಸಾಮುಂಡ ಮರೆಯಾಗಿ 110 ವರ್ಷಗಳೇ ಸಂದರೂ ಆತನ ತತ್ವ- ಆದರ್ಶಗಳು ಮರೆಯಾಗಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾಯಿತು. ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ತಲಾದಾಯ ಎಲ್ಲದರಲ್ಲೂ ಮಹತ್ತರ ಸಾಧನೆ ಮಾಡಿದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಘೋಷಿಸಿಕೊಂಡಿದೆ. ಬಾಬರನಿಂದ ಆರಂಭವಾಗಿ ಒಬಾಮನ ತನಕ ಅಭಿವೃದ್ಧಿಯ ಹೆಸರಿನಲ್ಲಿ ಭಾರತಕ್ಕೆ ಬಂದು ಹೋದರು. ಆದರೆ ಈ ದೇಶದ ಆದಿವಾಸಿಗಳ ಬದುಕಿನಲ್ಲಿ ಮಾತ್ರ ಕಿಂಚಿತ್ತೂ ಬದಲಾವಣೆಗಳಾಗಿಲ್ಲ. ಅವರ ಶೋಷಕರ ಸ್ಥಾನದಲ್ಲಿ ಬ್ರಿಟಿಷ್ ಬದಲಾಗಿ ಭಾರತೀಯ ನಾಯಕರುಗಳು ಬಂದಿದ್ದಾರೆ. ಅವರು ವಾಸಿಸುವ ಕಾಡುಗಳು ಇನ್ನೂ ಸರ್ಕಾರದ ಸ್ವತ್ತೇ ಆಗಿದೆ. ಅರಣ್ಯ ಕಾಯಿದೆ 2006 ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಹಂತಕ್ಕೆ ತಲಪಿದೆ. ಆದಿವಾಸಿ ಜನರ ಬದುಕು ಅಂದು ಎಷ್ಟು ಅತಂತ್ರವಾಗಿತ್ತೋ ಇಂದಿಗೂ ಅಷ್ಟೇ ಅತಂತ್ರವಾಗಿ ಮುಂದು ವರೆದಿದೆ. ನೂರಾರು ವರ್ಷಗಳ ಹಿಂದೆ ಅವರು ಕೈಗೆತ್ತಿಕೊಂಡ ಬಿಲ್ಲು ಬಾಣಗಳನ್ನು ಅವರಿನ್ನೂ ಕೆಳಗಿಟ್ಟಿಲ್ಲ. ಆದರೆ ಅವರ ಹೃದಯದಲ್ಲಿರುವ ಆಕ್ರೋಶ ಮಾತ್ರ ಹೆಚ್ಚಾಗುತ್ತಲೇ ಹೋಗುತ್ತಿದೆ. ಸಮುದಾಯದಲ್ಲಿ ಸ್ವಾಭಿಮಾನದ ಕಿಚ್ಚನ್ನು ಬಿರ್ಸಾಮುಂಡನ ಹೋರಾಟವನ್ನು ಮುಂದುವರೆಸುವ ಜೊತೆಗೆ ಬಿರ್ಸಾನ ಜನ್ಮ ದಿನವನ್ನು ಅರ್ಥಪೂರ್ಣವಾಗಿ, ಸಾಕಾರ ಗೊಳಿಸಬೇಕಾಗಿದೆ.

ಜಗತ್ತಿಗೊಬ್ಬನೇ ಬಿರ್ಸಾ ಮುಂಡ (ಜನನ:15 ನವೆಂಬರ್ 1875: ಉಳಿಹಾತು- ಮರಣ,09 ಜೂನ್ 1900, ರಾಂಚಿ ಜೈಲಿ)

ಭಗತ್‍ಸಿಂಗ್ ಹುಟ್ಟುವುದಕ್ಕೂ ಮುನ್ನ ಬ್ರಿಟಿಷ್ ಸಾಮ್ರಾಜ್ಯಕ್ಕೆ ದೊಡ್ಡ ದುಃಸ್ವಪ್ನವಾಗಿದ್ದ ಅವರ ವಿರುದ್ಧ ತನ್ನ ಜನರನ್ನು ಸಂಘಟಿಸಿ ಸಶಸ್ತ್ರ ಹೋರಾಟವನ್ನು ಮಾಡಿದ್ದ, ಆದಿವಾಸಿಗಳ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಆದಿವಾಸಿ ನಾಯಕ ಬಿರ್ಸಾ ಮುಂಡ. ಅದು ಹತ್ತೊಂಬತ್ತನೆ ಶತಮಾನ. ಭಾರತವನ್ನು ಲೂಟಿ ಹೊಡೆಯ ಲೆಂದೇ ಬಂದಿದ್ದ ಬ್ರಿಟಿಷರು ಅಪಾರ ಸಂಪತ್ತಿನ ಬೀಡಾಗಿದ್ದ ಭಾರತದ ಮಧ್ಯಭಾಗದಲ್ಲಿರುವ ಕಾಡುಗಳ ಮೇಲೆ ತಮ್ಮ ಅಧಿಕಾರ ಸ್ಥಾಪಿಸಲು ಹೊರಟರು. ಆ ಕಾಡುಗಳಲ್ಲಿ ವಾಸಿಸುತ್ತಿದ್ದ ಆ ಕಾಡುಗಳನ್ನು ಪೂಜಿಸುತ್ತಿದ್ದ, ಆ ಕಾಡುಗಳನ್ನು ರಕ್ಷಿಸುತ್ತಿದ್ದ ಆದಿವಾಸಿಗಳು ಇನ್ನು ಮುಂದೆ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುವಂತಿಲ್ಲ ಎಂದರು ಬ್ರಿಟಿಷರು. ಅದೇ ಹೊತ್ತಿಗೆ ಜಾತಿ ವ್ಯವಸ್ಥೆಯಿಂದ ‘ನಾಗರಿಕ ಲೋಭ,ಅಸಮಾನತೆಯಿಂದ ಹೊರತಾಗಿದ್ದ ಆದಿವಾಸಿಗಳನ್ನು ವ್ಯಾಪಾರಸ್ಥರು ಮತ್ತು ಲೇವಾದೇವಿ ಗಾರರು ಸುಲಿಯಲಾ ರಂಭಿಸಿದರು. ಇವೆರಡರ ಮಧ್ಯೆ ಮತಾಂತರಿಗಳು ಮತ್ತು ಧಾರ್ಮಿಕ ಮೂಲಭೂತ ವಾದಿಗಳು ಆದಿವಾಸಿ ಗಳನ್ನು ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳಲು ಹೊಂಚು ಹಾಕುತ್ತಿದ್ದರು. ಹೀಗೆ ತಮ್ಮ ಅಸ್ತಿತ್ವ ತಮ್ಮ ಸಂಸ್ಕøತಿ ಮತ್ತು ಭೇದ ಭಾವ ಎಂಬುದೇ ಗೊತ್ತಿಲ್ಲದಿದ್ದ ತಮ್ಮ ಸೌಹಾರ್ದ ಪರಂಪರೆಯ ಮೇಲೆ ಮೂರು ದಿಕ್ಕುಗಳಿಂದ ದಾಳಿಗಳು ಪ್ರಾರಂಭವಾದಾಗ ಆದಿವಾಸಿಗಳು ವಿವಿಧ ಪ್ರದೇಶಗಳಲ್ಲಿ ವಿವಿಧ ನಾಯಕರ ನೇತೃತ್ವದಲ್ಲಿ ಪ್ರತಿಭಟಿಸ ಲಾರಂಭಿಸಿದ್ದರು. ಅಂತಹ ಸಂದರ್ಭದಲ್ಲಿ ಓರ್ವ ರೈತ ಗುತ್ತಿಗೆದಾರನ ಕುಟುಂಬದಲ್ಲಿ ಸುಗನ ಮುಂಡಾ ಮತ್ತು ಕರ್ಮಿಹಾತು ಮಗನಾಗಿ ಬಿರ್ಸಾಮುಂಡ ಜನಿಸಿದ.

ಬಡತನದ ಅಸಹಾಯಕತೆಯಿಂದ ಬಿರ್ಸಾನ ತಂದೆ ತನ್ನ ಇಡೀ ಕುಟುಂಬವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಿದ್ದ. ಈ ಕಾರಣಕ್ಕೆ ಬಿರ್ಸಾನಿಗೆ ಪ್ರಾಥಮಿಕ ಶಾಲೆ ಕ್ರಿಶ್ಚಿಯನ್‍ರು ನಡೆಸುತ್ತಿದ್ದ ಶಾಲೆಗಳಲ್ಲಿ ವಿದ್ಯೆ ಪಡೆಯುವ ಅವಕಾಶ ಸಿಕ್ಕಿತು. ಕ್ರಿಶ್ಚಿಯನ್ನನಾಗಿದ್ದಾಗ ದೌದ್ ಪುರ್ತಿ ಎಂದು ಮರು ನಾಮಕರಣ ಮಾಡಲಾಗಿತ್ತು. ಆಗ ಬಿರ್ಸಾನಿಗೆ 13 ವರ್ಷ ವಯಸ್ಸೂ ಆಗಿರಲಿಲ್ಲ. ಧರ್ಮ ಪ್ರಚಾರಕರು ತಮ್ಮ ಧರ್ಮದ ಶ್ರೇಷ್ಠತೆಯನ್ನು ಕೊಂಡಾಡುತ್ತಲೇ ಆದಿವಾಸಿಗಳ ಸಂಸ್ಕøತಿಯನ್ನು ಹೀಗಳೆಯುವದರ ವಿರುದ್ಧ ಆಗಲೇ ಆತ ಆಕ್ರೋಶಗೊಂಡಿದ್ದ ಮತ್ತೊಂ ದೆಡೆ ಬಿಳಿಯರ ಕಾನೂನುಗಳು ಮತ್ತು ವ್ಯಾಪಾರಸ್ಥರ ಕಪಟ ತನದ ನಡುವೆ ತನ್ನ ಜನ ತಮ್ಮ ಭೂಮಿಗಳನ್ನೇ ಕಳೆದುಕೊಂಡು ದಿನಗೂಲಿ ಗಳಾಗುತ್ತಿರುವದನ್ನು ನೋಡಿ ಆತಂಕ ಗೊಂಡಿದ್ದ ಇದೆಲ್ಲ ದರ ಮಧ್ಯೆ ಬ್ರಿಟಿಷರ ವಿರುದ್ಧ ಆದಿವಾಸಿಗಳು ದಂಗೆ ಏಳಲಾರಂಭಿಸಿದ್ದರು.

ಬಿರ್ಸಾ ಮತ್ತು ಆತನ ಇಡೀ ಕುಟುಂಬ ಕ್ರಿಶ್ಚಿಯನ್ ಧರ್ಮವನ್ನು ತಿರಸ್ಕರಿಸಿ ತಮ್ಮ ಆದಿವಾಸಿ ಸಂಸ್ಕøತಿಗೆ ಹಿಂದಿರುಗಿತು. ಅಷ್ಟೊತ್ತಿಗೆ ಬಿರ್ಸಾ 17 ವರ್ಷ ವಯಸ್ಸಿನ ಯುವಕನಾಗಿದ್ದ. ಓರ್ವ ಆದಿವಾಸಿ ಹುಡುಗಿಯನ್ನು ಪ್ರೇಮಿಸಿ ಅವಳನ್ನು ಮದುವೆ ಆಗುವದಾಗಿ ಆಕೆಯ ತಂದೆ ತಾಯಿಗೆ ಹೇಳಿ ನಿಶ್ಚಿತಾರ್ಥವನ್ನು ಮಾಡಿಕೊಂಡ. ಇದೆಲ್ಲಕ್ಕಿಂತ ಮುಖ್ಯವಾಗಿ ಬಿರ್ಸಾ ತನ್ನ ಆದಿವಾಸಿ ಸಮುದಾಯದಲ್ಲಿ ಸಾಮಾಜಿಕ ನ್ಯಾಯ ಪುನರುಜ್ಜೀವನದ ಮತ್ತು ಧಾರ್ಮಿಕ ಬದಲಾವಣೆಗಳನ್ನು ತರಲು ಯತ್ನಿಸಿದ. ಆದಿವಾಸಿಗಳ ಸಂಕೇತಗಳನ್ನೇ ಉಪಯೋಗಿಸಿ ಕೊಂಡು ಅವರಲ್ಲಿ ಮತ್ತೆ ಸ್ವಾಭಿಮಾನ ಮೂಡುವಂತೆ ಮಾಡಿದ.ಈ ಮಧ್ಯೆ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಮತ್ತು ಆದಿವಾಸಿಗಳಲ್ಲಿ ಹೊಸ ಚೈತನ್ಯವನ್ನು ಮೂಡಿಸಲಿಕ್ಕೆ ಎಂಬ ಕಾರಣ ದಿಂದಲೋ ಏನೋ ಬಿರ್ಸಾ ದೇವರ ಅವತಾರವೆಂದು ಘೋಷಿಸಿಕೊಂಡ ತನ್ನ ಈ ಅವತಾರದಲ್ಲಿ ಆತ ಘೋಷಿಸಿದ ಹೊಸ ಧರ್ಮದಲ್ಲಿ ಪ್ರಕೃತಿಯ ದೇವರೆಂದು ಸಮಾನ ಸಮಾಜವೇ ನೀತಿಯೆಂದು; ಸುಳ್ಳು, ವ್ಯಭಿಚಾರ, ಕಳ್ಳತನ, ಭಿಕ್ಷಾಟನ, ಸ್ವಾರ್ಥಗಳು ನಿಷೇಧ ಎಂದು ಘೋಷಿಸಿದ.

ಆತನ ಈ ಹೊಸ ಧರ್ಮದ ಎಲ್ಲಾ ನೀತಿಗಳು ಆದಿವಾಸಿಗಳ ಸಂಸ್ಕøತಿಯೊಂದಿಗೆ ಬೆಸೆದುಕೊಂಡಿ ದ್ದರಿಂದ ಬಹಳ ಬೇಗ ಬಿರ್ಸಾ ಜನಪ್ರಿಯತೆ ಪಡೆದ ಆತನನ್ನು ‘ದೇವಮಾನವ’ ಎಂದೂ ‘ಧರ್ತಿ ಅಬ್ಬಾ’ (ಭೂಮಿಯ ತಂದೆ) ಎಂದೂ ಜನ ಕೊಂಡಾಡಲಾರಂಭಿಸಿದರು. ಎಲ್ಲ ‘ದೇವ ಮಾನವರ’ ಸುತ್ತ ಆಗುವಂತೆ ಬಿರ್ಸಾನ ಸುತ್ತಲೂ ಇತರೆ ಬುಡಕಟ್ಟು ಸಮುದಾಯಗಳೂ ಆತನ ಹಿಂಬಾಲಕರಾದರು. 1893-94 ರಲ್ಲಿ ಬ್ರಿಟಿಷ್ ಸರ್ಕಾರ ಎಲ್ಲಾ ಕಾಡುಗಳನ್ನು ಮತ್ತು ಅವುಗಳಲ್ಲಿದ್ದ ಹಳ್ಳಿಗಳನ್ನು ರಕ್ಷಿತ ಅರಣ್ಯ ಎಂದು ಘೋಷಿಸಿತು. ಆ ಮೂಲಕ ಆದಿವಾಸಿಗಳ ಎಲ್ಲಾ ಹಕ್ಕುಗಳನ್ನು ಕಿತ್ತುಕೊಂಡಿತು. ಬ್ರಿಟಿಷರ ಈ ನೀತಿಯ ವಿರುದ್ಧ ಬಿರ್ಸಾ ತನ್ನ ಜನಪ್ರಿಯತೆಯನ್ನೇ ಸ್ವಾತಂತ್ರ್ಯ ಸಂಗ್ರಾಮವಾಗಿ ರೂಪಿಸುವಲ್ಲಿ ಯಶಸ್ವಿಯಾದ ಬ್ರಿಟಿಷರಿಂದ, ಭೂಮಾಲೀಕರಿಂದ ಮತ್ತು ವ್ಯಾಪಾರಸ್ಥರಿಂದ ಬಿಡುಗಡೆಯ ಹೋರಾಟಕ್ಕೆ ತನ್ನ ಜನರನ್ನು ಸಜ್ಜುಗೊಳಿಸಿದ 1894ರ ಅಕ್ಟೋಬರ್ 1 ರಂದು ಚೋಟಾ ನಾಗ್ಪುರ ಎಂಬಲ್ಲಿಗೆ ಬೃಹತ್ ಮೆರವಣಿಗೆಗೆ ಕರೆ ನೀಡಿದ. ‘ಉಳುವವನೇ ಭೂಮಿಯ ಒಡೆಯನಾಗಬೇಕು’ ಮಹಾರಾಣಿಯ ಆಡಳಿತವನ್ನು ಕಿತ್ತು ಹಾಕಿ ಜನತಾ ಆಡಳಿತವನ್ನು ಸ್ಥಾಪಿಸಬೇಕು’ ಎಂಬ ಎರಡು ಉದ್ದೇಶಗಳು ಈ ಮೆರವಣಿಗೆಯ ಪ್ರಮುಖ ಅಂಶಗಳಾಗಿದ್ದವು. ಬಿರ್ಸಾನ ಕರೆಗೆ ಆದಿವಾಸಿಗಳು ಸ್ಪಂಧಿಸಿ ಮೆರವಣಿಗೆ ಯಶಸ್ವಿಯಾಯಿತು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಬಿರ್ಸಾನ ಜನಪ್ರಿಯತೆಯನ್ನು ಕಂಡು ಬ್ರಿಟಿಷರು ಕಂಗಾಲಾದರು. ಕೂಡಲೇ ಆತನನ್ನು ಬಂಧಿಸಿ ಹಜಿರಾಬಾದ್ ಜೈಲಿಗೆ ಹಾಕಿದರು..ಎರಡು ವರ್ಷಗಳನ್ನು ಕಳೆದ ಬಿರ್ಸಾ ಹೊರಬರುತ್ತಿದ್ದಂತೆ ತನ್ನ ಚಳವಳಿಯ ರೂಪವನ್ನೇ ಬದಲಾಯಿಸಿದ ಬಿಡುಗಡೆಯ ನಂತರ ಭೂಗತನಾದ ಬಿರ್ಸಾ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟವನ್ನು ಪ್ರಾರಂಭಿಸಿದ.

ಬ್ರಿಟಿಷರ ಕಚೇರಿ ಕಟ್ಟಡಗಳ ಮೇಲೆ ಅವರನ್ನು ಬೆಂಬಲಿಸುತ್ತಿದ್ದ ಜನರ ಮೇಲೆ ಮತ್ತು ಪೊಲೀಸರ ತಂಡಗಳ ಮೇಲೆ ಬಿರ್ಸಾನ ಆದಿವಾಸಿಗಳ ಗೆರಿಲ್ಲಾ, ಸೈನ್ಯ, ಧಾಳಿ ಮಾಡಿತ್ತು. ನೂರಾರು ಪೊಲೀಸರನ್ನು ಕೊಂದು ಹಾಕಿತ್ತು. ಒಮ್ಮೆ ರಾಂಚಿ ಮತ್ತು ಖುಂತಿ ಎಂಬಲ್ಲಿ ಸುಮಾರು ನೂರು ಕಟ್ಟಡಗಳನ್ನು ಭಸ್ಮ ಮಾಡಿತು. ಬಿರ್ಸಾನನ್ನು ಹಿಡಿದುಕೊಟ್ಟವರಿಗೆ ಐನೂರು ರೂಪಾಯಿಗಳ ನಗದು ಬಹುಮಾನವನ್ನು ಬ್ರಿಟಿಷ್ ಸರ್ಕಾರ ಘೋಷಿಸಿತು. ಛೋಟಾ ನಾಗ್ಪುರ್ ಸುತ್ತಲಿನ 550 ಚದುರ ಮೈಲಿ ಪ್ರದೇಶದಲ್ಲಿ ಆತನ ಹೋರಾಟ ಹಬ್ಬಿತ್ತು. 1899ರಲ್ಲಿ ಬಿರ್ಸಾ ತನ್ನ ಬಂಡಾಯವನ್ನು ಮತ್ತಷ್ಟು ತೀವ್ರಗೊಳಿಸಿದ. ಖುಂತಿ ಒಮರ್, ಬಸಿಯಾ, ರಾಂಚಿ ಇತ್ಯಾದಿ ಕಡೆಗಳಲ್ಲಿ ಪೊಲೀಸ್ ಠಾಣೆಗಳ ಮೇಲೆ ದಾಳಿಗಳು ನಡೆದವು. ಎಂಟು ಪೊಲೀಸರು. ಕೊಲ್ಲಲ್ಪಟ್ಟು 32 ಜನ ಪರಾರಿಯಾದರು. ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಬಿಳಿಯರು ತಮ್ಮ ಪ್ರಾಣಕ್ಕೆ ಹೆದರಿ ಅಲ್ಲಿಂದ ಓಡಿ ಹೋದರು. 89 ಭೂಮಾಲೀಕರ ಮನೆಗಳು ಬೂದಿಯಾದವು ಚರ್ಚ್ ಮತ್ತು ಬ್ರಿಟಿಷರ ಆಸ್ತಿಗಳಿಗೆ ಬೆಂಕಿ ಬಿದ್ದವು. ಆದಿವಾಸಿಗಳ ದಂಗೆ ಎಷ್ಟು ತೀವ್ರಗೊಂಡಿತ್ತೆಂದರೆ ರಾಂಚಿಯ ಜಿಲ್ಲಾಧಿಕಾರಿಗೆ ಅದನ್ನು ತಡೆಯಲಾಗದೆ ಕೊನೆಗೆ ಸೈನ್ಯಕ್ಕೆ ಬರಹೇಳಿದ 1900ರ ಜನವರಿಯಲ್ಲಿ ಬಿರ್ಸಾ ತನ್ನ ದಂಗೆಯ ಎರಡನೆ ಅಧ್ಯಾಯಕ್ಕೆ ಚಾಲನೆ ನೀಡಿದ. ಈ ಅಧ್ಯಾಯದಲ್ಲಿ ಬ್ರಿಟಿಷರು ಮಾತ್ರವಲ್ಲ ಅವರೊಂದಿಗೆ ಕೈಜೋಡಿಸಿದ್ದ ಲೇವಾದೇವಿಗಾರರು,ಭೂ ಮಾಲೀಕರು,ಕಾಂಟ್ರಾಕ್ಟರುದಾರರೂ ಬಿರ್ಸಾನ ಸೈನ್ಯದ ದಾಳಿಗೆ ಗುರಿಯಾದರೂ ಬಹಳಷ್ಟು ಜನ ಸಾವಿಗೀಡಾದರು. ಲೆಕ್ಕವಿಲ್ಲದಷ್ಟು ಕಟ್ಟಡಗಳು ಧ್ವಂಸಗೊಂಡವು.

ಆದರೆ ಅಷ್ಟು ಹೊತ್ತಿಗೆ ಬ್ರಿಟಿಷರ ಸೈನ್ಯ ರಾಂಚಿನ ಆಗಮಿಸಿತು. ಅವರ ಬಂದೂಕುಗಳ ಮುಂದೆ ಬಿರ್ಸಾನ ಆದಿವಾಸಿಗಳ ಸೈನ್ಯದ ಬಿಲ್ಲು ಬಾಣಗಳು ಯಾವ ಲೆಕ್ಕಕ್ಕೂ ಇರಲಿಲ್ಲ. ದುಂಬಾರಿ ಬೆಟ್ಟದ ಹತ್ತಿರ ಬಿರ್ಸಾ ಮತ್ತು ಬ್ರಿಟಿಷರ ಸೈನ್ಯ ಮುಖಾಮುಖಿ ಆಯಿತು.ಬ್ರಿಟಿಷರ ಬಂದೂಕುಗಳಿಗೆ ನೂರಾರು ಆದಿವಾಸಿಗಳ ಹೆಣಗಳು ಉರುಳಿದವು ದುಂಬಾರಿ ಬೆಟ್ಟದ ಮೇಲೆ ಹೆಣಗಳ ರಾಶಿ ಇತ್ತು. ಈ ಹತ್ಯಾಕಾಂಡದ ನಂತರ ಜನ ಈ ಬೆಟ್ಟವನ್ನು “ಹೆಣಗಳ ಬೆಟ್ಟ’ ಎಂದೂ ಕರೆಯಲಾರಂಭಿಸಿದರು. 1899ರ ಮಾರ್ಚ್‍ನಲ್ಲಿ ಚಕ್ರಧರ್ಪುರ್ ಎಂಬ ಕಾಡಿನಲ್ಲಿ ಬಿರ್ಸಾ ನಿದ್ರಿಸುತ್ತಿದ್ದಾಗ ಆತನನ್ನು ಬ್ರಿಟಿಷರು ಬಂಧಿಸಿದರು. ಬಿರ್ಸಾ ಮತ್ತು ಆತನ 482 ಸಂಗಡಿಗರ ವಿರುದ್ಧ ಕೇಸುಗಳನ್ನು ಜಡಿಯಲಾಯಿತು. ಈ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದಾಗಲೇ ಬಿರ್ಸಾ ಜೈಲಿನಲ್ಲಿ ರಕ್ತ ವಾಂತಿ ಮಾಡಿಕೊಳ್ಳಲಾರಂಭಿಸಿದ 1900ರ ಜೂನ್ 9 ರಂದು ಬಿರ್ಸಾ ಜೈಲಿನಲ್ಲೇ ಕೊನೆಯುಸಿರೆಳೆದ. ಆಗ ಆತನಿಗೆ ಕೇವಲ 25 ವರ್ಷ ವಯಸ್ಸು. ಆದರೆ ಬಿರ್ಸಾ ಇವತ್ತಿಗೂ ಆದಿವಾಸಿಗಳಲ್ಲಿ ಜೀವಂತ ವಾಗಿದ್ದಾನೆ. ವಿಪರ್ಯಾಸವೆಂದರೆ 110 ವರ್ಷಗಳ ಹಿಂದೆ ಬ್ರಿಟಿಷರು ಬಿರ್ಸಾನನ್ನು ಕೊಂದರು. ಇವತ್ತು ಬಿರ್ಸಾನ ಅನುಯಾಯಿಗಳಾದ ಆದಿವಾಸಿಗಳನ್ನು ಕೊಲ್ಲುವ ಮೂಲಕ ಸರ್ಕಾರ ಬಿರ್ಸಾ ಬಿತ್ತ ಕನಸ್ಸನ್ನೂ ಕೊಲ್ಲಲು ಹೊರಟಿದೆ.

ಇಂದು ಆದಿವಾಸಿಗಳಿಗೆ ಬೇಕಾಗಿರುವದು ಸರ್ಕಾರ ವಿತರಿಸಲಿರುವ ಪ್ಯಾಕೇಜ್ ಆಗಲಿ, ಸೀರೆ ಪಂಚೆಯಾಗಲಿ, ದೌರ್ಜನ್ಯ ಕ್ಕೊಳಗಾದವರಿಗೆ ಸಂತಾಪವಾಗಲಿ ಅಲ್ಲ ನಾವುಗಳು ಸ್ವತಂತ್ರವಾಗಿ, ಸ್ವಾಭಿಮಾನಿಗಳಾಗಿ, ಸ್ವಾಯತ್ತತೆ ಯಿಂದ ಬದುಕುವದಕ್ಕೆ ಪ್ರಕೃತಿಯೇ ನೀಡಿರುವ ಹಕ್ಕುಗಳು ಮಾನ್ಯವಾಗ ಬೇಕು. ಶತಮಾನಗಳಿಂದ ನಡೆದ ನಿರಂತರ ದೌರ್ಜನ್ಯ, ಶೋಷಣೆಗಳು ಕೊನೆಗೊಳ್ಳಬೇಕು. ನೆಲ ಜಲ, ಕಾಡು ಮತ್ತು ಜೀವ ವೈವಿಧ್ಯತೆಗಳು ಹಕ್ಕಿನದ್ದಾಗಿದ್ದು ಅದನ್ನು ಆಳ್ವಿಕೆ ಮಾಡುವಂತಾಗ ಬೇಕು. ಅದಕ್ಕಾಗಿ ಆದಿವಾಸಿ ಸಂಘಟಿತರಾಗಬೇಕು. ಸಮುದಾಯಕ್ಕೆ ಹಕ್ಕುಗಳ ಅರಿವು ಮೂಡಿಸಿ ತನ್ನ ಕರ್ತವ್ಯ ಮುಗಿಸಿ, ಅಜ್ಞಾತವಾಗಿ ಮರೆಯಾದ ಸಿರಿಗಂಧದ ಬೇರು ಬಿರ್ಸಾ ಮತ್ತೆ ಮತ್ತೆ ಹುಟ್ಟಿ ಬಾ............ ಮರಳಿ ಬಾ..........

- ಹೆಚ್.ಕೆ. ಜಗದೀಶ್